ಬೋರ್‍ವೆಲ್ ಕೊರೆಯುವ ಘಟಕದಲ್ಲಿದ್ದ ಐವರು ಜೀತ ಕಾರ್ಮಿಕರ ಬಿಡುಗಡೆ

Update: 2020-08-11 16:34 GMT

ಬೆಂಗಳೂರು, ಆ.11: ಇಲ್ಲಿನ ಸಹಕಾರ ನಗರದಲ್ಲಿರುವ ಬೋರ್‍ವೆಲ್ ಕೊರೆಯುವ ಘಟಕದ ಕಚೇರಿಯಲ್ಲಿ ಮಾಲಕನಿಂದ ಶೋಷಣೆಗೆ ಒಳಪಟ್ಟಿದ್ದ ಐದು ಮಂದಿ ಜೀತ ಕಾರ್ಮಿಕರನ್ನು ಬೆಂಗಳೂರು ನಗರ ಜಿಲ್ಲಾಡಳಿತ ರಕ್ಷಿಸಿದೆ.

ಬೆಂಗಳೂರು ನಗರ ಜಿಲ್ಲಾಡಳಿತ, ಕೊಡಿಗೆಹಳ್ಳಿ ಪೊಲೀಸ್ ಠಾಣೆ ಹಾಗೂ ಕಾರ್ಮಿಕ ಇಲಾಖೆಗಳ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಡಿಯಲ್ಲಿ ಮಧ್ಯಪ್ರದೇಶದ ಬೇತುಲ್ ಜಿಲ್ಲೆಗೆ ಸೇರಿದ ಐದು ಮಂದಿ ಜೀತಗಾರರನ್ನು ರಕ್ಷಿಸಲಾಗಿದೆ. ಹಾಗೂ ಬೋರ್‍ವೆಲ್ ಮಾಲಕರ ವಿರುದ್ದ ಕೊಡಿಗೆಹಳ್ಳಿ ಠಾಣೆಯಲ್ಲಿ ಜೀತ ಕಾರ್ಮಿಕ ಪದ್ಧತಿ(ನಿರ್ಮೂಲನೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಬೋರ್‍ವೆಲ್ ಮಾಲಕ ಈ ಕಾರ್ಮಿಕರಿಗೆ ತಿಂಗಳಿಗೆ ಹತ್ತು ಸಾವಿರ ರೂ. ವೇತನ ನೀಡುವ ಭರವಸೆ ನೀಡಿ ಕೆಲಸಕ್ಕೆ ಆಹ್ವಾನಿಸಿದ್ದಾನೆ. ಇದನ್ನೆ ನಂಬಿಕೊಂಡು ಕೆಲಸಕ್ಕೆ ಸೇರಿಕೊಂಡ ಕಾರ್ಮಿಕರಿಗೆ ವೇತನ ನೀಡದೆ ಅಗತ್ಯವಿದ್ದಾಗ ಮಾತ್ರ 200ರೂ.ನಿಂದ ಒಂದು ಸಾವಿರ ರೂ.ನೀಡಿ, ಬೆದರಿಕೆ ಹಾಕುತ್ತಾ ತಿಂಗಳ ಪೂರ್ತಿ ಕೆಲಸ ಮಾಡಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಕಾರ್ಮಿಕರ ಅಳಲು: ನಮಗೆ ಕನಿಷ್ಠ ವಸತಿ ಸೌಕರ್ಯವನ್ನು ನೀಡದೆ ದಿನಪೂರ್ತಿ ಬೋರ್‍ವೆಲ್ ಲಾರಿಯಲ್ಲೇ ಇರುವಂತೆ ಮಾಡಲಾಗಿತ್ತು. ನಾವೆಲ್ಲರೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಗಳು ಹಾಗೂ ಕೃಷಿ ಜಮೀನುಗಳಲ್ಲಿ ಬೋರ್‍ವೆಲ್‍ಗಳನ್ನು ಕೊರೆಯುವ ಕೆಲಸ ಮಾಡಬೇಕಾಗಿತ್ತು. ಒಂದು ದಿನವೂ ಸರಿಯಾದ ನಿದ್ದೆ, ಊಟದ ವ್ಯವಸ್ಥೆಯಿಲ್ಲದೆ ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದೇವೆಂದು ಬಿಡುಗಡೆಗೊಂಡ ಕಾರ್ಮಿಕರು ತಿಳಿಸಿದ್ದಾರೆ.

ನನ್ನ ಕುಟುಂಬದವರಿಗೆ ಮೂರು ಎಕರೆ ಭೂಮಿಯಿದೆ. ನಾವು ಅಲ್ಲಿ ಜೋಳ, ಸೋಯಾಬೀನ್ ಮತ್ತು ಅಕ್ಕಿಯನ್ನು ಬೆಳೆಯುತ್ತೇವೆ. ನನ್ನ ಸ್ವಂತ ಜೀಮಿನಿನಲ್ಲಿರುವ ಬೋರ್‍ವೆಲ್‍ಗೆ ಮೋಟಾರ್ ಅಳವಡಿಸಲು ನನಗೆ ಸ್ವಲ್ಪ ಹಣ ಬೇಕಾಗಿತ್ತು, ಜೊತೆಗೆ ನನ್ನ ಮಕ್ಕಳ ಶಿಕ್ಷಣಕ್ಕಾಗಿ ಹಣದ ಅವಶ್ಯಕತೆ ಇತ್ತು. ಹೀಗಾಗಿ ಇಲ್ಲಿಗೆ ಬಂದೆ. ಬೋರ್‍ವೆಲ್ ಮಾಲಕ ನಮ್ಮನ್ನು ಜೀತಕ್ಕಿಂತ ಕಡೆಯಾಗಿ ನಡೆಸಿಕೊಂಡಿದ್ದಾರೆ. ಇನ್ನು ಮುಂದೆ ನನಗೆ ಎಂತಹ ಪರಿಸ್ಥಿತಿ ಬಂದರೂ ಇಲ್ಲಿಗೆ ಬರುವುದಿಲ್ಲ.

-ಬಿಡುಗಡೆಗೊಂಡ ಜೀತ ಕಾರ್ಮಿಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News