ಹಾಪ್‍ಕಾಮ್ಸ್ ನಲ್ಲಿ ಸ್ವಯಂ ನಿವೃತ್ತಿ ಪಡೆಯಲು ಅವಕಾಶ

Update: 2020-08-10 17:08 GMT

ಬೆಂಗಳೂರು, ಆ.10: ಹಾಪ್ ಕಾಮ್ಸ್ ನಲ್ಲಿ ನಿವೃತ್ತಿ ವಯಸ್ಸು 60 ವರ್ಷ. ಆದರೆ, ಒಟ್ಟು ನೌಕರರ ಪೈಕಿ 50 ವರ್ಷ ದಾಟಿದವರು ಸುಮಾರು 120 ಮಂದಿಯಿದ್ದಾರೆ. ಇವರಿಗೆ ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ.

ಹಾಪ್‍ಕಾಮ್ಸ್ ನಲ್ಲಿ ಸದ್ಯ 630 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ತಿಂಗಳು 1.75 ಕೋಟಿ ರೂ. ಹಣ ವೇತನಕ್ಕೆ ನೀಡಬೇಕಾಗಿದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ 60 ವರ್ಷ ದಾಟಿದ 30 ಮಂದಿ ನಿವೃತ್ತಿಯಾಗಿದ್ದು, ಇನ್ನೂ 10 ಮಂದಿ ನಿವೃತ್ತಿಯಾಗುವವರಿದ್ದಾರೆ. ನಿವೃತ್ತಿಯಾಗುವ ಪ್ರತಿ ಸಿಬ್ಬಂದಿಗೆ ರಜೆ ವೇತನ ಸೇರಿದಂತೆ 4.50 ಲಕ್ಷ ರೂ.ಗಳಿಂದ 5 ಲಕ್ಷ ರೂ.ವರೆಗೆ ಇಡುಗಂಟು ನೀಡಬೇಕಾಗಿದೆ ಎಂದು ಹಾಪ್‍ಕಾಮ್ಸ್ ನ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ನಿವೃತ್ತಿ ಹೊಂದಿದ ಸಿಬ್ಬಂದಿಗೆ ರಜೆ ವೇತನ ಮತ್ತಿತರ ಹಣ ಸೇರಿ 5 ಕೋಟಿ ರೂ. ಬಾಕಿಯಿತ್ತು. ಮಾರ್ಚ್ ನಲ್ಲಿ ಅದೆಲ್ಲವನ್ನೂ ವಿತರಿಸಲಾಗಿದೆ. ಸದ್ಯ ಸಂಸ್ಥೆಗೆ ನಷ್ಟವಿಲ್ಲ. ಆದರೆ, ಕೊರೋನ ಸೋಂಕು ಮುಂದುವರಿದಿದ್ದು, ಉದ್ಯೋಗ ಕಳೆದುಕೊಂಡವರು ಇತ್ತೀಚಿಗೆ ತರಕಾರಿ, ಹಣ್ಣು ಮಾರಾಟಕ್ಕೆ ಇಳಿದಿದ್ದಾರೆ. ಇದರಿಂದಾಗಿ, ನಮ್ಮ ವ್ಯಾಪಾರಕ್ಕೆ ಭವಿಷ್ಯದಲ್ಲಿ ಸಾಕಷ್ಟು ಹೊಡೆತ ಬೀಳಲಿದೆ. ಹೀಗಾಗಿ, ಹಾಪ್‍ಕಾಮ್ಸ್ ಉಳಿವಿಗಾಗಿ ಇಂತಹ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಾಪ್ ಕಾಮ್ಸ್‍ನಿಂದ ಆಸ್ಪತ್ರೆ, ಹಾಸ್ಟೆಲ್, ಕಾರ್ಖಾನೆ, ಖಾಸಗಿ ಕಂಪನಿಗಳು ಸೇರಿ ಇನ್ನಿತರ ಕಡೆ ಒಟ್ಟು 2.50 ಕೋಟಿ ರೂ. ಮೌಲ್ಯದ ಹಣ್ಣು ತರಕಾರಿ ಪೂರೈಕೆ ಮಾಡಲಾಗುತ್ತಿತ್ತು. ಈ ಸಂಸ್ಥೆಗಳು ಸದ್ಯ ಕಾರ್ಯನಿರ್ವಹಿಸದ ಪರಿಣಾಮ ಪ್ರತಿ ತಿಂಗಳು ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ ಎಂದು ಹಾಪ್ ಕಾಮ್ಸ್‍ನ ಅಧ್ಯಕ್ಷ ಎ.ಎಸ್.ಚಂದ್ರೇಗೌಡ ಹೇಳಿದ್ದಾರೆ.

ಕೊರೋನ ಭೀತಿಗೂ ಮುನ್ನ ಪ್ರತಿ ಸೋಮವಾರ 90-100 ಟನ್ ಹಣ್ಣು, ತರಕಾರಿ ಮಾರಾಟವಾಗುತ್ತಿತ್ತು. ಅದೇ ಮಂಗಳವಾರ 80 ಟನ್ ಮಾರಾಟವಾಗುತ್ತಿತ್ತು. ಈಗ ಸೋಮವಾರ 65-70 ಟನ್ ಮಾರಾಟವಾದರೆ, ಉಳಿದ ದಿನ 35ರಿಂದ 40 ಟನ್ ಮಾರಾಟವಾಗುತ್ತದೆ. ಹಾಪ್‍ಕಾಮ್ಸ್ ವತಿಯಿಂದ 40 ಮೊಬೈಲ್ ವ್ಯಾನ್‍ಗಳಲ್ಲಿ ಹಣ್ಣು, ತರಕಾರಿಗಳನ್ನು ನಗರದ ಅಪಾರ್ಟ್‍ಮೆಂಟ್‍ ಗಳ ಬಳಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಅ ಪ್ರದೇಶಗಳಲ್ಲೂ ಅಷ್ಟೊಂದು ವ್ಯಾಪಾರವಿಲ್ಲ.

ಕೋವಿಡ್‍ನಿಂದಾಗಿ ಲಾಲ್‍ಬಾಗ್, ಕಬ್ಬನ್ ಪಾರ್ಕ್, ಇನ್ಪೋಸಿಸ್ ಆವರಣ ಸೇರಿದಂತೆ 15 ಹಾಪ್‍ಕಾಮ್ಸ್ ಮಳಿಗೆಗಳನ್ನು ಮುಚ್ಚಲಾಗಿದೆ. ಇದೀಗ 220 ಮಳಿಗೆಗಳಿವೆ ಎಂದು ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News