ನಾಯಕತ್ವವನ್ನು ಟೀಕಿಸಲು ಹೆದರಬಾರದು: ಎಸ್‌ಎಂ ಕೃಷ್ಣ

Update: 2020-08-13 17:59 GMT

ಬೆಂಗಳೂರು, ಆ.13: ದೇಶದಲ್ಲಿರುವ ಎಲ್ಲಾ ಪಕ್ಷಗಳಲ್ಲೂ ಆಂತರಿಕ ಪ್ರಜಾಪ್ರಭುತ್ವದ ಕೊರತೆಯಿದೆ . ಅಧಿಕಾರದಲ್ಲಿರುವ ನಾಯಕತ್ವವನ್ನು ಟೀಕಿಸಲು ಭಯ ಪಡುವ ಪ್ರವೃತ್ತಿ ಕೊನೆಯಾಗಬೇಕು ಎಂದು ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಎಸ್‌ಎಂ ಕೃಷ್ಣ ಹೇಳಿದ್ದಾರೆ.

ಪ್ರಧಾನಿ ಮೋದಿ ನಾಯಕತ್ವದಡಿ ಕೇಂದ್ರ ಸರಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಪ್ರಾದೇಶಿಕ ಪಕ್ಷಗಳು ಮರಳಿ ಒಗ್ಗೂಡುತ್ತಿರುವ ಹಿನ್ನೆಲೆಯಲ್ಲಿ, ಈಗಲೂ ಕಾಂಗ್ರೆಸ್ ಪಕ್ಷ ಪ್ರಬಲ ಶಕ್ತಿಯಾಗಿಯೇ ಉಳಿದಿದೆ ಎಂದವರು ಹೇಳಿದ್ದಾರೆ.

ಗುರುವಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ಹಂಚಿಕೊಂಡ ಅವರು, ಮಹಾತ್ಮಾ ಗಾಂಧಿ, ಸುಭಾಶ್ಚಂದ್ರ ಬೋಸ್ ಯುಗದಲ್ಲಿ ಪಕ್ಷಗಳಲ್ಲಿ ಇದ್ದಂತಹ ಆಂತರಿಕ ಪ್ರಜಾಪ್ರಭುತ್ವ ಈಗಿನ ರಾಜಕೀಯ ಪಕ್ಷಗಳಿಗೆ ಮಾದರಿಯಾಗಿರಬೇಕು ಎಂದರು.

ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸಚಿನ್ ಪೈಲಟ್ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ಕೃಷ್ಣ, ಇದಕ್ಕೆ ಕಾಂಗ್ರೆಸ್ ಪಕ್ಷದೊಳಗೆ ಸುದೀರ್ಘಾವಧಿಯಿಂದ ಬೆಳೆದು ಬಂದಿರುವ ಒಳಗುದಿ ಕಾರಣ. ಪಕ್ಷದಲ್ಲಿ ಯುವಮುಖಂಡರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ದೊರಕದ ಮತ್ತು ಸೂಕ್ತ ಸ್ಥಾನಮಾನ ಸಿಗದ ಬಗ್ಗೆ ಅಸಮಾಧಾನವಿದೆ. ಹಿರಿಯ ತಲೆಮಾರಿನವರು ಯುವ ತಲೆಮಾರಿನ ಜನರಿಗೆ ಅವಕಾಶ ಮಾಡಿಕೊಡಬೇಕು ಮತ್ತು ಪಕ್ಷದಲ್ಲೇ ಇದ್ದು ಯುವಜನರಿಗೆ ಮಾರ್ಗದರ್ಶನ ನೀಡಬೇಕು ಎಂದು ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡಿರುವ ಕೃಷ್ಣ ಹೇಳಿದರು.

ಯುವಜನರಿಗೆ ಅವಕಾಶ ನೀಡದೆ, ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದಿದ್ದಲ್ಲಿ ಅಸಮಾಧಾನ ಸ್ಫೋಟಿಸುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ತಾನ ಇದಕ್ಕೆ ಉದಾಹರಣೆ. ಯಾವುದೇ ಪಕ್ಷವೂ ಬದಲಾವಣೆಗೆ ತನ್ನನ್ನು ಒಗ್ಗಿಕೊಳ್ಳಬೇಕು. ಇಲ್ಲದಿದ್ದರೆ ಆ ಪಕ್ಷ ಪತನದ ಅಂಚಿಗೆ ಸಾಗುತ್ತದೆ. ತಾನು ಈ ಹಿಂದೆ ಏನು ಮಾಡಿದ್ದೆ ಎಂದು ಹೇಳಿಕೊಳ್ಳುತ್ತಾ ದಿನ ಕಳೆದರೆ ಪ್ರಯೋಜನವಿಲ್ಲ. ಭವಿಷ್ಯದ ಬಗ್ಗೆ ದೃಷ್ಟಿಯಿರಿಸಿಕೊಂಡು, ಸಕಾರಾತ್ಮಕ ಧೋರಣೆಯಿಂದ ಮುಂದುವರಿದರೆ ಯಾವುದೇ ಪಕ್ಷ ಬೆಳೆಯುತ್ತದೆ ಎಂದರು.

ಬಿಜೆಪಿಗೆ ಸೇರ್ಪಡೆಯಾಗಿರುವ ಬಗ್ಗೆ ತನಗೆ ಸಂತೃಪ್ತಿಯಿದೆ. ಮೋದಿ ನೇತೃತ್ವದಲ್ಲೇ ಬಿಜೆಪಿ 2024ರಲ್ಲೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ . ಬಿಜೆಪಿಯ ಸಂಘಟನಾ ಶಕ್ತಿ ಬಲವಾಗಿದೆ. ಬೂತ್‌ಮಟ್ಟದಿಂದ ಪಂಚಾಯತ್ ಮಟ್ಟಕ್ಕೆ, ಪಂಚಾಯತ್ ಮಟ್ಟದಿಂದ ಪಾರ್ಲಿಮೆಂಟರಿ ಮಟ್ಟಕ್ಕೆ ಪಕ್ಷ ಬೆಳೆಯಲು ಈ ಸಂಘಟನಾ ಶಕ್ತಿಯೇ ಕಾರಣ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News