ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ: ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ

Update: 2020-08-10 17:05 GMT

ಬೆಂಗಳೂರು, ಆ.10: ರಸಗೊಬ್ಬರ ಚಿಲ್ಲರೆ ಮತ್ತು ಸಗಟು ಮಾರಾಟಗಾರರು ಯಾವುದೇ ಕಾರಣಕ್ಕೂ ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿದ್ದಲ್ಲಿ ಅಥವಾ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.

ಇಲಾಖೆಯ ನಿಯಮಾನುಸಾರವೆ ರಸಗೊಬ್ಬರವನ್ನು ರೈತರಿಗೆ ವಿತರಿಸಬೇಕು. ರೈತರಿಗೆ ಯಾವುದೇ ಕಾರಣಕ್ಕೂ ರಸಗೊಬ್ಬರದ ಕೊರತೆಯಾಗದಂತೆ ಇಲಾಖೆ ಸೂಕ್ತ ಕ್ರಮಕೈಗೊಂಡಿದೆ. ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ. ಅಗತ್ಯಕ್ಕನುಗುಣವಾಗಿ ರಸಗೊಬ್ಬರ ಸರಬರಾಜಿಗೆ ಕ್ರಮಕೈಗೊಳ್ಳಲಾಗಿದ್ದು, ರೈತರು ಯಾವುದೇ ಇಲ್ಲಸಲ್ಲದ ವದಂತಿಗಾಗಲಿ, ಸುಳ್ಳು ಸುದ್ದಿಗಾಗಲಿ ಗಮನ ನೀಡದೇ ತಾಳ್ಮೆ ವಹಿಸಿ ಸುರಕ್ಷಿತ ಅಂತರ ಕಾಯ್ದುಕೊಂಡು ರಸಗೊಬ್ಬರ ಖರೀದಿಸುವಂತೆ ಅವರು ಮನವಿ ಮಾಡಿದ್ದಾರೆ.

ಕೆಲವೆಡೆ ಕೆಲ ಚಿಲ್ಲರೆ ಮತ್ತು ಸಗಟು ಮಾರಾಟಗಾರರು ಕೃತಕ ಅಭಾವ ಸೃಷ್ಟಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಅಂತಹವರನ್ನು ಗುರುತಿಸಿ ಆರೋಪ ಸಾಬೀತಾದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬಿ.ಸಿ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಇದುವರೆಗೂ 57.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 8.51 ಲಕ್ಷ ಹೆಕ್ಟೇರ್ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಬಾರಿ ಕಳೆದ 5 ವರ್ಷಗಳ ಸರಾಸರಿ ಬಿತ್ತನೆಯ ಶೇ.14 ರಷ್ಟು ಹೆಚ್ಚಿನ ಬಿತ್ತನೆಯಾಗಿದೆ. ಈ ಬಾರಿ ಹೆಚ್ಚಿನ ಬಿತ್ತನೆಯಾಗಿರುವುದರಿಂದ ಹೆಚ್ಚಿನ ಕೃಷಿ ಪರಿಕರಗಳ ಅವಶ್ಯಕತೆಯಿದೆ. ಕೇಂದ್ರ ಸರಕಾರದ ಹಂಚಿಕೆಯಂತೆ ರಸಗೊಬ್ಬರಗಳನ್ನು ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಕಳೆದೆರಡು ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಹೆಚ್ಚಿನದಾಗಿ ರಸಗೊಬ್ಬರ ಸರಬರಾಜಾಗಿದೆ ಎಂದು ಅವರು ತಿಳಿಸಿದ್ದಾರೆ.

ಜುಲೈ ತಿಂಗಳಿನಲ್ಲಿ ಮಂಗಳೂರು ಬಂದರಿಗೆ ಆಗಮಿಸಬೇಕಿದ್ದ ಹಡಗು ಸಕಾಲಕ್ಕೆ ಬಾರದಿರುವುದರಿಂದ ಯೂರಿಯಾ ರಸಗೊಬ್ಬರ ಸರಬರಾಜು ಜುಲೈ ತಿಂಗಳಿನಲ್ಲಿ  ವ್ಯತ್ಯಾಸವಾಗಿದೆ. ಕಳೆದ ಎರಡು ವರ್ಷಗಳಿಗಿಂತ ಈ ವರ್ಷ ಸುಮಾರು 68 ಸಾವಿರ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಹೆಚ್ಚುವರಿಯಾಗಿ ಜುಲೈ ಅಂತ್ಯಕ್ಕೆ ಸರಬರಾಜಾಗಿದೆ ಎಂದು ಅವರು ಹೇಳಿದ್ದಾರೆ.

ಆದರೆ ಆಗಸ್ಟ್ ತಿಂಗಳಿನಲ್ಲಿ ಯೂರಿಯಾ ರಸಗೊಬ್ಬರಕ್ಕೆ ಅಂದಾಜು 1,77,000 ಟನ್ ಬೇಡಿಕೆಯಿದ್ದು, ಈಗಾಗಲೇ 49,749 ಟನ್ ಸರಬರಾಜಾಗಿದೆ. 19,305 ಟನ್ ಸರಬರಾಜು ಹಂತದಲ್ಲಿದ್ದು, 1,22446 ಮೆಟ್ರಿಕ್ ಟನ್ ಸರಬರಾಜಿಗೆ ಸಿದ್ಧತೆ ಮಾಡಲಾಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳು ರಸಗೊಬ್ಬರಗಳ ಸರಬರಾಜು ಮತ್ತು ರೇಕ್ ಟ್ರ್ಯಾಕಿಂಗ್ ಮೇಲ್ವಿಚಾರಣೆಯನ್ನು ಸಮರ್ಪವಾಗಿ ನಿಭಾಯಿಸುತ್ತಿದ್ದು, 2020 ಜುಲೈ ತಿಂಗಳ ಅಂತ್ಯದವರೆಗೆ 5,63861 ಮೆಟ್ರಿಕ್ ಟನ್ ರಸಗೊಬ್ಬರ ಕೇಂದ್ರ ಸರಕಾರದಿಂದ ಸರಬರಾಜಾಗಿದೆ. ಅಂತೆಯೇ ಡಿಎಪಿ 2,77499 ಮೆ.ಟನ್, ಕಾಂಪ್ಲೆಕ್ಸ್ ರಸಗೊಬ್ಬರ 5,17,144 ಮೆಟ್ರಿಕ್ ಟನ್ ಸರಬರಾಜಾಗಿದೆ ಹಾಗೂ ಎಂಒಪಿ ರಸಗೊಬ್ಬರ ಜುಲೈ ಅಂತ್ಯದವರೆಗೆ 1,31,533 ಮೆಟ್ರಿಕ್ ಟನ್ ಸರಬರಾಜಾಗಿದ್ದು, ಒಟ್ಟಾರೆ 14,90,970 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜಾರಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖವಾಗಿ ರೈತರು ಯೂರಿಯಾ ರಸಗೊಬ್ಬರ ಬಳಕೆಯನ್ನು ಅಗತ್ಯಕ್ಕಿಂತ ಹೆಚ್ಚು ಬಳಸಬಾರದು. ಬೇಡಿಕೆಗನುಗುಣವಾಗಿ ಬಳಸಬೇಕು. ಯೂರಿಯಾ ರಸಗೊಬ್ಬರದ ಅತಿ ಬಳಕೆಯಿಂದ ಬೆಳೆಗಳಿಗೆ ಕೀಟ ರೋಗಬಾಧೆಗಳು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಇಳುವರಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದಾಗಿ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News