ಶಾಂತವಾದ ಬೆಂಗಳೂರಿನ ಹಿಂಸಾಚಾರದ ಪ್ರದೇಶ: ಪೊಲೀಸರಿಂದ ಕಟ್ಟೆಚ್ಚರ

Update: 2020-08-12 16:30 GMT

ಬೆಂಗಳೂರು, ಆ.12: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ಪಿ.ನವೀನ್ ಎಂಬಾತ ಫೇಸ್‍ಬುಕ್‍ನಲ್ಲಿ ಕೋಮು ಪ್ರಚೋದಕ, ಅವಹೇಳನಕಾರಿ ಪೋಸ್ಟ್ ಹರಿಬಿಟ್ಟ ವಿರೋಧಿಸಿ ಉಂಟಾದ ಗಲಾಟೆ ಪ್ರಕರಣ ಸಂಬಂಧ ಇಲ್ಲಿನ ಕಾವಲ್ ಭೈರಸಂದ್ರ, ಟ್ಯಾನರಿ ರಸ್ತೆ, ಡಿಜೆ ಹಾಗೂ ಕೆಜಿ ಹಳ್ಳಿ ಪ್ರದೇಶಗಳ ಶಾಂತವಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ.

ಮಂಗಳವಾರ ರಾತ್ರಿಯಿಂದಲೇ ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.ಬುಧವಾರವೂ ಈ ಪ್ರದೇಶದಲ್ಲಿ ಪೊಲೀಸರು ಎಲ್ಲ ಮಾರ್ಗಗಳಿಗೂ ಬ್ಯಾರಿಕೇಡ್ ಹಾಕಿ, ಬಂದ್ ಮಾಡಿದ್ದರು. ಇನ್ನು, ಹೊರಗಡೆ ಯಾರು ತೆರಳದಂತೆ ಪೊಲೀಸರು ನಿಗಾವಹಿಸಿದ್ದರು.

ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಉಂಟಾದ ಗಲಭೆ ತಡರಾತ್ರಿ 2 ಗಂಟೆ ಸುಮಾರಿಗೆ ಮುಂಜಾಗ್ರತಾ ಕ್ರಮವಾಗಿ ಕಫ್ರ್ಯೂ ಸಹ ಜಾರಿ ಮಾಡಲಾಗಿದೆ. ಇನ್ನೂ ರಸ್ತೆಯುದ್ದಕ್ಕೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು

ಶಿವಾಜಿನಗರ ಬಂದ್: ನಗರದ ಪೂರ್ವ ವಿಭಾಗದಲ್ಲಿ ಗಲಾಟೆ ನಡೆದ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಶಿವಾಜಿನಗರ ಪ್ರದೇಶವನ್ನು ಬಂದ್ ಮಾಡಲಾಗಿತ್ತು. ವಾಣಿಜ್ಯ ಕೇಂದ್ರಗಳು, ಬಸ್ ಸಂಚಾರ ಸಹ ಸ್ಥಗಿತವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ನಗರದೆಲ್ಲೆಡೆ ಪೊಲೀಸರು: ಬೆಂಗಳೂರು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನೆಲೆ ಇಲ್ಲಿನ ಆರ್ ಟಿನಗರ, ಜೆಸಿನಗರ, ಗುರಪ್ಪನಪಾಳ್ಯ, ಜೆಜೆನಗರ, ಚಾಮರಾಜಪೇಟೆ, ಕಲಾಸಿಪಾಳ್ಯ, ಬಿಟಿಎಂ ಲೇಔಟ್, ಶಾಂತಿನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿ, ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News