ಹೊರ ವಿದ್ಯುತ್ ಕಾಮಗಾರಿ ಅವ್ಯವಹಾರ ಆರೋಪ: ಜನಶಕ್ತಿ ವೇದಿಕೆಯಿಂದ ಲೋಕಾಯುಕ್ತಕ್ಕೆ ದೂರು

Update: 2020-08-11 13:12 GMT

ಬೆಂಗಳೂರು, ಆ. 11: ಕೆ.ಆರ್. ಪುರಂ ಕ್ಷೇತ್ರದ ನಗರೇಶ್ವರ ನಾಗೇನಹಳ್ಳಿಯಲ್ಲಿ ನರ್ಮ್ ಬಿಎಸ್‍ಯುಪಿ ಯೋಜನೆಯಡಿ ನಿರ್ಮಿಸಿರುವ 208 ವಸತಿ ಸಮುಚ್ಚಯಗಳಿಗೆ ಹೊರ ವಿದ್ಯುತ್ ಕಾಮಗಾರಿಗಾಗಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದು ಇದರಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನಶಕ್ತಿ ವೇದಿಕೆ ಅಧ್ಯಕ್ಷ ಡಿ.ಸಿ.ಪ್ರಕಾಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಉದ್ದೇಶಿತ ಕಾಮಗಾರಿಗೆ ಒಟ್ಟು 1,17,41,808 ರೂ.ಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಆದರೆ, ಮೇ.ರಾಮಲಿಂಗಂ ಅಂಡ್ ಕಂಪೆನಿಯು ಪರಿಷ್ಕೃತ ಅಂದಾಜು ಪಟ್ಟಿಯಲ್ಲಿ ತಿಳಿಸಿರುವಂತೆ ಸದರಿ ಪ್ರದೇಶದಲ್ಲಿ ಹೊರ ವಿದ್ಯುತ್ ಕಾಮಗಾರಿ ನಡೆಸಿಲ್ಲ. ಹೀಗಾಗಿ ಮೇಲುನೋಟಕ್ಕೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದು ಸ್ಪಷ್ಟ ಎಂದು ಅವರು, ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಮಂಡಳಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕಂಪೆನಿ ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿದ್ದು, ಈ ಸಂಬಂಧ ಕೂಡಲೇ ತನಿಖೆ ನಡೆಸಬೇಕು. ಅಲ್ಲದೆ, ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಆ ಮೂಲಕ ನಗರೇಶ್ವರ ನಾಗೇನಹಳ್ಳಿಯಲ್ಲಿ ಕೊಳಗೇರಿ ನಿವಾಸಿಗಳ ವಸತಿ ಸಮುಚ್ಛಯದಲ್ಲಿ ವಾಸಿಸುವ ಜನರಿಗೆ ನ್ಯಾಯದೊರಕಿಸಿಕೊಡಬೇಕು ಎಂದು ಡಿ.ಸಿ.ಪ್ರಕಾಶ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News