ನಕಲಿ ವಾಟ್ಸ್ ಆ್ಯಪ್ ಖಾತೆ ಮೂಲಕ ವಂಚನೆ: ಆರೋಪಿ ಬಂಧನ

Update: 2020-08-11 11:47 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.11: ನಕಲಿ ವಾಟ್ಸ್ ಆ್ಯಪ್ ಖಾತೆ ತೆರೆದು ಸಾರ್ವಜನಿಕರಿಗೆ ವಂಚಿಸಿ ಹಣ ಪಡೆಯುತ್ತಿದ್ದ ಆರೋಪದಡಿ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಪೂರ್ವ ವಿಭಾಗದ ಸೈಬರ್ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಮೀರ್ ಕುಮಾರ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಜುಳಾ ಎಂಬ ಮಹಿಳೆಯ ಫೋಟೋವನ್ನು ಉಪಯೋಗಿಸಿಕೊಂಡು ಆರೋಪಿ ನಕಲಿ ವಾಟ್ಸ್ ಆ್ಯಪ್ ಖಾತೆ ತೆರೆದು, ಅದಕ್ಕೆ ಮಂಜುಳಾ ಅವರ ಚಿತ್ರಗಳನ್ನು ಬಳಸಿ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಹಣ ಬೇಕಾಗಿದೆ ಎಂದು ಬ್ಯಾಂಕ್ ವಿವರವುಳ್ಳ ಸಂದೇಶಗಳನ್ನು ರವಾನೆ ಮಾಡುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಕೆಲ ಸ್ನೇಹಿತರು ಆರೋಪಿ ಕಳುಹಿಸಿರುವ ಸಂದೇಶಗಳನ್ನು ಮಂಜುಳಾ ಕಳುಹಿಸಿದ್ದಾಗಿ ನಂಬಿ ಆರೋಪಿ ಕಳುಹಿಸಿದ ಬ್ಯಾಂಕಿನ ಖಾತೆಗೆ ಹಣ ಜಮೆ ಮಾಡಿದ್ದಾರೆ. ತದನಂತರ, ಸ್ನೇಹಿತರು ಆರೋಗ್ಯ ಸಂಬಂಧ ಮಂಜುಳಾ ಅವರನ್ನು ಸಂಪರ್ಕಿಸಿದಾಗ ವಿಚಾರ ಬಯಲಾಗಿದೆ. ಈ ಸಂಬಂಧ ಆರೋಪಿ ವಿರುದ್ಧ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು, ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ನೇತೃತ್ವದಲ್ಲಿನ ತಂಡ ಕಾರ್ಯಾಚರಣೆಗೆ ಇಳಿದು ಆರೋಪಿಯನ್ನು ಬಂಧಿಸಿ ಸೈಬರ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಮೂಲತಃ ಪಶ್ಚಿಮ ಬಂಗಾಳದವನಾಗಿದ್ದು, ಮಾರ್ಚ್ 2020ರಲ್ಲಿ ವಿಧಿಸಲಾದ ಲಾಕ್‍ಡೌನ್ ಸಂದರ್ಭದಲ್ಲಿ ತನ್ನ ಕೆಲಸ ಕಳೆದುಕೊಂಡಿದ್ದ. ಹೀಗಾಗಿ ಜೀವನ ನಿರ್ವಹಣೆಗೆ ಕಷ್ಟವಾದ ಕಾರಣ ಈ ಕೃತ್ಯವೆಸಗಿರುವ ಮಾಹಿತಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News