ಕಾಂಗ್ರೆಸ್ ಪಕ್ಷ ಕಾರ್ಮಿಕರ ಬೆಂಬಲಕ್ಕೆ ಸದಾ ನಿಲ್ಲಲಿದೆ: ಡಿ.ಕೆ.ಶಿವಕುಮಾರ್

Update: 2020-08-10 12:50 GMT

ಬೆಂಗಳೂರು, ಆ.10: ಕಾರ್ಮಿಕರ ಬದುಕು ಉಳಿಸಲು ಎಲ್ಲ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು, ಸರಕಾರ ಕೋವಿಡ್ ಪಿಡುಗಿನ ಪರಿಸ್ಥಿತಿಯಲ್ಲಿ ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕು. ಕಾಂಗ್ರೆಸ್ ಪಕ್ಷ ಸದಾ ಕಾರ್ಮಿಕರ ಬೆಂಬಲಕ್ಕೆ ನಿಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಹಮ್ಮಿಕೊಂಡಿದ್ದ 'ಭಾರತ ರಕ್ಷಿಸಿ' ಆಂದೋಲನ ಸ್ಥಳಕ್ಕೆ ಭೇಟಿ ನೀಡಿ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.

'ದೇಶವನ್ನು ರಕ್ಷಿಸಲು ಇಂದು ಎಲ್ಲ ಕಾರ್ಮಿಕ ಸಂಘಟನೆಗಳು ಒಂದಾಗಿ ಹೋರಾಟಕ್ಕೆ ನಿಂತಿವೆ. ಇಂದು ದೇಶ ಉಳಿಯಬೇಕಾಗಿದೆ. ಜೀವ ಇದ್ದರೆ ಜೀವನ. ಸ್ವಾತಂತ್ರ್ಯ ಬಂದ ನಂತರ ಅನೇಕ ಕಾನೂನುಗಳನ್ನು ತಿದ್ದುಪಡಿ ಮಾಡಿಕೊಂಡು ದೇಶ ನಡೆಸಿಕೊಂಡು ಬಂದಿದ್ದೇವೆ. ಈ ಹಿಂದೆ ಕಾನೂನು ತಿದ್ದುಪಡಿ ಮಾಡಬೇಕಾದರೆ ಅನೇಕ ಹೋರಾಟ ಸಂಘಟನೆಗಳ ಜತೆ ಚರ್ಚೆ ಮಾಡಿ ತಿದ್ದುಪಡಿ ಮಾಡಲಾಗುತ್ತಿತ್ತು ಎಂದು ಅವರು ಹೇಳಿದರು.

ಇವತ್ತು ಅಸಂಘಟಿತ ಕಾರ್ಮಿಕರು, ರೈತರು, ಕೈಗಾರಿಕೆಗಳ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಕಾರ್ಮಿಕರು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವುದೇ ಸರಕಾರ ಅಥವಾ ಸಂಸ್ಥೆ ಸರಿಯಾಗಿ ನಡೆಯಬೇಕಾದರೆ ತಳಮಟ್ಟದಿಂದ ಮೇಲ್ಮಟ್ಟದ ವರೆಗೂ ಸಂಘಟಿತವಾಗಿ ಕೆಲಸ ಮಾಡಬೇಕು ಎಂದು ಶಿವಕುಮಾರ್ ತಿಳಿಸಿದರು.

ಕೇಂದ್ರ ಸರಕಾರ ಕೋವಿಡ್ ನಿರ್ವಹಣೆಗೆ 20 ಲಕ್ಷ ಕೋಟಿ ರೂ.ಪ್ಯಾಕೇಜ್ ಘೋಷಣೆ ಮಾಡಿದೆ. ರಾಜ್ಯ ಸರಕಾರ 1610 ಕೋಟಿ ರೂ.ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಇದರಲ್ಲಿ ಶೇ.10 ರಿಂದ 15 ರಷ್ಟು ಫಲಾನುಭವಿಗಳಿಗೆ ಮಾತ್ರ ಹಣ ತಲುಪಿದೆ. ಸರಕಾರ ತನ್ನ ಮಾತನ್ನು ಉಳಿಸಿಕೊಂಡು ಇವರಿಗೆ ನೆರವಾಗಬೇಕು ಎಂದು ಅವರು ಆಗ್ರಹಿಸಿದರು. ಇಂದು ಕಾರ್ಮಿಕರು ತಮ್ಮ ಬದುಕು ಉಳಿಸಿಕೊಳ್ಳಲು ಇಂದು ಒಟ್ಟಾಗಿ ಹೋರಾಟಕ್ಕೆ ನಿಂತಿವೆ. ಕಾರ್ಮಿಕರ ಹಿತ ಕಾಯಲು ಹಾಗೂ ಕಾರ್ಮಿಕರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸದಾ ಬೆಂಬಲ ನೀಡುತ್ತದೆ. ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಿರುವ ಎಲ್ಲ ಸಂಘಟನೆಗಳಿಗೆ ಶುಭವಾಗಲಿ ಎಂದು ಶಿವಕುಮಾರ್ ಹೇಳಿದರು.

ನಾವು ಉಳುವವನೆ ಭೂಮಿಯ ಒಡೆಯ ಎಂದು ಭೂಮಿಯನ್ನು ರೈತರಿಗೆ ಹಂಚಿದೆವು. ಆದರೆ ಇಂದು ಅದೇ ಭೂಮಿಯನ್ನು ಕಸಿದುಕೊಳ್ಳಲು ಸರಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುತ್ತಿದೆ. ಜತೆಗೆ ಕಾರ್ಮಿಕರ ಹಿತಕ್ಕೆ ಮಾರಕವಾಗಿರುವ ಕಾರ್ಮಿಕ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಕಾರ್ಮಿಕ ಕಾಯ್ದೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಇಂದು ಯಾವುದೇ ಕಾರ್ಖಾನೆ, ಕೈಗಾರಿಕೆಗಳು ಕೇಳದಿದ್ದರೂ ಸರಕಾರ ಕಾರ್ಮಿಕ ಕಾಯ್ದೆ ತಿದ್ದುಪಡಿ ತಂದಿದೆ. ಇದರ ವಿರುದ್ಧ ಎಲ್ಲರೂ ಹೋರಾಟ ಮಾಡೋಣ ಕಾಂಗ್ರೆಸ್ ಪಕ್ಷ ನಿಮ್ಮ ಜತೆ ನಿಲ್ಲಲಿದೆ ಎಂದು ಶಿವಕುಮಾರ್ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News