ಕೊರೋನ ಸೋಂಕಿತರ ಮನೆ ಸೀಲ್‍ಡೌನ್ ಮಾಡದಿರಲು ಬಿಬಿಎಂಪಿ ಚಿಂತನೆ

Update: 2020-08-10 17:06 GMT

ಬೆಂಗಳೂರು, ಆ.10: ಕೊರೋನ ಸೋಂಕಿತರ ಮನೆಗಳನ್ನು ಸೀಲ್‍ಡೌನ್ ಮಾಡುವುದರಿಂದ ಸೋಂಕಿತರ ಕುಟುಂಬಸ್ಥರಿಗೆ ತೀವ್ರ ಮುಜುಗರವಾಗುತ್ತಿರುವ ಹಿನ್ನೆಲೆ ಸೋಂಕಿತರ ಮನೆ ಸೀಲ್ ಡೌನ್ ಮಾಡುವುದನ್ನು ಕೈ ಬಿಡಲು ಬಿಬಿಎಂಪಿ ಚಿಂತನೆ ನಡೆಸಿದೆ.

ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಸೋಂಕಿತರ ಕುಟುಂಬಸ್ಥರು ಮನೆಯಿಂದ ಹೊರ ಬರುತ್ತಿಲ್ಲ. ಹಾಗೂ ಜನರಲ್ಲಿ ಜಾಗೃತಿ ಇರುವಾಗ ಸೀಲ್‍ಡೌನ್ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಸೋಂಕಿತರ ಮನೆ ಸೀಲ್‍ಡೌನ್ ಮಾಡುವ ಕುರಿತು ಹಲವಾರು ದೂರುಗಳು ಬಂದಿವೆ. ಮನೆಗಳನ್ನು ಸೀಲ್‍ಡೌನ್ ಮಾಡುವುದು ಸರಿಯಲ್ಲ ಎಂದು ಸಾರ್ವಜನಿಕರು ಹೇಳಿದ್ದಾರೆ. ಮನೆಗಳನ್ನು ಸೀಲ್‍ಡೌನ್ ಮಾಡುವುದು ಅಥವಾ ತಗಡು ಹಾಕುವುದು ನಮಗೂ ಕೂಡ ಮುಜುಗರ ತಂದಿದೆ. ಹಾಗಾಗಿ ಬೇಡ ಎಂದು ಜನ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರ ಮನವಿಯನ್ನು ರಾಜ್ಯ ಸರಕಾರದ ಮುಂದೆ ಇಡುತ್ತೇವೆ. ರಾಜ್ಯ ಸರಕಾರ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಕಾದು ನೋಡಬೇಕಿದೆ. ಈವರೆಗೆ ಸೀಲ್‍ಡೌನ್ ಪದ್ಧತಿ ಕೈ ಬಿಡುವ ಬಗ್ಗೆ ಇನ್ನು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಸೀಲ್‍ಡೌನ್‍ಗಾಗಿ ಸಾಕಷ್ಟು ದುಂದು ವೆಚ್ಚ ಕೂಡ ಆಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News