ಬೆಂಗಳೂರು: ಗೋಲಿಬಾರ್ ಗೆ ಮೂವರು ಯುವಕರು ಬಲಿ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Update: 2020-08-12 14:59 GMT
ವಾಜೀದ್ ಖಾನ್- ಯಾಸೀರ್

ಬೆಂಗಳೂರು, ಆ.12: ಕಾವಲ್ ಭೈರಸಂದ್ರ ಹಿಂಸಾಚಾರದ ವೇಳೆ ನಡೆದ ಪೊಲೀಸ್ ಗೋಲಿಬಾರ್ ನಲ್ಲಿ ಮೂವರು ಯುವಕರು ಮೃತಪಟ್ಟಿದ್ದು, ಹೆತ್ತ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಡಿಜೆ ಹಳ್ಳಿ ನಿವಾಸಿ ವಾಜೀದ್ ಖಾನ್(20), ಯಾಸೀರ್(21) ಹಾಗೂ ನಾಗವಾರ ನಿವಾಸಿ ಶೇಕ್ ಸಿದ್ದೀಖಿ(34) ಮೃತರು ಎಂದು ತಿಳಿದುಬಂದಿದೆ.

ಹತ್ತನೇ ತರಗತಿ ವ್ಯಾಸಂಗ ಮಾಡಿದ್ದ ವಾಜೀದ್ ಖಾನ್, ದಿನಗೂಲಿಕಾರ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದ. ಆದರೆ, ಮಂಗಳವಾರ ರಾತ್ರಿ ಸ್ನೇಹಿತರನ್ನು ಭೇಟಿಯಾಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಬಂದಿದ್ದ. ಗಲಭೆ ಸ್ಥಳದಲ್ಲಿ ವಾಜೀದ್ ಹಾಗೂ ಸ್ನೇಹಿತರು ಗುಂಪು ಸೇರಿದ್ದರು ಎನ್ನಲಾಗಿದ್ದು, ಪೊಲೀಸರು ಹಾರಿಸಿದ್ದ ಗುಂಡು ವಾಜೀದ್ ದೇಹಕ್ಕೆ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮತ್ತೋರ್ವ, ಡಿ.ಜೆ.ಹಳ್ಳಿ ನಿವಾಸಿಯಾದ ಯಾಸೀರ್ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಎಂದಿನಂತೆ ಮನೆಗೆ ವಾಪಸ್ಸು ಆಗುವ ವೇಳೆ ಗಲಾಟೆ ನೋಡಿ ಸ್ಥಳದಲ್ಲಿ ಇದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಹಾರಿಸಿದ ಗುಂಡು ತಗಲಿ ರಸ್ತೆಯಲ್ಲಿ ಬಿದ್ದಿದ್ದರು. ತದನಂತರ, ಸ್ನೇಹಿತರು ಸಮೀಪದ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾರೆ. ಆದರೆ, ಆ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರನ್ನು ಮಾತ್ರ ದಾಖಲಿಸಿಕೊಳ್ಳುವುದಾಗಿ ವೈದ್ಯರು ಹೇಳಿದ್ದರು. ನಂತರ ಬೇರೊಂದು ಆಸ್ಪತ್ರೆಗೆ ಯಾಸೀರ್ ಅವರನ್ನು ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಯಾಸೀರ್ ಮೃತಪಟ್ಟಿದ್ದಾನೆ.

ಮೂರನೇ ವ್ಯಕ್ತಿಯನ್ನು ನಾಗವಾರ ನಿವಾಸಿ ಶೇಕ್ ಸಿದ್ದೀಖಿ ಎನ್ನಲಾಗಿದ್ದು, ಆಟೊ ಚಾಲನೆ ಮಾಡಿಕೊಂಡು ಗಲಾಟೆ ಸ್ಥಳಕ್ಕೆ ಬಂದಿದ್ದ. ಈ ವೇಳೆ ಪ್ರತಿಭಟನಾಕಾರರ ಕಡೆ ಹಾರಿಸಿದ ಗುಂಡು ಸಿದ್ದೀಖಿಗೆ ತಗಲಿ, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾವಿನ ಸುದ್ದಿ ಗೊತ್ತಿರಲಿಲ್ಲ

ಮಗ ವಾಜೀದ್ ಖಾನ್, ಆಸ್ಪತ್ರೆಗೆ ದಾಖಲಾದ ಸುದ್ದಿ ಪೋಷಕರಿಗೆ ಗೊತ್ತೇ ಇರಲಿಲ್ಲ. ಸಾವಿನ ಸುದ್ದಿ ತಿಳಿದ ತಾಯಿ ಹಾಗೂ ಸಹೋದರಿ ಬುಧವಾರ ಬೆಳಗ್ಗೆ ಡಿ.ಜೆ.ಹಳ್ಳಿ ಠಾಣೆಗೆ ಬಂದು ಮಾಹಿತಿ ಪಡೆದುಕೊಂಡರು. ಮಗ ಮೃತಪಟ್ಟಿರುವ ವಿಷಯವನ್ನು ಪೊಲೀಸರು ಹೇಳುತ್ತಿದ್ದಂತೆ ಸಹೋದರಿ ಪ್ರಜ್ಞೆ ತಪ್ಪಿ ಬಿದ್ದರು. ತದನಂತರ ಅವರನ್ನು ಆಟೊದಲ್ಲೇ ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ದರು.

ಮೃತ ಪೈಕಿ ಇಬ್ಬರಿಗೆ ಕೊರೋನ ದೃಢ ?

ಕಾವಲ್ ಭೈರಸಂದ್ರ ಗಲಾಟೆ ಪ್ರಕರಣ ಸಂಬಂಧ ಪೊಲೀಸರ ಗುಂಡೇಟಿಗೆ ಬಲಿಯಾದ ಇಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಘಟನೆ ಸಂಬಂಧ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸುವ ವೇಳೆ ಕೋವಿಡ್-19 ಸೋಂಕಿನ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ.

ಗೋಲಿಬಾರ್ ನಲ್ಲಿ ಮೃತಪಟ್ಟವರ ಮೃತದೇಹಗಳನ್ನು ಮನೆಗೆ ತೆಗೆದುಕೊಂಡು ಹೋಗದಂತೆ ಹಾಗೂ ಮೆರವಣಿಗೆ ನಡೆಸದಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ದಿನಗೂಲಿ ನಂಬಿಕೊಂಡು, ಕುಟುಂಬಗಳಿಗೆ ಆರ್ಥಿಕವಾಗಿ ಆಸರೆಯಾಗಿದ್ದ ವಾಜೀದ್ ಖಾನ್ ಹಾಗೂ ಯಾಸೀರ್ ಮೃತಪಟ್ಟ ಸುದ್ದಿ ಕೇಳಿ, ಅವರ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಬುಧವಾರ ಇಲ್ಲಿನ ಬೌರಿಂಗ್ ಆಸ್ಪತ್ರೆ ಮುಂಭಾಗ ಜಮಾಯಿಸಿದ ಮೃತರ ಪೋಷಕರು, ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ಏಕಾಏಕಿ ಗುಂಡು ಹಾರಿಸಿ, ಅವರನ್ನು ಹತ್ಯೆ ಮಾಡಲಾಗಿದೆ. ಈಗ ನಮಗೆ ಆಸರೆ ಯಾರು ಎಂದು ಪ್ರಶ್ನಿಸಿ ಕಣ್ಣೀರು ಹಾಕಿದರು.

ಆಂಜನೇಯ ದೇವಾಲಯ ರಕ್ಷಿಸಿದ ಮುಸ್ಲಿಮರು

ಇಲ್ಲಿನ ಕಾವಲ್ ಭೈರಸಂದ್ರ ಗಲಾಟೆ ಪ್ರಕರಣದಲ್ಲಿ ಪ್ರತಿಭಟನಾಕಾರರಿಂದ ಆಂಜನೇಯಸ್ವಾಮಿ ದೇವಾಲಯವನ್ನು ರಕ್ಷಿಸಲು ಸ್ಥಳೀಯ ಮುಸ್ಲಿಮ್ ಯುವಕರು ಮಾನವ ಸರಪಳಿ ನಿರ್ಮಿಸಿ ರಕ್ಷಣೆ ಮಾಡಿರುವ ವಿಡಿಯೊ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ನಗರದ ಡಿಜೆಹಳ್ಳಿ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರದ ನಡುವೆಯೂ ಡಿಜೆ ಹಳ್ಳಿ ಸ್ಥಳೀಯ ಮುಸ್ಲಿಮ್ ಯುವಕರು ಮಾನವ ಸರಪಳಿ ನಿರ್ಮಿಸಿ ದೇಗುಲದ ಮೇಲಾಗಬಹುದಾಗಿದ್ದ ಸಂಭಾವ್ಯ ದಾಳಿಯನ್ನು ತಡೆದು ಕೋಮು ಸೌಹಾರ್ಧತೆ ಮೆರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News