ಬೆಂಗಳೂರು: ಹಿಂಸಾಚಾರದ ಪ್ರದೇಶದಲ್ಲಿ ಅಘೋಷಿತ ಬಂದ್ ವಾತಾವರಣ; ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ

Update: 2020-08-12 16:47 GMT

ಬೆಂಗಳೂರು, ಆ. 12: ಪ್ರವಾದಿ ಅವರ ಕುರಿತು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ಎನ್ನಲಾದ ನವೀನ್ ಎಂಬವರು ಫೇಸ್‍ಬುಕ್‍ನಲ್ಲಿ ಹಾಕಿದ್ದರೆನ್ನಲಾದ ಅವಹೇಳನಕಾರಿ ಸಂದೇಶದ ಹಿನ್ನೆಲೆಯಲ್ಲಿ ಉದ್ರಿಕ್ತ ಜನತೆ ಹಾಗೂ ಕಿಡಿಗೇಡಿಗಳ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರಕ್ಷುಬ್ಧಗೊಂಡಿದ್ದ ದೇವರಜೀವನಹಳ್ಳಿ, ಕಾಡುಗೊಂಡನಹಳ್ಳಿ ಮತ್ತು ಕಾವಲ್ ಭೈರಸಂದ್ರದಲ್ಲಿ ಪ್ರದೇಶದಲ್ಲಿ ಅಘೋಷಿತ ಬಂದ್ ವಾತಾವರಣವಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಮೂರು ಮಂದಿ ಮೃತಪಟ್ಟಿದ್ದು, ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರನ್ನು ಡಿ.ಜೆ.ಹಳ್ಳಿ ನಿವಾಸಿ ವಾಜೀದ್ ಖಾನ್(20), ಯಾಸೀರ್(21) ಹಾಗೂ ನಾಗವಾರ ನಿವಾಸಿ ಶೇಕ್ ಸಿದ್ದೀಖಿ(34) ಎಂದು ಗುರುತಿಸಲಾಗಿದೆ. ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾವನ ಹಕ್ಕುಗಳ ಆಯೋಗದ ಸೂಚನೆಯಂತೆ ಜಿಲ್ಲಾ ಮ್ಯಾಜಿಸ್ಟ್ರೀಟ್ ತನಿಖೆಗೆ ರಾಜ್ಯ ಸರಕಾರ ತೀರ್ಮಾನಿಸಿದೆ.

ಕಾವಲ್ ಭೈರಸಂದ್ರ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ಎಸ್‍ಡಿಪಿಐ ಮುಖಂಡ ಮುಝಾಮಿಲ್ ಪಾಷಾ ಸೇರಿ 145 ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಮಂಗಳವಾರ ರಾತ್ರಿಯಿಂದಲೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಮೊದಲಿಗೆ 47 ಮಂದಿಯನ್ನು ವಶಕ್ಕೆ ಪಡೆದು, ಮಾಹಿತಿ ಸಂಗ್ರಹಿಸಿ ತದನಂತರ, ಒಟ್ಟು 145 ಜನರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರೆಲ್ಲಾ ಬಹುತೇಕರು ಡಿ.ಜೆ.ಹಳ್ಳಿ, ನಾಗವಾರ ಹಾಗೂ ಕಾವಲ್‍ಭೈರಸಂದ್ರ ನಿವಾಸಿಗಳೆಂದು ಗೊತ್ತಾಗಿದೆ. ಈ ಮಧ್ಯೆ ಪ್ರವಾದಿ ಮುಹಮ್ಮದ್(ಸ)ರ ಬಗ್ಗೆ ಅವಹೇಳನಕಾರಿ ಸಂದೇಶ ಹಾಕಿದ ನವೀನ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ.

ಶಾಂತಿ, ಸುವ್ಯವಸ್ಥೆ ಕಾಪಾಡಲು ರಾಜ್ಯ ಸರಕಾರ ಮುಂದಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೆ ಮೊಕ್ಕಾಂ ಹೂಡಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು ಕಾವಲ್ ಭೈರಸಂದ್ರ, ದೇವರಜೀವನ ಹಳ್ಳಿ, ಕಾಡುಗೊಂಡನಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು, ಕೃತ್ಯದ ಹಿಂದಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಆಡಳಿತಾರೂಢ ಬಿಜೆಪಿಯ ಮುಖಂಡರು, ಕಾಂಗ್ರೆಸ್ ಹಾಗೂ ಎಸ್‍ಡಿಪಿಐ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಗಲಾಟೆ ಪ್ರಕರಣ ಸಂಬಂಧ ಎಸ್‍ಡಿಪಿಐ ಪಕ್ಷದ ಮುಖಂಡ ಮುಝಾಮಿಲ್ ಪಾಷಾ ಮೊದಲ ಆರೋಪಿಯಾಗಿದ್ದು, ಜನರನ್ನು ಜಮಾವಣೆಗೊಳಿಸುವ ಹಾಗೂ ಗಲಭೆಗೆ ಕುಮ್ಮಕ್ಕು ನೀಡಿದ ಆರೋಪ ಈತನ ಮೇಲಿದೆ ಎನ್ನಲಾಗಿದೆ. ಅದೇ ರೀತಿ ಶಿವಾಜಿನಗರದಲ್ಲಿ ಧಾರ್ಮಿಕ ಶಾಲೆ ನಡೆಸುತ್ತಿರುವ ಸೈಯದ್ ಅಝ್ನಾನ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಈ ನಡುವೆ ಕಾವಲ್‍ಭೈರಸಂದ್ರ ಗಲಾಟೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದು, ಕಾವಲ್ ಭೈರಸಂದ್ರ ಗಲಾಟೆ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವುದರ ಜತೆಗೆ, ಹೆಚ್ಚು ಸಿಬ್ಬಂದಿ ನಿಯೋಜಿಸಿ ಗಲಭೆ ನಿಯಂತ್ರಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪ್ರವೀಣ್ ಸೂದ್ ಅವರಿಗೆ ಸೂಚಿಸಿದ್ದಾರೆ.

ಚಿತಾವಣೆ: ಮುಂಬರುವ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಸ್ಪರ್ಧಾಕಾಂಕ್ಷಿಗಳ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು, ಆ ಹಿನ್ನೆಲೆಯಲ್ಲಿ ಈ ಹಿಂಸಾಚಾರ ನಡೆಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಕೊರೋನ ಸೋಂಕಿನ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್‍ಡೌನ್ ಅವಧಿಯಲ್ಲಿ ಪೊಲೀಸರು ಕಿರುಕುಳದಿಂದ ಬೇಸತ್ತಿದ್ದ ಕೆಲ ದುಷ್ಕರ್ಮಿಗಳು ಪರಿಸ್ಥಿತಿ ದುರ್ಲಾಭ ಪಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಬೆಂಗಳೂರು ವ್ಯಾಪ್ತಿಯೊಳಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಪರಿಸ್ಥಿತಿಯನ್ನು ನಿಯಂತ್ರಿಸಬೇಕು. ಅಲ್ಲದೆ, ಸ್ಥಳೀಯ ಮುಸ್ಲಿಮ್ ಮುಖಂಡರ ಜತೆಗೂ ಸಮಾಲೋಚನೆ ನಡೆಸುವಂತೆಯೂ ಯಡಿಯೂರಪ್ಪ ಸೂಚಿಸಿದ್ದು, ಅದೇ ರೀತಿ, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರೂ ಸ್ಥಳದಲ್ಲೇ ಮೊಕ್ಕಂ ಹೂಡಿದ್ದು ಪರಿಸ್ಥಿತಿಯನ್ನು ಅವಲೋಕಿಸಿದ್ದು, ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ಕಲಂ 144ರ ಅನ್ವಯ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿ ಸಾರ್ವಜನಿಕರಿಗೆ ಧಕ್ಕೆ ಉಂಟಾಗುವಂಥ ಕೃತ್ಯದಲ್ಲಿ ತೊಡಗುವಂತಿಲ್ಲ. ಇಬ್ಬರಿಗಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಹಾಗೂ ಅನಗತ್ಯವಾಗಿ ಸಂಚರಿಸುವಂತಿಲ್ಲ ಎಂದು ಸೂಚಿಸಲಾಗಿದೆ. ಮೆರವಣಿಗೆ ಮತ್ತು ಸಭೆಗಳನ್ನು ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಪ್ರದೇಶದಲ್ಲಿ ಪೊಲೀಸರು ಎಲ್ಲ ಮಾರ್ಗಗಳಿಗೂ ಬ್ಯಾರಿಕೇಡ್ ಹಾಕಿ, ಬಂದ್ ಮಾಡಿದ್ದರು. ಇನ್ನು, ಹೊರಗಡೆ ಯಾರು ತೆರಳದಂತೆ ಪೊಲೀಸರು ನಿಗಾವಹಿಸಿದ್ದರು.

ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಉಂಟಾದ ಗಲಭೆ ತಡರಾತ್ರಿ 2 ಗಂಟೆ ಸುಮಾರಿಗೆ ಮುಂಜಾಗ್ರತಾ ಕ್ರಮವಾಗಿ ರಸ್ತೆಯುದ್ದಕ್ಕೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಗರದ ಪೂರ್ವ ವಿಭಾಗದಲ್ಲಿ ಗಲಾಟೆ ನಡೆದ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಶಿವಾಜಿನಗರ ಪ್ರದೇಶವನ್ನು ಬಂದ್ ಮಾಡಲಾಗಿತ್ತು. ವಾಣಿಜ್ಯ ಕೇಂದ್ರಗಳು, ಬಸ್ ಸಂಚಾರವೂ ಸ್ಥಗಿತವಾಗಿತ್ತು.

ನಗರದೆಲ್ಲೆಡೆ ಪೊಲೀಸರು: ಬೆಂಗಳೂರು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನೆಲೆ ಇಲ್ಲಿನ ಆರ್ ಟಿನಗರ, ಜೆಸಿನಗರ, ಗುರಪ್ಪನಪಾಳ್ಯ, ಜೆಜೆನಗರ, ಚಾಮರಾಜಪೇಟೆ, ಕಲಾಸಿಪಾಳ್ಯ, ಬಿಟಿಎಂ ಲೇಔಟ್, ಶಾಂತಿನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿ, ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News