ಕೋವಿಡ್ ಕೇರ್ ಕೇಂದ್ರಗಳ ಅಸಮರ್ಪಕ ನಿರ್ವಹಣೆ: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಸಮಾಧಾನ

Update: 2020-08-11 16:53 GMT

ಬೆಂಗಳೂರು, ಆ.11: ಬೆಂಗಳೂರು ನಗರದಲ್ಲಿ ಬಿಬಿಎಂಪಿ ಕೋವಿಡ್ ಕೇರ್ ಕೇಂದ್ರಗಳನ್ನು ಅಸಮರ್ಪಕವಾಗಿ ನಿರ್ವಹಿಸುತ್ತಿದೆ ಎಂದು ಆ್ಯಪ್ ಆಧಾರಿತ ಯುಗದಲ್ಲಿ ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡದೇ ಹಳೆ ಕಾಲದ ರೀತಿಯಲ್ಲಿ ನಿರ್ವಹಿಸುತ್ತಿರುವುದಕ್ಕೆ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ತೀವ್ರ ಅಸಮಾಧಾನ ಮತ್ತು ಆಘಾತ ವ್ಯಕ್ತಪಡಿಸಿತು.

ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಇಂಥ ಭೀಕರ ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭದಲ್ಲಿ 6 ತಿಂಗಳು ಕಳೆದರೂ ಆಧುನಿಕ ತಂತ್ರಜ್ಞಾನ ಬಳಕೆ ಮಾಡದೇ ನಿರ್ವಹಣೆ ಮಾಡುತ್ತಿರುವುದರಿಂದ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಓಲಾ, ಊಬರ್ ನಂತಹ ಸಂಸ್ಥೆಗಳು ಆ್ಯಪ್ ಆಧಾರಿತ ಸೇವೆಯನ್ನು ಅತ್ಯಂತ ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಒದಗಿಸುತ್ತಿರುವುದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಒಂದು ಗುಂಡಿಯ ಕಾರ್ಯಾಚರಣೆ ಮೂಲಕ ಅನುಕೂಲ ಒದಗಿಸುತ್ತಿವೆ. ಕೋವಿಡ್‍ನಂತಹ ಪರಿಸ್ಥಿತಿಯನ್ನು ನಿರ್ವಹಿಸಲು ಸರಕಾರವೇಕೆ ತಂತ್ರಜ್ಞಾನ ಬಳಕೆಯಲ್ಲಿ ವಿಫಲವಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಅವರು ಹೇಳಿದರು.

ಪ್ರತಿಯೊಬ್ಬ ಕೋವಿಡ್ ರೋಗಿಗೂ ಸಿ.ಸಿ ಕ್ಯಾಮರಾ ಮೂಲಕ ಆನ್‍ಲೈನ್‍ನಲ್ಲಿ ಬಂಧು, ಬಳಗ, ಸಂಬಂಧಿಕರು ಎಲ್ಲರೂ ಯಾವಾಗ ಬೇಕಾದರೂ ವೀಕ್ಷಿಸಲು ಅತ್ಯಂತ ಕಡಿಮೆ ಖರ್ಚಿನಲ್ಲಿ ಕಲ್ಪಿಸಲು ಸಾಧ್ಯವಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಹಿರಿಯ ಅಧಿಕಾರಿಗಳು ಪ್ರತಿಯೊಂದು ಆಸ್ಪತ್ರೆಯ ಪ್ರತಿಯೊಬ್ಬ ರೋಗಿಯ ಯೋಗಕ್ಷೇಮವನ್ನು ಯಾವ ರೀತಿ ನೋಡಿಕೊಳ್ಳಲಾಗುತ್ತಿದೆ ಎಂಬುದನ್ನು ತಮ್ಮ ಛೇಂಬರ್‍ನಲ್ಲಿಯೆ ಕುಳಿತು ನೋಡಲು ಸಾಧ್ಯವಿರುವಾಗ, ಕೋವಿಡ್ ನಿರ್ವಹಣಾ ವ್ಯವವಸ್ಥೆಯನ್ನು ಇನ್ನಷ್ಟು ದಕ್ಷತೆ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಹೇಳಿದರು.

ಸಾವಿನ ಲೆಕ್ಕ ಪರಿಶೋಧನೆ ಮತ್ತು ಕೋವಿಡ್‍ನಿಂದಾಗಿ ಸಾವಿನ ಕಾರಣಗಳನ್ನು ಹುಡುಕುವತ್ತ ನಮ್ಮ ಕೇಂದ್ರೀಕೃತವಾದರೆ ಕೋವಿಡ್ ನಿಯಂತ್ರಣದ ಸಂಶೋಧನೆಗೆ ಸಹಾಯವಾಗುತ್ತದೆ ಎಂದು ಇಡೀ ಕೋವಿಡ್ ನಿರ್ವಹಣಾ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕೆಂದು ಅವರು ಸಭೆಯಲ್ಲಿ ಸೂಚಿಸಿದರು.

ಕೋವಿಡ್ ನಿಯಂತ್ರಣ ಕೇಂದ್ರಗಳ ಸ್ಥಾಪನೆಗೆ ಬಾಡಿಗೆ ಆಧಾರದ ಮೇಲೆ ಸಲಕರಣೆಗಳನ್ನು ಪಡೆಯುವ ವ್ಯವಸ್ಥೆ ಪ್ರಾರಂಭಿಸಿದಾಗ ಇದ್ದ ಹುರುಪು ಹುಮ್ಮಸ್ಸು ಯಾವ ಅಧಿಕಾರಿಯಲ್ಲೂ ಕಾಣುತ್ತಿಲ್ಲ. ಮುಖ್ಯಮಂತ್ರಿ ಯಾವಾಗ ಬಾಡಿಗೆ ವ್ಯವಸ್ಥೆಯನ್ನು ತಳ್ಳಿಹಾಕಿ ಖರೀದಿ ವ್ಯವಸ್ಥೆಯನ್ನು ಜಾರಿಗೆ ತಂದರೋ ಆಗ ಕೋವಿಡ್ ಕೇರ್ ಕೇಂದ್ರಗಳಿಗೆ ರೋಗಿಗಳು ಬರುತ್ತಿಲ್ಲ ಎಂದು ಅಧಿಕಾರಿಗಳು ರಾಗ ಎಳೆಯಲು ಪ್ರಾರಂಭಿಸಿದರು. ಇದು ಏನನ್ನು ಸೂಚಿಸುತ್ತದೆ ಎಂದು ಸಭೆಯಲ್ಲಿ ಅವರು ಖಾರವಾಗಿ ಪ್ರಶ್ನಿಸಿದರು.

ಐ.ಸಿ.ಯುನಲ್ಲಿರುವ ರೋಗಿಗಳನ್ನು ಎದ್ದು ಓಡಾಡದಂತೆ ಕಟ್ಟಿ ಹಾಕಲಾಗುತ್ತಿದೆ ಎಂದು ಸಭೆಯಲ್ಲಿ ಹಾಜರಿದ್ದ ಶಾಸಕ ಸತೀಶ್ ರೆಡ್ಡಿ, ವೈ.ಎ. ನಾರಾಯಣಸ್ವಾಮಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತಿತರ ಸದಸ್ಯರು ಗಂಭೀರವಾದ ಆರೋಪಗಳನ್ನು ಮಾಡಿದರು. ಈ ಬಗ್ಗೆ ಪರಿಶೀಲಿಸಿ ವಿವರವಾದ ಮಾಹಿತಿಯನ್ನು ನೀಡುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

ಇನ್ನು 15 ದಿನಗಳಲ್ಲಿ ಕೋವಿಡ್ ಕೇರ್ ನಿಯಂತ್ರಣ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಾಡಿರುವ ವ್ಯವಸ್ಥೆಯನ್ನು ದೈನಂದಿನ ಆಧಾರದ ಮೇಲೆ ನೀಡಲಾಗಿರುವ ಸೌಲಭ್ಯಗಳು, ಪರಿಕರಗಳ ಕುರಿತು, ಸಿಬ್ಬಂದಿ ಕುರಿತು ವಸ್ತುಸ್ಥಿತಿ ವರದಿಯನ್ನು ಮತ್ತು ರೋಗಿಗಳಿಗೆ ನೀಡಲಾಗಿರುವ ಸೌಲಭ್ಯಗಳ ಕುರಿತು ವಸ್ತುಸ್ಥಿತಿ ವರದಿಯನ್ನು ಒದಗಿಸಬೇಕೆಂದು ಎಚ್.ಕೆ.ಪಾಟೀಲ್ ಸೂಚಿಸಿದರು.

ಗುಣಮಟ್ಟದ ಸೇವೆ, ಉತ್ತಮ ಚಿಕಿತ್ಸೆ ದಕ್ಷತೆ ಮತ್ತು ಪರಿಣಾಮಕಾರಿಯಾದ ನಿರ್ವಹಣೆ ಕೋವಿಡ್ ನಿಯಂತ್ರಣಕ್ಕೆ ಸಹಕಾರಿಯಾಗಬಲ್ಲದೆಂದು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಪಾಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News