ಬಿಬಿಎಂಪಿಗೆ 627 ಕೋಟಿ ರೂ. ನಷ್ಟಕ್ಕೆ ಮುಖ್ಯಮಂತ್ರಿ ನೇರ ಹೊಣೆ: ಆಮ್ ಆದ್ಮಿ ಪಕ್ಷ ಆರೋಪ

Update: 2020-08-11 15:55 GMT

ಬೆಂಗಳೂರು, ಆ.11: ಪಾಲಿಕೆಯು ಈ ಹಿಂದೆ ನಡೆಸಿದ್ದ 104 ಆಸ್ತಿಗಳ ಟೋಟಲ್ ಸ್ಟೇಷನ್ ಸರ್ವೆಯ (ಟಿಎಸ್‍ಎಸ್) ಸಮಗ್ರ ವರದಿಯ ಪ್ರಕಾರ ಅಧಿಕಾರಿಗಳ ತಪ್ಪು ಆದೇಶದಿಂದ ಪಾಲಿಕೆಗೆ 627 ಕೋಟಿ ರೂ.ನಷ್ಟ ಉಂಟಾಗಿದೆ  ಎಂದು ನಿನ್ನೆ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯಿಸಲಾಗಿದೆ. ಈ ಭಾರೀ ನಷ್ಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನೇರ ಹೊಣೆ ಆಮ್ ಆದ್ಮಿ ಪಕ್ಷವು ಆರೋಪಿಸಿದೆ.

ಬೆಂಗಳೂರು ಉಸ್ತುವಾರಿ ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಮುಖ್ಯಮಂತ್ರಿ ಯಾರಿಗೂ ಕೊಡದೆ ತಮ್ಮಲ್ಲೇ ಇಟ್ಟುಕೊಂಡಿರುವುದರ ಹಿಂದಿನ ಮರ್ಮ ಇದೀಗ ಹೊರಬಂದಿದೆ. ಮೇಲುನೋಟಕ್ಕೆ ಇದು 627 ಕೋಟಿ ರೂ.ನಷ್ಟ ಎಂದು ಕಂಡು ಬರುತ್ತದೆ. ಆದರೆ ಸುಮಾರು 5 ಸಾವಿರ ಕೋಟಿ ರೂ. ಗಳಿಗೂ ಹೆಚ್ಚಿನ ಹಣ ಕೇವಲ ಆಸ್ತಿ ತೆರಿಗೆ ರೂಪದಲ್ಲಿ ಪ್ರತಿ ವರ್ಷವೂ ಬಿಬಿಎಂಪಿಗೆ ನಷ್ಟವಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ತಿಳಿಸಿದ್ದಾರೆ.

ತಾಂತ್ರಿಕವಾಗಿ ಅಧಿಕಾರಿಗಳು ಆರೋಪಿಗಳಾಗಿದ್ದರೂ ಕೋತಿ ಮೊಸರು ತಿಂದು ಮೇಕೆಯ ಮೂತಿಗೆ ಒರೆಸಿದಂತೆ  ಕಾಟಾಚಾರಕ್ಕೆ ಜಂಟಿ ಆಯುಕ್ತರ ಮೇಲೆ ಕ್ರಮ ತೆಗೆದುಕೊಳ್ಳುವ ಇರಾದೆ ಸ್ಪಷ್ಟವಾಗುತ್ತಿದೆ. ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್‍ಗಳು, ಪ್ರಭಾವಿ ಸಂಸ್ಥೆಗಳು ಸರಕಾರದ ಅದರಲ್ಲೂ ಮುಖ್ಯಮಂತ್ರಿ, ಮಂತ್ರಿಗಳ ನೇರ ಹಸ್ತಕ್ಷೇಪವಿಲ್ಲದೇ ಈ ರೀತಿಯ ನೂರಾರು ಕೋಟಿ ರೂ.ಗಳ ತೆರಿಗೆ ಕಳ್ಳತನವನ್ನು ಮಾಡಲು ಸಾಧ್ಯವೇ ಇಲ್ಲ ಎಂದು ಅವರು ದೂರಿದ್ದಾರೆ.

ರಿಯಲ್ ಎಸ್ಟೇಟ್ ಹಾಗೂ ಬಿಲ್ಡರ್ ಮಾಫಿಯಾಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಳೆದ ಒಂದು ವರ್ಷಗಳಿಂದ ಸರಕಾರದ ಅನೇಕ ನೀತಿಗಳನ್ನು ಹಾಗೂ ಆದೇಶಗಳನ್ನು ಮಾಡಿಕೊಂಡು ಬರುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಬಿಬಿಎಂಪಿಯ ಈ ಬೃಹತ್ ನಷ್ಟಕ್ಕೆ ತಾವೇ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸಿದೆ.

ಮುಖ್ಯಮಂತ್ರಿ ಸರಕಾರವನ್ನೆ ನಿಭಾಯಿಸಲು ಕಷ್ಟಪಡುತ್ತಿರುವ ನಿಮ್ಮ ದುರ್ಬಲ ನಿರ್ವಹಣೆಯಿಂದ ಆಡಳಿತ ಯಂತ್ರದ ಹಳಿ ತಪ್ಪಿದೆ. ಈಗಲಾದರೂ ಎಚ್ಚೆತ್ತುಕೊಂಡು ಸರಕಾರಕ್ಕೆ ಆಗಿರುವ ನಿಖರವಾದ ನಷ್ಟವನ್ನು ಮಹಾಲೆಕ್ಕ ಪಾಲಕರಿಂದ ತನಿಖೆಗೊಳಪಡಿಸಿ ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News