ಎಸೆಸೆಲ್ಸಿ: ಆನ್‍ಲೈನ್ ಪಾಠ ಮಾಡಿದ ವೈ.ಎಸ್.ವಿ.ದತ್ತ ಅವರಿಗೆ ಅಭಿನಂದನೆಗಳ ಮಹಾಪೂರ

Update: 2020-08-11 16:59 GMT

ಬೆಂಗಳೂರು, ಆ.11: ಸೋಮವಾರ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ಬಳಿಕ ಗಣಿತ, ವಿಜ್ಞಾನದ ಮೇಷ್ಟ್ರಾಗಿ ಪಾಠ ಮಾಡಿದ್ದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರಿಗೆ ಸತತವಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ದತ್ತ ಮಾಸ್ಟರ್ ಎಂದೇ ಹೆಸರಾಗಿರುವ ವೈ.ಎಸ್.ವಿ. ದತ್ತ ಸುದೀರ್ಘ 40 ವರ್ಷಗಳ ಕಾಲ ಬೆಂಗಳೂರಿನಲ್ಲಿ ಮನೆ ಪಾಠ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಭೋದಿಸಿದ ಕೀರ್ತಿ ಸಲ್ಲುತ್ತದೆ. ಕೋವಿಡ್-19 ಮಹಾಮಾರಿಯಿಂದ ಪರಿತಪಿಸುತ್ತಿದ್ದ ರಾಜ್ಯದ 10 ನೇ ತರಗತಿಯ ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ವಿಷಯದ ಪಾಠಗಳನ್ನು ಜಾಲತಾಣದ ಮೂಲಕ ಲೈವ್ ಪಾಠ ಹೇಳಿಕೊಟ್ಟಿದ್ದ ದತ್ತ ಅವರಿಗೆ ಸಾವಿರಾರು ಜನರು ಕೃತಜ್ಞತೆ ಸಲ್ಲಿಸಿದ್ದಾರೆ. ಕಬ್ಬಿಣದ ಕಡೆಲೆಯಾಗಿದ್ದ ಗಣಿತದ ಸಮೀಕರಣಗಳನ್ನು ಸುಲಲಿತವಾಗಿ ಬಿಡಿಸುವುದರ ಮೂಲಕ ಮಕ್ಕಳಿಗೆ ಅರ್ಥೈಸುತ್ತಿದ್ದ ದತ್ತ ಅವರ ಪಾಠವು ಸಾವಿರಾರು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸಹಕಾರವಾಗಿರುವುದಾಗಿ ಪೋಷಕರು ತಮ್ಮ ಅನಿಸಿಕೆಯನ್ನು ಬರೆದುಕೊಂಡಿದ್ದಾರೆ.

ನಿಮ್ಮ ತರಗತಿಗಳನ್ನು ಕೇಳಿದ ನನ್ನ ಮಗನಿಗೆ ಡಿಸ್ಟಿಂಕ್ಷನ್ ಬಂದಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡಿದ ನಿಮ್ಮ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಿಮ್ಮ ಪ್ರೀತಿಯ ಆಶೀರ್ವಾದ ವಿದ್ಯಾರ್ಥಿಗಳ ಮೇಲೆ ಸದಾ ಇರಲೆಂದು ಪ್ರಾರ್ಥಿಸುತ್ತೇನೆ ಮತ್ತೊಬ್ಬ ಪೋಷಕರು ಧನ್ಯವಾದ ಸಲ್ಲಿಸಿದ್ದಾರೆ.

ತಮ್ಮ ನಿಸ್ವಾರ್ಥ ಸೇವೆಯಿಂದ ಸ್ಫೂರ್ತಿಯಾಗಿ ಇಂದು ಸಾವಿರಾರು ಮಕ್ಕಳ ಉತ್ತಮ ಫಲಿತಾಂಶಕ್ಕೆ ಕಾರಣರಾಗಿದ್ದೀರಿ ಎಂದು ಇಲ್ಲಿನ ಸೈಯದ್ ಖಲೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನನ್ನ ಮಗಳು ಗಣಿತದಲ್ಲಿ 100 ಅಂಕ ಪಡೆದಿರಲು ದತ್ತ ಅವರ ಪಾಠವೇ ಕಾರಣ ಎಂದು ಕೆಂಪೇಗೌಡನಗರದ ವೆಂಕಟೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News