ಧರ್ಮ ನಿಂದನೆ, ಪೊಲೀಸ್ ನಿರ್ಲಕ್ಷವೆ ಅಶಾಂತಿಯ ವಾತಾವರಣಕ್ಕೆ ಕಾರಣ: ಎಸ್‍ಡಿಪಿಐ

Update: 2020-08-12 17:55 GMT

ಬೆಂಗಳೂರು, ಆ.12: ಡಿಜೆ ಹಳ್ಳಿಯಲ್ಲಿ ನಿನ್ನೆ ನಡೆದ ಪೊಲೀಸ್ ಗೋಲಿಬಾರ್, ಇಸಾಮ್ ಧರ್ಮ ನಿಂದನೆ ಹಾಗೂ ಅಶಾಂತ ಪರಿಸ್ಥಿತಿಗೆ ಕಾರಣಕರ್ತನಾದ ಧರ್ಮನಿಂದನೆ ಮಾಡಿದ ವ್ಯಕ್ತಿಯನ್ನು ಬಂಧಿಸಲು ಮೀನಾಮೇಷ ಎಣಿಸಿದ ಪೊಲೀಸರ ಶೋಚನಿಯವೆ ಈ ವೈಫಲ್ಯಕ್ಕೆ ಕಾರಣ ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ತಿಳಿಸಿದ್ದಾರೆ.

ಬುಧವಾರ ನಗರದ ಹಮೀದ್ ಷಾ ಕಾಂಪ್ಲೆಕ್ಸ್ ನಲ್ಲಿರುವ ಎಸ್‍ಡಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ಥಳೀಯ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಸೋದರಳಿಯ ನವೀನ್ ಎಂಬಾತನು ಕೆಲ ಸಮಯಗಳಿಂದ ಮುಸ್ಲಿಮರನ್ನು ಅವಮಾನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದು ಪ್ರವಾದಿ ನಿಂದನೆಯ ಚಿತ್ರ ಹಾಗೂ ಬರಹಗಳನ್ನು ಹಾಕಿದ್ದನು ಎಂದರು.

ಈ ವಿಚಾರದ ಬಗ್ಗೆ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿ ನವೀನ್‍ನನ್ನು ಬಂಧಿಸಬೇಕು ಎಂದು ಒತ್ತಾಯಿಸಿದಾಗ ಠಾಣಾಧಿಕಾರಿ ಹಾಗೂ ಎಸಿಪಿಯವರು 2 ಗಂಟೆಗಳವರೆಗೆ ಕಾಯಿರಿ ಎಂದು ಜಾರಿಕೆಯ ಉತ್ತರ ನೀಡಿದ್ದರು. ಇದರಿಂದ ಮೊದಲೇ ಆಕ್ರೋಶಗೊಂಡಿದ್ದ ಜನಸಮೂಹ ಠಾಣೆಯ ಬಳಿ ಜಮಾಯಿಸಿದರು ಹಾಗೂ ಅಶಾಂತಿಯುತ ವಾತಾವರಣ ನಿರ್ಮಾಣಗೊಂಡಿತ್ತು ಎಂದು ಅವರು ತಿಳಿಸಿದರು.

ಪೊಲೀಸ್ ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸಿದ್ದರೆ ಈ ಘಟನೆಯನ್ನು ಖಂಡಿತ ತಪ್ಪಿಸಬಹುದಾಗಿತ್ತು. ಈ ಹಿಂದೆ ಆಸಿಫ್ ಎಂಬವರು ಶಾಸಕ ಅಖಂಡ ಶ್ರೀನಿವಾಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದರಿಂದ ಕೇವಲ ಹತ್ತೇ ನಿಮಿಷದಲ್ಲಿ ಅಧಿಕಾರಿಗಳು ಆಸಿಫ್ ರನ್ನು ಬಂಧಿಸಿದ್ದರು. ಆದರೆ ಇಲ್ಲಿ ಸ್ಥಳೀಯ ಸಮುದಾಯವು ಆಕ್ರೋಶಗೊಂಡಿದ್ದರೂ ಪೊಲೀಸರು ತೋರಿದ ತಾರತಮ್ಯ ಹಾಗೂ ನಿರ್ಲಕ್ಷ್ಯ ಧೋರಣೆಯೇ ಪರಿಸ್ಥಿತಿ ಕೈಮೀರಲು ಕಾರಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಪ್ರತಿಭಟನಾಕಾರರ ಎದೆ ಭಾಗಕ್ಕೆ ಗುಂಡು ಹಾರಿಸಿದ್ದರಿಂದ ಮೂರು ಅಮೂಲ್ಯ ಜೀವಗಳನ್ನು ಬಲಿ ಪಡೆದುಕೊಂಡಿರುವುದು ಅತ್ಯಂತ ಖಂಡನೀಯವಾಗಿದೆ. ಜನತೆಯ ಭಾವನೆಯ ಮೇಲೆ ಸವಾರಿ ಮಾಡುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವ ಕೆಲ ಪೊಲೀಸ್ ಅಧಿಕಾರಿಗಳು ಇಂತಹ ಅಹಿತಕರ ಸನ್ನಿವೇಶ ಸೃಷ್ಟಿಯಾಗಲು ಕಾರಣ ಎಂದು ಅಬ್ದುಲ್ ಹನ್ನಾನ್ ಪುನರುಚ್ಚರಿಸಿದರು.

ಅಶಾಂತಿ ತಲೆದೋರಿದ ಸಂದರ್ಭದಲ್ಲಿ ಜನರನ್ನು ಶಾಂತಗೊಳಿಸಲು ಸ್ಥಳೀಯ ಪೊಲೀಸರು ಮತ್ತು ಸ್ಥಳೀಯ ಉಲಮಾಗಳ ಜೊತೆಗೆ ಸಹಕರಿಸುತ್ತಾ ಶತಪ್ರಯತ್ನಗೈದ ಸ್ಥಳೀಯ ಎಸ್‍ಡಿಪಿಐ ನಾಯಕರನ್ನು ಬಂಧಿಸಿದ ಹಾಗೂ ಘಟನೆಯನ್ನು ಅವರ ಮೇಲೆ ಹೊರಿಸುತ್ತಿರುವ ಪೊಲೀಸರ ಕ್ರಮ ಅತ್ಯಂತ ಖಂಡನೀಯ. ಇದು ಅವರ ದಕ್ಷತೆ, ಪ್ರಾಮಾಣಿಕತೆ ಹಾಗೂ ನೈತಿಕತೆಯನ್ನೇ ಪ್ರಶ್ನಿಸುತ್ತಿದೆ ಎಂದು ಅಬ್ದುಲ್ ಹನ್ನಾನ್ ಪ್ರತಿಕ್ರಿಯಿಸಿದರು.

ದುಷ್ಕರ್ಮಿ ನವೀನ್ ಹಾಗೂ ಆತನಿಗೆ ಬೆಂಬಲ ನೀಡಿದ ವ್ಯಕ್ತಿಗಳ ಮೇಲೆ ಧರ್ಮನಿಂದನೆ, ಸಮಾಜದಲ್ಲಿ ದ್ವೇಷ ಹುಟ್ಟಿಸುವ ಕೃತ್ಯ, ಗಲಭೆ ಸೃಷ್ಟಿಗೆ ಪ್ರೇರಣೆ, ಇತ್ಯಾದಿ ಸೆಕ್ಷನ್ ಗಳನ್ನು ಹಾಕಬೇಕೆಂದು ಮತ್ತು ನಿರ್ಲಕ್ಷ್ಯ ವಹಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೆ ಒಳಪಡಿಸಬೇಕೆಂದು ಅವರು ಆಗ್ರಹಿಸಿದರು.

ಬಂಧನಕ್ಕೊಳಗಾದ ಅಮಾಯಕರನ್ನು ತಕ್ಷಣವೇ ಬಿಡುಗಡೆಗೊಳಿಸಿ ನೈಜ ಆರೋಪಿಗಳನ್ನು ಪೊಲೀಸರು ಬಂಧಿಸಲಿ. ಗೋಲೀಬಾರಿನಲ್ಲಿ ಸಾವನ್ನಪ್ಪಿದ ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕೆಂದು ಅಬ್ದುಲ್ ಹನ್ನಾನ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐ ಬೆಂಗಳೂರು ಜಿಲ್ಲಾಧ್ಯಕ್ಷ ಶರೀಫ್, ಬಿಬಿಎಂಪಿ ಸದಸ್ಯ ಮುಜಾಹೀದ್ ಪಾಷ, ಜಿಲ್ಲಾ ಕಾರ್ಯದರ್ಶಿ ಮೆಹಬೂಬ್, ಜಿಲ್ಲಾ ಸಮಿತಿ ಸದಸ್ಯ ವಸೀಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News