ನವೀನ್ ಬಂಧನದ ವದಂತಿಯಿಂದ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪ

Update: 2020-08-12 17:15 GMT

ಬೆಂಗಳೂರು, ಆ.12: ಪ್ರವಾದಿ ಅವರ ಬಗ್ಗೆ ನಿಂದನಾತ್ಮಕ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಆರೋಪ ಎದುರಿಸುತ್ತಿರುವ ನವೀನ್‍ನನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿ, ಠಾಣೆಯಲ್ಲಿ ಇರಿಸಿದ್ದಾರೆ ಎಂಬ ವದಂತಿ ಹಬ್ಬಿದ್ದರಿಂದ ಮಂಗಳವಾರ ರಾತ್ರಿ ಉದ್ರಿಕ್ತ ಗುಂಪು ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.

ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡ ಕೆಲವು ಮಾದಕ ವ್ಯಸನಿಗಳು ಹಾಗೂ ಮದ್ಯಪಾನ ಮಾಡಿದವರ ಗುಂಪು, ಪೊಲೀಸ್ ಠಾಣೆ ಆವರಣದಲ್ಲಿ ಕಲ್ಲು ತೂರಾಟ ನಡೆಸಿ, ಪೊಲೀಸರ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ, ಕಾರನ್ನು ಜಖಂಗೊಳಿಸಿದ್ದಾರೆ ಎಂದು ಸ್ಥಳೀಯ ಎಸ್‍ಡಿಪಿಐ ಮುಖಂಡ ಮುಝಮ್ಮಿಲ್ ಪಾಷ ಆರೋಪಿಸಿದ್ದಾರೆ.

ಪ್ರವಾದಿಯನ್ನು ನಿಂದಿಸಿದವರು ಯಾರೇ ಇದ್ದರೂ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪೊಲೀಸರಿಗೆ ತಿಳಿಸಿದ್ದರು. ಅದರಂತೆ, ನಾವು ದೂರು ನೀಡಲು ಪೊಲೀಸ್ ಠಾಣೆಗೆ ಬಂದೆವು. ಎರಡು ಗಂಟೆಯಲ್ಲಿ ನವೀನ್‍ನನ್ನು ಬಂಧಿಸುವುದಾಗಿ ತಿಳಿಸಿ ಪೊಲೀಸರು ಅಲ್ಲಿಂದ ತೆರಳಿದರು. ಇದೇ ವೇಳೆ ಆತನನ್ನು ಬಂಧಿಸಿ ಠಾಣೆಯಲ್ಲಿ ಇರಿಸಲಾಗಿದೆ ಎಂಬ ಗಾಳಿ ಸುದ್ದಿ ಹರಡುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಪರಿಸ್ಥಿತಿ ಕೈ ಮೀರಿತು ಎಂದು ಡಿ.ಜೆ.ಹಳ್ಳಿಯ ಮೌಲಾನ ಫಿರ್ದೋಸ್ ಅಖ್ತರ್ ತಿಳಿಸಿದ್ದಾರೆ.

ಸ್ವರಾಜ್ ಇಂಡಿಯಾದ ಝಿಯಾ ನೋಮಾನಿ ಮಾತನಾಡಿ, ದೂರು ನೀಡಿದ ಅರ್ಧಗಂಟೆಯಲ್ಲಿ ಪೊಲೀಸರು ನವೀನ್‍ನನ್ನು ಬಂಧಿಸಿದ್ದಾರೆ. ಪೊಲೀಸರು ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಯಾಗದಂತೆ ಅವರು ಸಾಕಷ್ಟು ಪ್ರಯತ್ನಪಟ್ಟರು. ಶಾಸಕರಾದ ಝಮೀರ್ ಅಹ್ಮದ್ ಖಾನ್, ರಿಝ್ವಾನ್ ಅರ್ಶದ್ ಅವರು ಧ್ವನಿವರ್ಧಕದ ಮೂಲಕ ಜನರ ಮನವೊಲಿಸಲು ಪ್ರಯತ್ನಿಸಿದರೂ ಯಾವುದೆ ಪ್ರಯೋಜನವಾಗಲಿಲ್ಲ ಎಂದರು.

ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಮ್ಮ ದೇಶದ ಸಂವಿಧಾನ, ಕಾನೂನಿನ ಮೇಲೆ ನಮಗೆ ನಂಬಿಕೆಯಿದೆ. ಈ ಘಟನೆಗೆ ಕಾರಣಕರ್ತರಾದವರಿಗೆ ಶಿಕ್ಷೆಯಾಗುತ್ತದೆ ಎಂದು ಅವರು ಹೇಳಿದರು.

ಪ್ರವಾದಿಯ ನಿಂದನೆಯನ್ನು ಯಾವುದೆ ಕಾರಣಕ್ಕೂ ನಾವು ಸಹಿಸುವುದಿಲ್ಲ. ಆದರೆ, ಇದೇ ವೇಳೆ ಗಲಭೆಗಳಿಗೆ ಕುಮ್ಮಕ್ಕು ನೀಡುವಂತಹ ಕೆಲಸವನ್ನು ಯಾರು ಮಾಡಬಾರದು. ಪ್ರವಾದಿಯನ್ನು ನಿಂದಿಸಿದವರು ಶಿಕ್ಷೆಗೆ ಗುರಿಯಾಗುತ್ತಾರೆ. ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ನಂಬಿಕೆಯಿದೆ. ಯಾವುದೆ ಕಾರಣಕ್ಕೂ ಯಾರು ಸಹ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು ಎಂದು ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಮನವಿ ಮಾಡಿದ್ದಾರೆ.

ಗಲಭೆ ಪೀಡಿತ ಪ್ರದೇಶದಲ್ಲಿ ನಾನು ಹಾಗೂ ಶಿವಾಜಿನಗರ ಶಾಸಕ ರಿಝ್ವಾನ್ ಅರ್ಶದ್ ರಾತ್ರಿ 3.30ರವರೆಗೆ ಇದ್ದು ಜನರ ಮನವೊಲಿಕೆಗೆ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಆರೋಪಿ ನವೀನ್‍ನನ್ನು ಈಗಾಗಲೆ ಬಂಧಿಸಲಾಗಿದೆ. ಕಾನೂನು ಆತನಿಗೆ ಶಿಕ್ಷೆ ಕೊಡಲಿದೆ. ನಾವು ಕಾನೂನನ್ನು ಕೈಗೆತ್ತಿಕೊಂಡು ಏನನ್ನೂ ಸಾಧಿಸಲು ಆಗುವುದಿಲ್ಲ. ಶಾಂತ ರೀತಿಯಲ್ಲಿ ಹೋರಾಟ ರೂಪಿಸಿದ್ದರೆ ಅದು ಮತ್ತಷ್ಟು ಪರಿಣಾಮಕಾರಿಯಾಗುತ್ತಿತ್ತು. ಈ ಘಟನೆ ಕುರಿತು ಚರ್ಚಿಸಲು ಅಮೀರೆ ಶರೀಅತ್ ಪುರಭವನದಲ್ಲಿ ಯಾವುದೆ ಸಭೆಯನ್ನು ಕರೆದಿಲ್ಲ. ದಯವಿಟ್ಟು ವದಂತಿಗಳಿಗೆ ಕಿವಿಗೊಡಬೇಡಿ.

-ಝಮೀರ್ ಅಹ್ಮದ್ ಖಾನ್, ಕಾಂಗ್ರೆಸ್ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News