ಮಾದಕ ವಸ್ತು ಮಾರಾಟ: ವಿದೇಶಿ ಪ್ರಜೆಗಳಿಬ್ಬರ ಸೆರೆ

Update: 2020-08-11 11:45 GMT

ಬೆಂಗಳೂರು, ಆ.11: ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ವಿದೇಶಿ ಪ್ರಜೆಗಳಿಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನೈಜೇರಿಯಾ ದೇಶದ ಕ್ರಿಶ್ಚಿಯನ್ ಓಜೋಮೆನಾ ಹಾಗೂ ಒಕೊನ್ಕೊ ಬೆಂಜಮಿನ್ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಪಾರ್ಟ್ ಮೆಂಟ್‍ನ ನೆಲಮಹಡಿಯಲ್ಲಿರುವ ಮನೆಯಲ್ಲಿ ಇಬ್ಬರು ವಾಸವಿದ್ದು, ಕೊಕೇನ್ ಮಾದಕ ವಸ್ತುಗಳನ್ನು ಯಾರಿಗೂ ಅನುಮಾನ ಬಾರದ ಹಾಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಆರೋಪಿಗಳು ನೈಜೀರಿಯಾದಿಂದ ವ್ಯಾಪಾರ ವೀಸಾದಡಿ ಭಾರತಕ್ಕೆ ಬಂದು ಸಂಪಿಗೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದಾರೆ. ಹಾಗೆಯೇ ಇತರೆ ನೈಜೀರಿಯಾ ಪ್ರಜೆಗಳಿಂದ ಕೊಕೇನ್ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಬಂಧಿತ ಆರೋಪಿಗಳಿಂದ 14.5 ಗ್ರಾಂ ತೂಕದ ಕೊಕೇನ್, ಎರಡು ದ್ವಿಚಕ್ರ ವಾಹನ, ಮೂರು ಮೊಬೈಲ್ ಫೋನ್, ಒಂದು ತೂಕದ ಯಂತ್ರ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಸಂಪಿಗೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News