ಬೆಂಗಳೂರಿನಲ್ಲಿ ಕೋವಿಡ್ ಗೆ ಮತ್ತೆ 17 ಮಂದಿ ಬಲಿ; 1,610 ಮಂದಿಗೆ ಸೋಂಕು ದೃಢ

Update: 2020-08-11 14:47 GMT

ಬೆಂಗಳೂರು, ಆ.11: ನಗರದಲ್ಲಿ ಮಂಗಳವಾರ ಒಂದೇ ದಿನ 1,610 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 17 ಜನರು ಮೃತರಾಗಿದ್ದಾರೆ.

ನಗರದಲ್ಲಿ ಇಲ್ಲಿಯವರಗೆ ಒಟ್ಟು 77,038 ಮಂದಿಗೆ ಕೊರೋನ ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,293 ಜನರು ಸೋಂಕಿಗೆ ಬಲಿಯಾಗಿದ್ದಾರೆ. 42,674 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮಂಗಳವಾರ 1,508 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 33,070 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ನಗರದಲ್ಲಿ 329 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

200 ಕೊರೋನ ಸೋಂಕಿತ ಮಹಿಳೆಯರಿಗೆ ಹೆರಿಗೆ

ಕೊರೋನ ಸಂಕಷ್ಟದ ನಡುವೆಯೂ ವಾಣಿವಿಲಾಸ ಆಸ್ಪತ್ರೆಯಲ್ಲಿ 200 ಕೊರೋನ ಸೋಂಕಿತ ಮಹಿಳೆಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ.

ಮೇ 9ಕ್ಕೆ ಮೊದಲ ಕೊರೋನ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಲಾಗಿತ್ತು. ನಂತರ ಮೇ 9ರಿಂದ ಜುಲೈ 17 ರವರೆಗೆ 100 ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಲಾಯಿತು. ಜು. 17ರಿಂದ ಆ.10ರವರೆಗೆ 100 ಹೆರಿಗೆಗಳನ್ನು ಮಾಡಲಾಗಿದೆ.

ವಾಣಿವಿಲಾಸ ಸಿಬ್ಬಂದಿ ಕೇವಲ 23 ದಿನದಲ್ಲಿ 100 ಹೆರಿಗೆ ಮಾಡಿಸಿದ್ದಾರೆ. ಕೊರೋನ ಆರಂಭದಲ್ಲಿ ಸಾಕಷ್ಟು ಹೆರಿಗೆ ಸಮಸ್ಯೆಯಾಗುತ್ತಿತ್ತು. ಈಗ ಸುಲಭವಾಗಿ ಹೆರಿಗೆ ಮಾಡಿಸುವ ಸಾಮರ್ಥ್ಯ ಹೊಂದಿರುವ ಸಿಬ್ಬಂದಿ, ಮಕ್ಕಳಿಗೆ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಿ ಹೆರಿಗೆ ಮಾಡುತ್ತಿದ್ದಾರೆ. ತಾಯಿ ಮತ್ತು ಮಗು ಸುರಕ್ಷಿತವಾಗಿರುವುದರಲ್ಲಿ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.

ಸೋಂಕಿತ ಮಹಿಳೆ ಪರಾರಿ

ನಗರದ ಕೆಂಪೇಗೌಡ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಕಿಮ್ಸ್) ಆಸ್ಪತ್ರೆಯಿಂದ 43 ವರ್ಷದ ಕೊರೋನ ಸೋಂಕಿತ ಮಹಿಳೆ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.

ಕಿಮ್ಸ್ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ರಚಿಸಿದ್ದ ಬಿ ಬ್ಲಾಕ್‍ನಿಂದ ಸೋಂಕಿತ ಮಹಿಳೆಯು ಶುಕ್ರವಾರವೇ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸೋಂಕಿತ ಮಹಿಳೆಯು ಬೆಂಗಳೂರು ದೊಡ್ಡಬಸ್ತಿ ರಸ್ತೆಯ ನಿವಾಸಿ ಎಂದು ತಿಳಿದು ಬಂದಿದೆ.

ಕಳೆದ ಜು.25ರಂದು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕೊರೋನ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿತ್ತು. ಕೊವಿಡ್-19 ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಮಹಿಳೆಯು ಇತ್ತೀಚಿಗೆ ನಾಪತ್ತೆಯಾಗಿದ್ದು, ಸೋಂಕಿತ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಲ್ಲದೆ ಮಹಿಳೆ ವಿರುದ್ಧ ಐಪಿಸಿ) ಸೆಕ್ಷನ್ 269 ಅಡಿಯಲ್ಲಿ ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News