ಪೊಲೀಸರು ಬಂಧಿಸಿದ 150 ಮಂದಿಯಲ್ಲಿ ನಿಜವಾದ ಅಪರಾಧಿಗಳು ಎಷ್ಟು: ದೇವೇಗೌಡ ಪ್ರಶ್ನೆ

Update: 2020-08-13 12:21 GMT

ಬೆಂಗಳೂರು, ಆ. 13: `ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಅವರ ಮನೆ ಮೇಲಿನ ದಾಳಿ ಪ್ರಕರಣ ದುರದೃಷ್ಟಕರ. ದೇಶದ ಯಾವ ಭಾಗದಲ್ಲೂ ಇಂತಹ ಪ್ರಕರಣಗಳು ನಡೆಯಬಾರದು, ದೊಂಬಿ, ಗಲಾಟೆ ಘಟನೆ ಸಂಬಂಧ ಪೊಲೀಸರು 150 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇವರಲ್ಲಿ ನಿಜವಾದ ಅಪರಾಧಿಗಳು ಎಷ್ಟು?' ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಗುರುವಾರ ಇಲ್ಲಿನ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರಲ್ಲಿ ಎಲ್ಲರೂ ಅಪರಾಧಿಗಳಾಗಿರಲು ಸಾಧ್ಯವಿಲ್ಲ. ಆದುದರಿಂದ ತಪ್ಪಿತಸ್ಥರನ್ನು ಮಾತ್ರ ಘಟನೆಗೆ ಹೊಣೆಗಾರರನ್ನಾಗಿ ಮಾಡಿ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ನಿರಪರಾಧಿಗಳಿಗೆ ಯಾವುದೇ ಕಾರಣಕ್ಕೂ ಶಿಕ್ಷೆ ಆಗುವುದು ಬೇಡ ಎಂದು ಪೊಲೀಸರಲ್ಲಿ ನಾನು ಮನವಿ ಮಾಡುತ್ತೇನೆ ಎಂದರು.

ದೋಂಬಿ, ಹಿಂಸಾಚಾರ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಆಗ್ರಹಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸಿಬಿಐನಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ತಾರತಮ್ಯ ಮಾಡುವುದಿಲ್ಲ ಎಂಬುದು ನನ್ನ ಭಾವನೆ. ಈ ಸಂಬಂಧ ಅಂತಿಮ ನಿರ್ಧಾರವನ್ನು ಸರಕಾರವೇ ಕೈಗೊಳ್ಳಲಿ ಎಂದು ದೇವೇಗೌಡ ಸಲಹೆ ಮಾಡಿದರು.

ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ಸರಕಾರ ಸಮಗ್ರ ತನಿಖೆ ನಡೆಸಬೇಕು. ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಅವರಿಗೆ ಧೈರ್ಯ ತುಂಬುವ ಕೆಲಸಕ್ಕೆ ಸರಕಾರ ಮುಂದಾಗಬೇಕು. ಶಾಸಕರು ಕಣ್ಣೀರು ಹಾಕಿದ್ದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರ ಕುಟುಂಬದ ಸದಸ್ಯರ ನೋವನ್ನೂ ಕಂಡಿದ್ದೇನೆ. ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಸರಕಾರ ಪರಿಹಾರ ನೀಡುವುದು ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದೇವೇಗೌಡ ಒತ್ತಾಯಿಸಿದರು.

ಅಖಂಡ ಶ್ರೀನಿವಾಸಮೂರ್ತಿ ಅವರು ಯಾರಿಗೂ ಅನ್ಯಾಯ ಮಾಡಿಲ್ಲ. ಅವರು ನಮ್ಮ ಪಕ್ಷದಲ್ಲಿ ಇದ್ದರು ಅನ್ನುವುದು ಬೇರೆ ವಿಷಯ. ಆದರೆ, ಅವರು ಯಾರಿಗೂ ನೋವುಂಟು ಮಾಡುವ ವ್ಯಕ್ತಿಯಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ದೇವೇಗೌಡ, ಗಲಾಟೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕೆಸರೆರಚಾಟ, ರಾಜಕೀಯ ಚೆಲ್ಲಾಟ, ಮನಸೋ ಇಚ್ಛೆ ಮಾತನಾಡುವುದು ಸಲ್ಲ ಎಂದು ದೇವೇಗೌಡ ಆಕ್ಷೇಪಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯನವರ ಮಾತುಗಳನ್ನು ನಾನು ಗಮನಿಸಿದ್ದೇನೆ. ಘಟನೆ ಕುರಿತು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾತನಾಡಿದ್ದಾರೆ. ಇದಾದ ಮೇಲೂ ಕೆಲ ಸಚಿವರು ಮಾತನಾಡುತ್ತಿದ್ದಾರೆ. ಹೀಗಾದರೆ ಮುಖ್ಯಮಂತ್ರಿಗಳ ಮಾತಿಗೆ ಅರ್ಥವೇ ಇರುವುದಿಲ್ಲ ಎಂದು ದೇವೇಗೌಡ, ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಣೆ ಮಾಡುವಾಗ ರಾಜಕೀಯ ಪಕ್ಷಗಳು ಮಧ್ಯಪ್ರವೇಶ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂಸಾಚಾರ ಕೃತ್ಯದ ಹಿಂದಿರುವ ನಿಜವಾದ ಕಿಡಿಗೇಡಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಶಾಸಕರ ನಿವಾಸಕ್ಕೆ ಬೆಂಕಿ ಇಡುವುದು, ವಾಹನಗಳನ್ನು ಸುಡುವುದು, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚುವುದನ್ನು ರಾಜ್ಯದಲ್ಲಿ ನಾನು ಎಂದೂ ನೋಡಿಲ್ಲ. ಶಾಸಕರೊಬ್ಬರ ಮನೆಯನ್ನು ಸುಟ್ಟುಹಾಕಿರುವುದು ಇದೇ ಮೊದಲು. ಹೀಗಾಗಿ ಅವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು'

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News