ಎಸೆಸೆಲ್ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಯ ಮನೆಗೆ ಸಚಿವ ಸುರೇಶ್‍ ಕುಮಾರ್ ಭೇಟಿ

Update: 2020-08-11 11:35 GMT

ಬೆಂಗಳೂರು, ಆ.11: ಗುಳೆ ಬಂದು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದು, ಎಸೆಸೆಲ್ಸಿ ಪರೀಕ್ಷೆಯಲ್ಲಿ 616 ಅಂಕಗಳನ್ನು ಗಳಿಸಿದ ಇಂದಿರಾನಗರದ ಜೀವನಭೀಮಾನಗರದ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ (KPS) ವಿದ್ಯಾರ್ಥಿ ಮಹೇಶ ಅವರ ಮನೆಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ.

ಈ ಕುರಿತು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿರುವ ಸಚಿವ ಸುರೇಶ್ ಕುಮಾರ್, ಮಹೇಶ ಯಾದಗಿರಿಯಿಂದ ಬೆಂಗಳೂರಿಗೆ ಗುಳೆ ಬಂದಿರುವ ಕುಟುಂಬಕ್ಕೆ ಸೇರಿದ ಬಾಲಕನಾಗಿದ್ದು, ಬಡತನದ ನಡುವೆಯೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾನೆ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸವನ್ನು ಇದುವರೆಗೆ ಮುಗಿಸಿದ್ದಾನೆ.

ಇಂದು ಅವನ ಮನೆ ಎಂದು ಕರೆಯಬಹುದಾದ ಪುಟ್ಟ ಗುಡಿಸಲಿಗೆ ಹೋಗಿದ್ದೆ. ಆ ಮನೆಯಲ್ಲಿ ಕುಳಿತುಕೊಳ್ಳಲೂ ಜಾಗವಿಲ್ಲ. ಮಹೇಶನಿಗೆ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸಿ ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದಾಗಿ ಧೈರ್ಯ ತುಂಬಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಮಹೇಶನಿಗೆ ಪಿಯುಸಿ ತರಗತಿಗಳಲ್ಲಿ ವಿಜ್ಞಾನ ವಿಷಯಗಳನ್ನು ತೆಗೆದುಕೊಂಡು ಓದಬೇಕೆಂಬ ಮಹದಾಸೆಯಿದೆ. ಅವನ ಮನೆ, ಅವನ ಕುಟುಂಬ, ಅವರ ತಾಯಿಯ ಮುಗ್ಧತೆ, ಮಹೇಶನ ಸಾಧನೆ ಎಲ್ಲ ಕಂಡಾಗ ಕಣ್ತುಂಬಿ ಬಂತು- ಅದೇ ರೀತಿ ಹೃದಯ ತುಂಬಿ ಬಂತು ಎಂದೂ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News