ರಕ್ತದಲ್ಲಿ ಹೆಚ್ಚಿನ ಟ್ರೈಗ್ಲಿಸರೈಡ್ ಅಪಾಯಕಾರಿ

Update: 2020-08-10 15:35 GMT

ಉರಿಯೂತವು ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ, ಹೀಗಾಗಿ ಅದು ಶರೀರಕ್ಕೆ ಅಪಾಯಕಾರಿಯಾಗಿದೆ. ಬೊಜ್ಜು,ಮಧುಮೇಹ ಮತ್ತು ಹೃದ್ರೋಗಗಳು ಇಂತಹ ಕಾಯಿಲೆಗಳಲ್ಲಿ ಪ್ರಮುಖವಾಗಿವೆ. ಶರೀರದಲ್ಲಿಯ ಯಾವುದೇ ಸೋಂಕು ವ್ಯಕ್ತಿಯಲ್ಲಿ ಉರಿಯೂತವನ್ನುಂಟು ಮಾಡುತ್ತದೆ. ಹೊರಗಿನಿಂದ ವೈರಸ್, ಬ್ಯಾಕ್ಟೀರಿಯಾ ಅಥವಾ ಇತರ ಸೂಕ್ಷ್ಮಾಣುಜೀವಿಗಳು ದಾಳಿ ಮಾಡುತ್ತಿವೆ ಎಂದು ಶರೀರಕ್ಕೆ ಅನಿಸಿದರೆ ಅದನ್ನು ತಡೆಯಲು ಅದು ಅಂಗದಲ್ಲಿ ಉರಿಯೂತವನ್ನುಂಟು ಮಾಡುತ್ತದೆ. ತನ್ನನ್ನು ರಕ್ಷಿಸಿಕೊಳ್ಳಲು ಶರೀರವು ಈ ಕ್ರಮವನ್ನು ಕೈಗೊಳ್ಳುತ್ತದೆಯಾದರೂ ಕೆಲವೊಮ್ಮೆ ಶರೀರದಲ್ಲಿಯ ಆಂತರಿಕ ಅಥವಾ ಬಾಹ್ಯ ಉರಿಯೂತಕ್ಕೆ ಸೋಂಕಿನ ಬದಲು ಬೇರೆ ಯಾವುದೋ ಕಾರಣವಾಗಿರಬಹುದು ಮತ್ತು ಇದು ನಾವು ತಿಳಿದಿರುವುದಕ್ಕಿಂತ ಹೆಚ್ಚು ಅಪಾಯಕಾರಿಯಾಗಿರಬಹುದು. ಅದು ಅಂಗಾಂಗಗಳಿಗೆ ಹಾನಿಯನ್ನೂ ಉಂಟು ಮಾಡಬಹುದು.

ರಕ್ತದಲ್ಲಿ ಅತಿಯಾದ ಟ್ರೈಗ್ಲಿಸರೈಡ್ ಅಪಾಯಕಾರಿ

ಹೌದು,ರಕ್ತದಲ್ಲಿ ಟ್ರೈಗ್ಲಿಸರೈಡ್‌ಗಳ ಮಟ್ಟ ಹೆಚ್ಚಾದರೆ ಅದು ಶರೀರದಲ್ಲಿ ಉರಿಯೂತಕ್ಕೆ ಕಾರಣವಾಗಬಹುದು ಮತ್ತು ಜೀವಕ್ಕೆ ಅಪಾಯವನ್ನುಂಟು ಮಾಡಬಹುದು ಎನ್ನುವುದನ್ನು ಇತ್ತೀಚಿನ ಸಂಶೋಧನೆಯೊಂದು ಬೆಳಕಿಗೆ ತಂದಿದೆ. ರಕ್ತದಲ್ಲಿರುವ ಟ್ರೈಗ್ಲಿಸರೈಡ್‌ಗಳನ್ನು ರಕ್ತದ ಕೊಬ್ಬು ಎಂದು ಕರೆಯಲಾಗುತ್ತದೆ. ಜರ್ಮನಿಯ ಡಾ.ಸಾರ್‌ಲ್ಯಾಂಡ್ ವಿವಿಯು ನಡೆಸಿರುವ ಈ ಸಂಶೋಧನೆಯ ವರದಿಯು ‘ನೇಚರ್ ಇಮ್ಯುನಾಲಜಿ’ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ರಕ್ತ ಕೊಬ್ಬು ಅಪಾಯಕಾರಿ ಉರಿಯೂತವನ್ನು ಹೆಚ್ಚಿಸುತ್ತದೆ

ಅಧಿಕ ರಕ್ತ ಕೊಬ್ಬು ಅಥವಾ ರಕ್ತದಲ್ಲಿಯ ಅತಿಯಾದ ಟ್ರೈಗ್ಲಿಸರೈಡ್‌ಗಳು ಶರೀರದಲ್ಲಿ ಆಂತರಿಕ ಉರಿಯೂತವನ್ನುಂಟು ಮಾಡುತ್ತವೆ ಮತ್ತು ಇದರಿಂದಾಗಿ ವ್ಯಕ್ತಿಯ ಹಲವಾರು ಜೈವಿಕ ಕಾರ್ಯಗಳಿಗೆ ವ್ಯತ್ಯಯವುಂಟಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಉರಿಯೂತವು ಎಷ್ಟೊಂದು ಅಪಾಯಕಾರಿಯಾಗಬಹುದು ಎಂದರೆ ಹಲವಾರು ಸಂದರ್ಭಗಳಲ್ಲಿ ಅದು ಕೊನೆಗೆ ಅಂಗಾಂಗಗಳು ಅಥವಾ ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಇದಿಷ್ಟೇ ಅಲ್ಲ,ವ್ಯಕ್ತಿಯ ರಕ್ತದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾದಷ್ಟು ಆತ ಸಾಯುವ ಸಾಧ್ಯತೆ ಹೆಚ್ಚಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಅತಿಯಾದ ಟ್ರೈಗ್ಲಿಸರೈಡ್ ಅಂತಿಮವಾಗಿ ಅಂಗಾಂಗಗಳಿಗೆ ಹಾನಿ ಮಾಡಬಹುದು

ಸಂಶೋಧಕರು ಮಾನವನ ಮೇಲೆ ಈ ಸ್ಥಿತಿಯ ಅಪಾಯವನ್ನು ತಿಳಿದುಕೊಳ್ಳಲು ಮೊದಲು ಪ್ರಣಾಳ ಪ್ರಯೋಗ ನಡೆಸಿದ್ದರು ಮತ್ತು ನಂತರ ಒಂದು ವಿಧದ ಇಲಿಯನ್ನು ಸಂಶೋಧನೆಗೊಳಪಡಿಸಿದ್ದರು. ನಂತರ ದೀರ್ಘಕಾಲಿಕ ಮೂತ್ರಪಿಂಡ ರೋಗ ಅಥವಾ ಹೃದ್ರೋಗವಿರುವ ಕೆಲವು ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ಅವರ ಮೇಲೆ ಸಂಶೋಧನೆ ನಡೆಸಿದ್ದರು. ಟ್ರೈಗ್ಲಿಸರೈಡ್‌ಗಳಿಂದ ಉಂಟಾಗಿರುವ ಉರಿಯೂತವು ಅವರ ಮೂತ್ರಪಿಂಡಗಳು ಮತ್ತು ಅಪಧಮನಿಗಳಿಗೆ ಹಾನಿಯನ್ನುಂಟು ಮಾಡತೊಡಗಿದೆ ಎನ್ನುವುದು ಸಂಶೋಧಕರಿಗೆ ತಿಳಿದು ಬಂದಿತ್ತು. ರಕ್ತದಲ್ಲಿ ಅತಿಯಾದ ಲಿಪಿಡ್, ವಿಶೇಷವಾಗಿ ಟ್ರೈಗ್ಲಿಸರೈಡ್ ಮಟ್ಟವು ಶರೀರದಲ್ಲಿ ಅಪಾಯಕಾರಿ ಉರಿಯೂತ ಸ್ಥಿತಿಯನ್ನುಂಟು ಮಾಡುತ್ತದೆ ಎನ್ನುವುದನ್ನು ಈ ಸಂಶೋಧನೆಯು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News