ಆ.20ರಂದು ಎಲ್ಲ ಜಿಲ್ಲಾ- ತಾಲೂಕು ಕೇಂದ್ರಗಳಲ್ಲಿ ‘ಜನ ಧ್ವನಿ’ ಕಾರ್ಯಕ್ರಮ: ಡಿ.ಕೆ.ಶಿವಕುಮಾರ್

Update: 2020-08-10 14:54 GMT

ಬೆಂಗಳೂರು, ಆ.10: ರಾಜ್ಯ ಸರಕಾರ ಸುಗ್ರೀವಾಜ್ಞೆ ದುರ್ಬಳಕೆ ಮಾಡಿಕೊಂಡು ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ, ಕೊರೋನ ಭ್ರಷ್ಟಾಚಾರ ಹಾಗೂ ಅತಿವೃಷ್ಟಿ ನಿರ್ವಹಣೆಯಲ್ಲಿ ಸರಕಾರದ ವೈಫಲ್ಯವನ್ನು ಖಂಡಿಸಿ ಆ.20 ರಂದು ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಜನರ ಧ್ವನಿಯನ್ನು ರಾಜ್ಯ ಸರಕಾರಕ್ಕೆ ಮುಟ್ಟಿಸಲು ‘ಜನ ಧ್ವನಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆ.20ರಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನ. ಈ ಇಬ್ಬರು ನಾಯಕರು ಉಳುವವರಿಗೆ ಭೂಮಿ ಸಿಗುವ ಕಾನೂನು ತಂದುಕೊಟ್ಟವರು. ಜನರ ಕಲ್ಯಾಣಕ್ಕಾಗಿ ಭೂಸುಧಾರಣೆ ಕಾಯಿದೆ ಜಾರಿಗೆ ತಂದರು. ಆದರೆ ಇಂದಿನ ಸರಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು ಎಂದು ಸುಗ್ರೀವಾಜ್ಞೆ ಹೊರಡಿಸಿದೆ ಎಂದು ಶಿವಕುಮಾರ್ ತಿಳಿಸಿದರು.

ರೈತರಿಂದ ಭೂಮಿ ಕಸಿದುಕೊಳ್ಳುವುದೂ ಒಂದೇ, ಈ ಕಾಯ್ದೆ ಜಾರಿಗೆ ತಂದಿರುವುದೂ ಒಂದೇ. ರೈತರ ಬಳಿ ಜಮೀನು ಕಬಳಿಸುವ ಪ್ರಯತ್ನ ನಡೆಯುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಪಕ್ಷ ತನ್ನ ನಿಲುವು ತಿಳಿಸಿದೆ ಎಂದು ಅವರು ಹೇಳಿದರು.

ಇದರ ಜತೆಗೆ ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿಗಳ ಮೂಲಕ ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಇದರ ಜತೆಗೆ ಕೊರೋನ ಉಪಕರಣ ಖರೀದಿಯಲ್ಲಿ ಎಸಗಿರುವ ಭ್ರಷ್ಟಾಚಾರ, ಅತಿವೃಷ್ಟಿ ನಿರ್ವಹಣೆಯಲ್ಲಿ ವೈಫಲ್ಯ ಖಂಡಿಸಿ, ಜನರ ಧ್ವನಿಯನ್ನು ಸರಕಾರಕ್ಕೆ ಮುಟ್ಟಿಸಲು ‘ಜನ ಧ್ವನಿ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಅಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಪಕ್ಷದಿಂದ ಧರಣಿ ನಡೆಸಲಾಗುವುದು. ನಂತರ ಸಂಬಂಧಪಟ್ಟ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ಪತ್ರ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳಲಾಗುವುದು ಎಂದು ಶಿವಕುಮಾರ್ ಹೇಳಿದರು.

ಶಾಶ್ವತ ಪರಿಹಾರವಾಗಿ 10 ಸಾವಿರ ಕೋಟಿ ರೂ.ವಿಶೇಷ ಪ್ಯಾಕೇಜ್ ನೀಡಲಿ: ರಾಜ್ಯದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶಗಳಿಗೆ ಭೇಟಿ ಕಾರ್ಯಕ್ರಮವನ್ನು ಕೊಡಗಿನಿಂದ ಪ್ರಾರಂಭಿಸಿದ್ದೇನೆ. ಕಾವೇರಿ ನಮ್ಮ ರಾಜ್ಯಕ್ಕೆ ಒಂದು ದೊಡ್ಡ ಆಸ್ತಿ. ಕರ್ನಾಟಕ, ತಮಿಳುನಾಡು, ಪುದುಚೇರಿಗೆ ಜೀವ ನದಿಯಾಗಿದೆ. ಈ ನದಿ ಉಗಮ ಸ್ಥಾನವನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದು ಅವರು ಶಿವಕುಮಾರ್ ತಿಳಿಸಿದರು.

ನಾನು ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ಜನರ ನೋವು ಗಮನಿಸಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಇಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನರ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗಿನ ಸರಕಾರ ಮನೆ, ಆಸ್ತಿ ಕಳೆದುಕೊಂಡವರಿಗೆ ಇದುವರೆಗೂ ತಾವು ಘೋಷಿಸಿದ ಪರಿಹಾರವನ್ನು ಕೊಟ್ಟಿಲ್ಲ ಎಂದು ಅವರು ಆರೋಪಿಸಿದರು.

ಮನೆ ಬಾಡಿಗೆಗೆ 5 ಸಾವಿರ ರೂ.ಕೊಡುತ್ತೇವೆ ಎಂದು ಘೋಷಿಸಿತ್ತು. ಕೇವಲ 3-4 ತಿಂಗಳು ಮಾತ್ರ ಕೊಟ್ಟು, ನಂತರ ಕೈತೊಳೆದುಕೊಂಡಿದೆ. ಆನಂತರ ಮನೆಯನ್ನೂ ಕೊಟ್ಟಿಲ್ಲ, ಬಾಡಿಗೆಯನ್ನೂ ಕೊಟ್ಟಿಲ್ಲ ಎಂದು ಅಲ್ಲಿನ ಜನ ಗೋಳು ತೋಡಿಕೊಂಡರು. ನಾವು ಈ ಪ್ರದೇಶಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜಂಟಿಯಾಗಿ ಕಾವೇರಿ ಜಲಾನಯನ ಪ್ರದೇಶಗಳ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.

ಈ ವಿಚಾರವಾಗಿ ರಾಜ್ಯದ 25 ಬಿಜೆಪಿ ಸಂಸದರ ಜತೆಗೆ ಬೇಕಾದರೆ ನಮ್ಮ ಪಕ್ಷದ ಸಂಸದರನ್ನು ಕರೆದುಕೊಂಡು ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಕೇಂದ್ರದ ಮೇಲೆ ಪರಿಹಾರ ಪ್ಯಾಕೇಜ್ ಗಾಗಿ ಒತ್ತಾಯ ಹೇರಬೇಕಿದೆ. ವಿಧಾನಮಂಡಲದ ಅಧಿವೇಶನ ಕರೆದು ಈ ವಿಚಾರವಾಗಿ ಚರ್ಚಿಸಲಿ. ನಾವು ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಇದನ್ನು ಪಕ್ಷ, ರಾಜಕೀಯವಾಗಿ ನೋಡದೇ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಯೋಚಿಸಬೇಕು ಎಂದು ಅವರು ಹೇಳಿದರು.

ಕಳೆದ ವರ್ಷ ನೆರೆಯಿಂದ ರಾಜ್ಯದಲ್ಲಿ 35 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಕೇಂದ್ರ ಸರಕಾರ  ಕೊಟ್ಟಿದ್ದು ಕೇವಲ 1800 ಕೋಟಿ ರೂ.ಪರಿಹಾರ. ಆದರೆ ಇವತ್ತಿಗೂ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡಲು ಸಾಧ್ಯವಾಗಿಲ್ಲ ಎಂದು ಅವರು ದೂರಿದರು.

ಪಕ್ಷದಿಂದ ಆರು ತಂಡಗಳನ್ನು ರಚನೆ ಮಾಡಿದ್ದು, ಈ ತಂಡಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರಕಾರದ ಆಶ್ವಾಸನೆ ಎಷ್ಟರ ಮಟ್ಟಿಗೆ ಜಾರಿಯಾಗಿದೆ? ಪ್ರವಾಹದಿಂದ ಆಗಿರುವ ನಷ್ಟ ಎಷ್ಟು ಎಂಬ ಬಗ್ಗೆ ಪರಿಶೀಲನೆ ನಡೆಸಲಿವೆ ಎಂದು ಶಿವಕುಮಾರ್ ತಿಳಿಸಿದರು.

ಇಂದು ಬೆಳಗ್ಗೆ ಪ್ರಧಾನಮಂತ್ರಿ ಜತೆಗಿನ ಸಭೆಯಲ್ಲಿ ನಮ್ಮ ಸಚಿವರು ಪ್ರವಾಹ ಹಾನಿ ಕುರಿತ ವರದಿ ಸಲ್ಲಿಸಿದ್ದು, 4 ಸಾವಿರ ಕೋಟಿ ರೂ.ಗಳಷ್ಟು ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪಾಪ, ಪ್ರಧಾನ ಮಂತ್ರಿಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದರು.

ಸಚಿವ ಆರ್. ಅಶೋಕ್ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಕೆಲವರಿಗೆ ನನ್ನ ಹೆಸರು ತೆಗೆದುಕೊಳ್ಳದಿದ್ದರೆ ಅವರಿಗೆ ಸಮಾಧಾನವಾಗುವುದಿಲ್ಲ. ಅವರ ಪಕ್ಷದಲ್ಲಿ ಅವರಿಗೆ ಮಾನ್ಯತೆ ಸಿಗುವುದಿಲ್ಲ. ಅದನ್ನು ಪಡೆಯಲು ಈ ರೀತಿ ಮಾತನಾಡುತ್ತಾರೆ. ನಾನು ಅವರ ಬಗ್ಗೆ ಮಾತನಾಡಲು ಹೋಗುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ಇನ್ನು ಯಾರ ಕಾಲದಲ್ಲಿ ಎಷ್ಟು ಪರಿಹಾರ ಬಂದಿದೆ ಎಂಬುದರ ಬಗ್ಗೆ ಅಧಿವೇಶನದಲ್ಲಿ ದಾಖಲೆ ಸಮೇತ ಮಾತನಾಡೋಣ. ಆಗ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇರಲಿಲ್ಲ. ಈಗ ಒಂದೇ ಪಕ್ಷ ಎರಡೂ ಕಡೆ ಅಧಿಕಾರದಲ್ಲಿದೆ. ಇಬ್ಬರೂ ಕೂತು ಪರಿಹಾರ ನೀಡಲಿ. ಬೇರೆ ಸಂದರ್ಭದಲ್ಲಿ ರಾಜಕೀಯ ಮಾಡೋಣ. ಸದ್ಯಕ್ಕೆ ಜನರ ಜೀವ ಹಾಗೂ ಆಸ್ತಿ ಉಳಿಸೋಣ ಎಂದು ಅವರು ಹೇಳಿದರು.

ಭೂ ಸುಧಾರಣಾ ಕಾಯ್ದೆ ವಿಚಾರವಾಗಿ ಸಿದ್ದರಾಮಯ್ಯ ಹೋರಾಟ ಹಾಗೂ  ನಮ್ಮ ಧ್ವನಿ ಎಲ್ಲವೂ ಪಕ್ಷದ ಧ್ವನಿಯಾಗಿದ್ದು, ಒಂದೇ ಧ್ವನಿಯಾಗಿದೆ. ಅದೇ ಜನ ಧ್ವನಿ ಎಂದು ಶಿವಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್.ಶಂಕರ್, ಉಪಮುಖ್ಯಸ್ಥ ವಿ.ಆರ್. ಸುದರ್ಶನ್, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News