ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಲು ಸಾರ್ವಜನಿಕರಿಗೆ ಅವಕಾಶವಿಲ್ಲ: ಬಿಬಿಎಂಪಿ ಆಯುಕ್ತ

Update: 2020-08-13 16:15 GMT

ಬೆಂಗಳೂರು, ಆ.12: ಈ ವರ್ಷ ಸ್ವಾತಂತ್ರ್ಯ ದಿನಾಚರಣೆಗೆ ಆಗಮಿಸಲು ಸಾರ್ವಜನಿಕರಿಗೆ ಅವಕಾಶವಿಲ್ಲ. 75 ಕೊರೋನ ವಾರಿಯರ್ಸ್ ಗಳಿಗೆ ಮಾತ್ರ ಆಮಂತ್ರಣ ನೀಡಲಾಗಿದ್ದು, ಕೆಲವು ಗಣ್ಯರನ್ನ ಮಾತ್ರ ಆಹ್ವಾನಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಗುರುವಾರ ನಗರದ ಮಾಣಿಕ್ ಷಾ ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 74ನೇ ಸ್ವಾತಂತ್ರ್ಯ ದಿನಾಚರಣೆಯ ರಾಜ್ಯ ಮಟ್ಟದ ಸಮಾರಂಭಕ್ಕೆ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಕೊರೋನ ಸಂದರ್ಭಕ್ಕೆ ತಕ್ಕಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಆಗಸ್ಟ್ 15ರಂದು ಬೆಳಗ್ಗೆ 9ಕ್ಕೆ ಮುಖ್ಯಮಂತ್ರಿ ಬಿ.ಎಸ್‍ಯಡಿಯೂರಪ್ಪ ಅವರು ಧ್ವಜಾರೋಹಣ ಮಾಡಲಿದ್ದಾರೆ. ನಂತರ ಪರೇಡ್‍ನಲ್ಲಿ ಗೌರವ ಸ್ವೀಕರಿಸಿ ನಾಡಿನ ಜನತೆಗೆ ಸ್ವಾತಂತ್ರೋತ್ಸವದ ಸಂದೇಶ ನೀಡುತ್ತಾರೆ. ಬಳಿಕ ರಾಷ್ಟ್ರಗೀತೆ, ನಾಡಗೀತೆ ಮತ್ತು ರೈತಗೀತೆ ಇರಲಿವೆ ಎಂದು ತಿಳಿಸಿದರು.

ಕೊರೋನ ಹಿನ್ನೆಲೆ ಸರಕಾರದ ಮಾರ್ಗಸೂಚಿ ಪ್ರಕಾರ ಕಾರ್ಯಕ್ರಮ ಆಚರಣೆ ಮಾಡಲಾಗುವುದು. ಈ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

500 ಆಸನ ವ್ಯವಸ್ಥೆ

ಈ ಬಾರಿಯ ಸಮಾರಂಭಕ್ಕೆ ವಿಶೇಷವಾಗಿ 75 ಮಂದಿ ಕೊರೋನ ವಾರಿಯರ್ಸ್ ಹಾಗೂ 25 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾದವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಜೊತೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಮಿಲಿಟರಿ ಅಧಿಕಾರಿಗಳು ಸೇರಿದಂತೆ 500 ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ನಾಗರಿಕರು ದೂರದರ್ಶನದ ಮೂಲಕ ನೇರ ಪ್ರಸಾರದಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಪರೇಡ್‍ನ ಉಸ್ತುವಾರಿಯನ್ನು ದಕ್ಷಿಣ ವಿಭಾಗದ ಡಿಸಿಪಿ ಗಿರೀಶ್ ಅವರು ವಹಿಸಿಕೊಂಡಿದ್ದು, ಕವಾಯತಿನಲ್ಲಿ ಕೆಎಸ್‍ಆರ್‍ಪಿ, ಬಿಎಸ್‍ಎಫ್, ಸಿಎಆರ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್, ಹೋಮ್‍ಗಾರ್ಡ್ಸ್, ಅಗ್ನಿಶಾಮಕ ದಳ ಸೇರಿದಂತೆ 16 ತುಕಡಿ ಹಾಗೂ 4 ಬ್ಯಾಂಡ್‍ಗಳು ಭಾಗಿಯಾಗಲಿವೆ. ಭದ್ರತೆಗಾಗಿ 680 ಜನ ಕರ್ತವ್ಯದಲ್ಲಿ ಇರಲಿದ್ದಾರೆ. 47 ಕ್ಯಾಮರಾಗಳನ್ನು ಅಳವಡಿಸಲಾಗಿದೆ. 10 ಕೆಎಸ್‍ಆರ್‍ಪಿ ತುಕಡಿ, 10 ಕೆಎಸ್‍ಆರ್‍ಪಿ ಪ್ಲಟೂನ್ ತುಕಡಿ, 1 ಗರುಡಾ ಫೋರ್ಸ್ ಇರಲಿದೆ. ಸುಗಮ ಸಂಚಾರಕ್ಕೆ ಪೊಲೀಸ್ ಸಂಚಾರ ವಿಭಾಗವು ಮಾರ್ಗ ಬದಲಾವಣೆ ಮಾಡಲಾಗುವುದು.

-ಕಮಲ್ ಪಂತ್, ಬೆಂಗಳೂರು ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News