ಬೆಂಗಳೂರಿನ ಘಟನೆಯ ಹಿಂದೆ ಎಸ್‍ಡಿಪಿಐ, ಪಿಎಫ್‍ಐ ಭಾಗಿಯಾದ ಬಗ್ಗೆ ಮಾಹಿತಿ: ಸಚಿವ ಆರ್.ಅಶೋಕ್

Update: 2020-08-12 13:32 GMT

ಬೆಂಗಳೂರು, ಆ. 12: `ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿ, ಬೆಂಕಿ ಇಡುವ ಕೃತ್ಯಗಳನ್ನು ಬಿಹಾರ ಮತ್ತಿತರ ರಾಜ್ಯಗಳಲ್ಲಿ ನಕ್ಸಲೀಯರು ಮಾಡುತ್ತಿದ್ದ ಘಟನೆಗಳನ್ನು ನೋಡುತ್ತಿದ್ದೇವು. ಆದರೆ, ಇದೀಗ ಕೆಲ ದುಷ್ಕರ್ಮಿಗಳು ನಮ್ಮ ರಾಜ್ಯದಲ್ಲಿ ಈ ಕೃತ್ಯಗಳಿಗೆ ಮುಂದಾಗಿದ್ದಾರೆ. ಇಂತಹ ದೇಶದ್ರೋಹಿಗಳಿಗೆ ಪಾಠ ಕಲಿಸಲು ಸರಕಾರ ಬದ್ದವಾಗಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಗಲಭೆಯಲ್ಲಿ ಪಾಲ್ಗೊಂಡಿದ್ದವರು ಯಾವುದೇ ಬಿಲದಲ್ಲಿ ಅಡಗಿದ್ದರೂ ಹೊರಗೆಳೆದು ಕಠಿಣ ಶಿಕ್ಷೆ ನೀಡುವುದು ಖಚಿತ. ಘಟನೆಯ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದೆ. ಇದರ ಹಿಂದೆ ಯಾರೇ ಇರಲಿ, ಯಾವುದೇ ಸಂಘಟನೆ ಇದ್ದರೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ರಾಜಕೀಯ ಅಗತ್ಯವಿಲ್ಲ: ಈ ಘಟನೆಯಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದು ಸರಕಾರದ ಮೊದಲ ಆದ್ಯತೆ. ಗಲಭೆಕೋರರು ಸಮುದಾಯಗಳನ್ನು ಗುರುತಿಸಿ ಗಲಭೆ ನಡೆಸಿರುವುದು ಸ್ಪಷ್ಟವಾಗಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತವರ ಕುಟುಂಬಕ್ಕೆ ಸರಕಾರ ಅಗತ್ಯ ಭದ್ರತೆ ನೀಡಲಿದೆ ಎಂದ ಅವರು, ಘಟನೆಯ ಹಿಂದೆ ಎಸ್‍ಡಿಪಿಐ, ಪಿಎಫ್‍ಐ ಭಾಗಿಯಾದ ಬಗ್ಗೆ ಮಾಹಿತಿ ಇದೆ. ಇಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿ. ಅಂತಹವರ ವಿರುದ್ದ ದೌರ್ಜನ್ಯ ನಡೆದಿದೆ. ಅವರ ಮನೆ ಸುಟ್ಟು ಕರಕಲಾಗಿದೆ. ಒಡವೆಗಳು, ಬೆಳ್ಳಿ ವಸ್ತುಗಳು ದೋಚಲಾಗಿದೆ. ವಾಹನಗಳನ್ನು ಬೆಂಕಿ ಹಚ್ಚಲಾಗಿದೆ. ಶಾಸಕರನ್ನು ಮುಗಿಸುವ ಸಂಚಿನಿಂದಲೇ ಈ ಕೃತ್ಯ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದು ಈಗಾಗಲೇ ಹಲವರನ್ನು ಬಂಧಿಸಲಾಗಿದೆ ಎಂದು ಅಶೋಕ್ ತಿಳಿಸಿದರು.

ಬೆಂಗಳೂರು ನಗರವನ್ನು ತಲ್ಲಣಗೊಳಿಸಿ ಜನರಲ್ಲಿ ಭೀತಿ ಉಂಟು ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಲಾಗಿದೆ. ಪೊಲೀಸರು ಸಮಯ ಪ್ರಜ್ಞೆಯಿಂದ ಆಗಲಿದ್ದ ಮತ್ತಷ್ಟು ಅನಾಹುತ ತಪ್ಪಿದೆ. ಶಿವಾಜಿನಗರ ಸೇರಿ ಹಲವೆಡೆ ಗಲಭೆ ನಡೆಸಲು ಸಂಚು ರೂಪಿಸಿದ್ದರು. ಆದರೆ, ಪೊಲೀಸರು ಇದಕ್ಕೆ ಯಾವುದೇ ರೀತಿಯ ಅವಕಾಶ ನೀಡದೆ ಕೇವಲ ನಾಲ್ಕು ಗಂಟೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಅಶೋಕ್ ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News