ಹಿಂದೂ ರಾಷ್ಟ್ರ ಸ್ಥಾಪನೆಗೆ ಕೃತಿಶೀಲರಾಗಿ: ಬಿಜೆಪಿ ಶಾಸಕ ಟಿ.ರಾಜಾಸಿಂಹ ವಿವಾದಾತ್ಮಕ ಹೇಳಿಕೆ

Update: 2020-08-10 16:30 GMT

ಬೆಂಗಳೂರು, ಆ.10: ತ್ರಿವಳಿ ತಲಾಖ್ ನಿಷೇಧ, ಕಲಂ 370 ವಿಧಿ ರದ್ದು ಹಾಗೂ ರಾಮಮಂದಿರದ ನಿರ್ಮಾಣ ಈ ಮೂರೂ ಅಂಶಗಳು ಪೂರ್ಣವಾಗಿವೆ. ಇನ್ನೂ ಉಳಿದಿರುವುದು ಕಾಶಿಯಲ್ಲಿ ವಿಶ್ವನಾಥ ದೇವಸ್ಥಾನ, ಮಥುರಾದಲ್ಲಿ ಶ್ರೀಕೃಷ್ಣ ದೇವಸ್ಥಾನ ನಿರ್ಮಿಸುವುದು ಹಾಗೂ ಅಖಂಡ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದು ಎಂದು ತೆಲಂಗಾಣ ರಾಜ್ಯದ ಭಾಗ್ಯನಗರ ಶಾಸಕ ಟಿ.ರಾಜಾಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸೋಮವಾರ ಆನ್‍ಲೈನ್‍ನಲ್ಲಿ ನಡೆದ 9ನೆ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಖಂಡ ಹಿಂದೂ ರಾಷ್ಟ್ರದ ಸ್ಥಾಪನೆ ಕೇವಲ ಮಾತನಾಡುವುದರಿಂದ ಆಗುವುದಿಲ್ಲ. ಆದುದರಿಂದ, ಛತ್ರಪತಿ ಶಿವಾಜಿ ಹಾಗೂ ಸಂಭಾಜಿ ಮಹಾರಾಜರ ಮಾರ್ಗವನ್ನು ಅನುಸರಿಸಬೇಕು. ಹಿಂದೂ ರಾಷ್ಟ್ರದಲ್ಲಿ ‘ಗೋಹತ್ಯೆ’, ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ನಂತಹ ಹಿಂದೂಗಳ ಮೇಲಿನ ಆಘಾತಗಳು ಇರುವುದಿಲ್ಲ. ಹಿಂದೂಗಳು ಜಾಗೃತ ಹಾಗೂ ಸಂಘಟಿತರಾಗಿ ಹಿಂದೂ ರಾಷ್ಟ್ರಕ್ಕಾಗಿ ಕೃತಿಶೀಲರಾಗಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭ ಅಯೋಧ್ಯೆಯ ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ನ ಕೋಶಾಧ್ಯಕ್ಷ ಸ್ವಾಮಿ ಗೋವಿಂದ ದೇವಗಿರಿ ಮಹಾರಾಜರೂ ಉಪಸ್ಥಿತರಿದ್ದರು. ಭಾರತವು ಹಿಂದೂ ರಾಷ್ಟ್ರವಾಗಿದೆ. ಶಿವಾಜಿ ಹಿಂದೂ ಸಾಮ್ರಾಜ್ಯದ ಸ್ಥಾಪನೆ ಮಾಡಿದ್ದರು. ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದವರು ಹಿಂದೂ ವಿರೋಧಿ ವಿಚಾರವನ್ನು ಕಾಪಾಡಿದ್ದಾರೆ. ಹಿಂದೂ ರಾಷ್ಟ್ರವನ್ನು ಅಬಾಧಿತವಾಗಿಡುವುದು ಪ್ರತಿಯೊಬ್ಬ ಹಿಂದೂಗಳ ಜವಾಬ್ದಾರಿಯಾಗಿದೆ. ಅದಕ್ಕಾಗಿ ಸಾವರ್ಕರ್ ಹೇಳಿದಂತೆ ರಾಜಕಾರಣಿಗಳ ಹಿಂದೂಕರಣವಾಗುವುದು ಅಗತ್ಯವಿದೆ ಎಂದು ಅವರು ಹೇಳಿದರು.

ಠರಾವುಗಳು: ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮಮಂದಿರದಲ್ಲಿ ಹಿಂದೂಗಳಿಗಾಗಿ ಧರ್ಮಶಿಕ್ಷಣ ನೀಡಬೇಕು. ಅಲ್ಲಿಯ ಇತರ ದೇವಸ್ಥಾನಗಳು ಹಾಗೂ ಐತಿಹಾಸಿಕ ಸ್ಥಳಗಳನ್ನೂ ಆಕ್ರಮಣದಿಂದ ಮುಕ್ತ ಮಾಡಿ ಅದರ ಜೀರ್ಣೋದ್ಧಾರ ಮಾಡಬೇಕು. ಧಾರ್ಮಿಕ ಅಸಮಾಧಾನವನ್ನು ತಡೆಗಟ್ಟಲು ಅಯೋಧ್ಯೆಯಲ್ಲಿ ಇತರ ಧರ್ಮಗಳ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲು ಅನುಮತಿಯನ್ನು ನೀಡಬಾರದು.

ಹಿಂದೂಗಳ ಮೂಲಭೂತ ಅಧಿಕಾರಗಳ ಕಗ್ಗೊಲೆ ಮಾಡುವ ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ 1991’ ಈ ಕಾನೂನನ್ನು ಕೂಡಲೇ ರದ್ದು ಪಡಿಸಿ ರಾಮಮಂದಿರದಂತೆ ಕಾಶಿ, ಮಥುರಾ ಇತ್ಯಾದಿಗಳಂತಹ ಮೊಗಲ್ ಆಕ್ರಮಣಕಾರರಿಂದಾಗಿ ಕಬಳಿಸಿದ್ದ ಹಿಂದೂಗಳ ಸಾವಿರಾರು ದೇವಸ್ಥಾನಗಳನ್ನು ಮತ್ತು ಭೂಮಿಯನ್ನು ಹಿಂದೂಗಳಿಗೆ ಒಪ್ಪಿಸಬೇಕು.

ಎಲ್ಲರಿಗೆ ಸಮಾನ ಅಧಿಕಾರ ನೀಡಲು ಸಂವಿಧಾನದಲ್ಲಿ ‘ಸೆಕ್ಯುಲರ್’ ಶಬ್ದವನ್ನು ತೆಗೆದು ‘ಸ್ಪಿರಿಚ್ಯುವಲ್’ ಶಬ್ದ ಹಾಕಬೇಕು ಹಾಗೂ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಬೇಕು.

‘ನೇಪಾಳ ಹಿಂದೂ ರಾಷ್ಟ್ರವೆಂದು ಘೋಷಿತವಾಗಬೇಕು’, ಎಂಬ ನೇಪಾಳದಲ್ಲಿನ ಹಿಂದೂಗಳ ಆಗ್ರಹವನ್ನು ಈ ಅಧಿವೇಶನವು ಸಂಪೂರ್ಣ ಬೆಂಬಲಿಸುತ್ತದೆ.

ಕೇಂದ್ರ ಸರಕಾರವು ಹಿಂದೂ ಸಮಾಜದ ತೀವ್ರ ಭಾವನೆಯನ್ನು ಗಮನದಲ್ಲಿಸಿರಿ ‘ಇಡೀ ದೇಶದಲ್ಲಿ ಗೋವಂಶ ಹತ್ಯಾನಿಷೇಧ’ ಮತ್ತು ‘ಮತಾಂತರ ನಿಷೇಧ’ ಇವುಗಳ ಬಗ್ಗೆ ನಿರ್ಣಾಯಕ ಕಾನೂನುಗಳನ್ನು ಅಂಗೀಕರಿಸಬೇಕು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾಗಳಲ್ಲಿನ ಹಿಂದೂಗಳ ಮೇಲಾಗುವ ದೌರ್ಜನ್ಯಗಳ ಬಗ್ಗೆ ಅಂತರ್ ರಾಷ್ಟ್ರೀಯ ಮಾನವಾಧಿಕಾರ ಸಂಘಟನೆ ಹಾಗೂ ಭಾರತ ಸರಕಾರಗಳ ಮೂಲಕ ತನಿಖೆ ನಡೆಸಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಸುರಕ್ಷೆಯನ್ನು ನೀಡಬೇಕು.

ಕಾಶ್ಮೀರ ಕಣಿವೆಯಲ್ಲಿ ಸ್ವತಂತ್ರ ‘ಪನೂನ ಕಾಶ್ಮೀರ’ ಈ ಕೇಂದ್ರಾಡಳಿತ ಪ್ರದೇಶವನ್ನು ನಿರ್ಮಿಸಿ ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಬೇಕು. ತಮಿಳುನಾಡಿನ ನಟರಾಜ ದೇವಸ್ಥಾನದ ಸ್ವಾಧೀನವನ್ನು ರದ್ದು ಪಡಿಸುವ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕನುಸಾರ ದೇಶದಲ್ಲಿಯ ದೇವಸ್ಥಾನಗಳ ಸರಕಾರದ ಸ್ವಾಧೀನವನ್ನು ಕೂಡಲೇ ರದ್ದು ಪಡಿಸಿ ದೇವಸ್ಥಾನವನ್ನು ಭಕ್ತರಿಗೆ ಒಪ್ಪಿಸಬೇಕು.

ಕೇಂದ್ರ ಸರಕಾರವು ತಕ್ಷಣವೇ ‘ಕೇಂದ್ರೀಯ ನಾಮಕರಣ ಆಯೋಗ’ವನ್ನು ಸ್ಥಾಪಿಸಿ ದೇಶಾದ್ಯಂತದ ನಗರಗಳು, ವಾಸ್ತು, ರಸ್ತೆಗಳು, ಸಂಗ್ರಹಾಲಯಗಳು ಮುಂತಾದವುಗಳಿಗಿರುವ ಪರಕೀಯ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸಿ ಅವುಗಳಿಗೆ ಮೂಲ ಹೆಸರಿನಿಂದ ನಾಮಕರಣ ಮಾಡಬೇಕು

ರಾಷ್ಟ್ರದ ಸುರಕ್ಷೆಯ ದೃಷ್ಟಿಯಿಂದ ಭಾರತದಲ್ಲಿ ಆಶ್ರಯ ನೀಡಿದ ರೋಹಿಂಗ್ಯಾ ಮುಸಲ್ಮಾನರಿಗೆ ಪುನಃ ಹಿಂದೆ ಕಳುಹಿಸಲು ಸರಕಾರವು ಕಾನೂನನ್ನು ರೂಪಿಸಬೇಕು.

ದೆಹಲಿ ಗಲಭೆಯ ಸೂತ್ರದಾರ ಆಮ್ ಆದ್ಮಿ ಪಕ್ಷದ ತಾಹಿರ್ ಹುಸೇನ್, ಅದೇ ರೀತಿ ‘ಸಿಎಎ’ ಹಾಗೂ ‘ಎನ್‍ಆರ್‍ಸಿ’ಯ ಕಾಯ್ದೆಯ ವಿರುದ್ಧ ಶಾಹೀನ್ ಬಾಗ್ ನಂತಹ ಹಿಂಸಾತ್ಮಕ ಆಂದೋಲನಗಳನ್ನು ಮಾಡುವವರ ಮೇಲೆ ದೇಶದ್ರೋಹದ ಮೊಕದ್ದಮೆಯನ್ನು ಹೂಡಬೇಕು.

ಜನಸಂಖ್ಯೆಯ ಸಮತೋಲನವನ್ನಿಡಲು ದೇಶದಲ್ಲಿ ಕೂಡಲೇ ‘ಜನಸಂಖ್ಯಾ ನಿಯಂತ್ರಣ ಕಾನೂನನ್ನು’ ಜಾರಿಗೊಳಿಸಬೇಕು. ಭಾರತದಲ್ಲಿ ‘ಎಫ್.ಎಸ್.ಎಸ್.ಎ.ಐ.’ ಹಾಗೂ ‘ಎಫ್.ಡಿ.ಎ.’ ನಂತಹ ಸರಕಾರಿ ಸಂಸ್ಥೆಗಳಿರುವಾಗ ಧಾರ್ಮಿಕ ಆಧಾರದಲ್ಲಿ ‘ಸಮನಾಂತರ ಅರ್ಥವ್ಯವಸ್ಥೆ’ ನಿರ್ಮಿಸುವ ‘ಹಲಾಲ್ ಸರ್ಟಿಫಿಕೆಶನ್’ನ ವ್ಯವಸ್ಥೆಯನ್ನು ಕೂಡಲೇ ನಿಲ್ಲಿಸಬೇಕು.

ಯಾವುದೇ ಸಾಕ್ಷಿಗಳು ಇಲ್ಲದಿರುವಾಗ ಸೆರೆಮನೆಯಲ್ಲಿರುವ ಎಲ್ಲ ಹಿಂದುತ್ವ ನಿಷ್ಠರ ಮೇಲಿನ ಮೊಕದ್ದಮೆಗಳನ್ನು ನಡೆಸಲು ‘ವಿಶೇಷ ತ್ವರಿತಗತಿ ನ್ಯಾಯಾಲಯ’ದ ಸ್ಥಾಪನೆಯನ್ನು ಮಾಡಬೇಕು ಹಾಗೂ ಅಮಾಯಕ ಹಿಂದುತ್ವ ನಿಷ್ಠರಿಗೆ ನ್ಯಾಯ ಒದಗಿಸಬೇಕು.

ಅಧಿವೇಶನದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸದ್ಗುರು ನಂದಕುಮಾರ ಜಾಧವ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಡಾ.ಚಾರುದತ್ತ ಪಿಂಗಳೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News