ಕನ್ನಡ ಶಾಲೆ, ಸಂಘಗಳಿಗೆ ನೀಡಿರುವ ಆಸ್ತಿಗಳ ನವೀಕರಣಕ್ಕೆ ಒತ್ತಾಯ ಸಲ್ಲ: ಬಿಬಿಎಂಪಿ ಸದಸ್ಯರ ಒತ್ತಾಯ

Update: 2020-08-10 17:44 GMT

ಬೆಂಗಳೂರು, ಆ.10: ಕನ್ನಡ ಮಾಧ್ಯಮ ಶಾಲೆ, ಕನ್ನಡ ಪರ ಸಂಘ-ಸಂಸ್ಥೆಗಳಿಗೆ ಬಿಬಿಎಂಪಿ ಹಾಗೂ ಸರಕಾರದಿಂದ ಗುತ್ತಿಗೆ ಆಧಾರದ ಮೇಲೆ ನೀಡಲಾದ ಆಸ್ತಿಗಳನ್ನು ಖರೀದಿಗೆ ಒತ್ತಾಯಿಸದೇ ಗುತ್ತಿಗೆ ಅವಧಿ ನವೀಕರಣಕ್ಕೆ ಪಾಲಿಕೆ ಸದಸ್ಯರು ಒತ್ತಾಯಿಸಿದ್ದಾರೆ.

ಸೋಮವಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಪಾಲಿಕೆ ಸದಸ್ಯ ಬಿ.ಎಸ್.ಸತ್ಯನಾರಾಯಣ ಅವರು, ಬಿಬಿಎಂಪಿಯಿಂದ ಕನ್ನಡ ಮಾಧ್ಯಮ ಶಾಲೆ ಮತ್ತು ಕನ್ನಡಪರ ಸಂಘ- ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಪಾಲಿಕೆಯಿಂದ ಗುತ್ತಿಗೆ ಆಧಾರದ ಮೇಲೆ ನೀಡಲಾದ ಆಸ್ತಿಗಳನ್ನು ಖರೀದಿ ಮಾಡುವುದಕ್ಕೆ ಒತ್ತಾಯ ಮಾಡಬಾರದು. ಅವರಿಗೆ ಆ ಆಸ್ತಿ ಖರೀದಿಸುವ ಆರ್ಥಿಕ ಶಕ್ತಿ ಇಲ್ಲ. ಹಾಗಾಗಿ, ಗುತ್ತಿಗೆ ಅವಧಿ ನವೀಕರಣ ಮಾಡಿಕೊಡುವಂತೆ ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್, ಕೊರೋನ ತುರ್ತು ಪರಿಸ್ಥಿತಿಯಲ್ಲಿ ಕಂದಾಯ ಇಲಾಖೆಯ ಆಸ್ತಿಗಳನ್ನು ಮಾರಾಟ ಮಾಡಿ ಸಂಪನ್ಮೂಲ ಕ್ರೋಡೀಕರಣಕ್ಕೆ ಸರಕಾರ ಮುಂದಾಗಿದೆ. ಅದೇರೀತಿ ಬಿಬಿಎಂಪಿ ಮತ್ತು ಬಿಡಿಎ ಸ್ವತ್ತುಗಳನ್ನು ಮಾರಾಟ ಮಾಡಿದರೆ ಸಂಪನ್ಮೂಲ ಕ್ರೋಡೀಕರಣವಾಗಲಿದೆ.

ನಗರದಲ್ಲಿ ಸುಮಾರು 921 ಎಕರೆ ಪ್ರದೇಶವನ್ನು 115 ಸಂಸ್ಥೆಗಳಿಗೆ ನೀಡಲಾಗಿದೆ. ನಗರದ ಬಿಎಂಶ್ರೀ ಪ್ರತಿಷ್ಠಾನ, ಉದಯಭಾನು ಕಲಾ ಸಂಘ ಸೇರಿದಂತೆ ಅನೇಕ ಕನ್ನಡ ಪರ ಸಂಘ-ಸಂಸ್ಥೆಗಳು ಉತ್ತಮ ಕಾರ್ಯ ನಡೆಸುತ್ತಿವೆ. ಹೀಗಾಗಿ, ಕನ್ನಡ ಪರ ಸಂಘ ಸಂಸ್ಥೆ ಹಾಗೂ ಕನ್ನಡ ಮಾಧ್ಯಮ ಶಾಲೆಗಳಿಗೆ ಬಿಬಿಎಂಪಿಯಿಂದ ಗುತ್ತಿಗೆ ಆಧಾರದ ಮೇಲೆ ನೀಡಲಾದ ಆಸ್ತಿಗಳ ಖರೀದಿಗೆ ಒತ್ತಾಯಿಸದೇ ಗುತ್ತಿಗೆ ಅವಧಿ ನವೀಕರಣ ನಿರ್ಣಯ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News