ನನಗೂ ನನ್ನ ಅಕ್ಕನ ಮಗ ನವೀನ್‍ಗೂ ಯಾವುದೇ ಸಂಪರ್ಕವಿಲ್ಲ: ಶಾಸಕ ಅಖಂಡ ಶ್ರೀನಿವಾಸಮೂರ್ತಿ

Update: 2020-08-12 13:15 GMT

ಬೆಂಗಳೂರು, ಆ. 12: `ನನ್ನ ಅಕ್ಕನ ಮಗ ನವೀನ್‍ಗೂ ನನಗೂ ಯಾವುದೇ ಸಂಪರ್ಕವಿಲ್ಲ. ಘಟನೆಯ ಹಿಂದೆ ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಈ ಬಗ್ಗೆ ಸಿಬಿಐ, ಸಿಐಡಿ ಸೇರಿದಂತೆ ಯಾವುದೇ ತನಿಖೆ ನಡೆಸಲಿ. ಯಾರೇ ತಪ್ಪು ಮಾಡಿದ್ದರೂ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಿ. ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು' ಎಂದು ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನವಿ ಮಾಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, `ಇಪ್ಪತ್ತೈದು ವರ್ಷಗಳಿಂದ ಇಂತಹ ಘಟನೆ ಸಂಭವಿಸಿರಲಿಲ್ಲ. ಇದರ ಹಿಂದೆ ಯಾರೇ ಇದ್ದರೂ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ನಮ್ಮ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಾರೆ. ನಾನು ಹುಟ್ಟಿ, ಬೆಳೆದ ಮನೆಯನ್ನು ಬೆಂಕಿ ಇಟ್ಟು ಸುಟ್ಟು ಹಾಕಿದ್ದಾರೆ' ಎಂದು ಭಾವುಕರಾದರು.

ಕಂದಾಯ ಸಚಿವ ಆರ್.ಅಶೋಕ್ ಅವರು ನಮ್ಮ ಮನೆಗೆ ಬಂದು ನನಗೆ ನನ್ನು ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿದ್ದಾರೆ. ತಮಗೆ ಸೂಕ್ತ ಭದ್ರತೆ ನೀಡುವಂತೆ ಸರಕಾರಕ್ಕೆ ಮನವಿ ಮಾಡಿದ್ದೇನೆ. ನಮ್ಮ ಮನೆ ಮೇಲೆ ಸುಮಾರು 4 ಸಾವಿರ ಜನ ದಾಳಿ ಮಾಡಿದ್ದಾರೆ. ಮಾರಕಾಸ್ತಗಳು, ಪೆಟ್ರೋಲ್ ಬಾಂಬ್ ಬಳಸಿ ಮನೆಗೆ ಬೆಂಕಿ ಹಚ್ಚುವ ಕೃತ್ಯ ಮಾಡಿದ್ದಾರೆ. ಘಟನೆಗೆ ಕಾರಣರಾದವರು ಯಾರೇ ಆಗಿದ್ದರನ್ನು ಅವರನ್ನು ಸರಕಾರ ಬಿಡಬಾರದು ಎಂದು ಅಖಂಡ ಶ್ರೀನಿವಾಸಮೂರ್ತಿ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News