ಭೂ ಸುಧಾರಣಾ, ಎಪಿಎಂಸಿ, ಕೈಗಾರಿಕಾ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ: ದೇವೇಗೌಡ

Update: 2020-08-13 17:19 GMT

ಬೆಂಗಳೂರು, ಆ. 13: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕೈಗಾರಿಕಾ ಕಾಯ್ದೆಗಳ ತಿದ್ದುಪಡಿ ಮೂಲಕ ಸರಕಾರ ಹೊರಡಿಸಿರುವ `ಅಧ್ಯಾದೇಶ'ಕ್ಕೆ ನಮ್ಮ ವಿರೋಧವಿದ್ದು, ಮುಂದಿನ ವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ನಾಳೆ(ಆ.14) ಹಾಸನ ಜಿಲ್ಲೆಯಿಂದ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಜಾರಿಗೆ ತಂದಿದಿರುವ ಮೂರು ಕಾಯ್ದೆಗಳಿಗೆ ನಮ್ಮ ವಿರೋಧವಿದೆ. ಹೀಗಾಗಿ ಕೊರೋನ ಸೋಂಕಿನ ನಿಯಂತ್ರಣಕ್ಕೆ ಹೇರಿರುವ ಮಾರ್ಗಸೂಚಿ ಅನ್ವಯ ಚಳವಳಿ ನಡೆಸಲಿದ್ದೇವೆ. ನಾಳೆ ಹಾಸನದಲ್ಲಿ ನಡೆಯಲಿರುವ ಹೋರಾಟದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಹಾಗೂ ನಾನು ಸೇರಿದಂತೆ ಪ್ರಮುಖ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಶಾಂತಿಯುತ ಪ್ರತಿಭಟನೆ ನಡೆಸಲಿದ್ದು, ಹಾಸನದಲ್ಲಿ ನಾಳೆ ನಡೆಯಲಿರುವ ಚಳವಳಿಯಲ್ಲಿ 200 ಜನ ಮಾತ್ರ ಪಾಲ್ಗೊಳ್ಳಲಿದ್ದು, ಒಂದು ಕಡೆ ಕುಳಿತುಕೊಂಡು ಪ್ರತಿಭಟನೆ ನಡೆಸಲಿದ್ದೇವೆ. ಐದಾರು ಜನ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಿದ್ದು, ಅದನ್ನ ರಾಜ್ಯಪಾಲರಿಗೆ ಕಳುಹಿಸಿಕೊಡುವಂತೆ ಮನವಿ ಮಾಡಲಿದ್ದೇವೆ. ರಾಜ್ಯ ಸರಕಾರ ಮೇಲ್ಕಂಡ ಮೂರು ಕಾಯ್ದೆಗಳ ತಿದ್ದುಪಡಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದೇವೆ ಎಂದು ದೇವೇಗೌಡ ತಿಳಿಸಿದರು.

ಭೂ ಸುಧಾಕರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳು ರೈತರಿಗೆ ಮಾರಕ. ಸಣ್ಣ, ಮಧ್ಯಮ ವರ್ಗದ ರೈತರಿಗೆ ಇದರಿಂದ ಅನ್ಯಾಯವಾಗಲಿದೆ. ಕೈಗಾರಿಕೆ ಕಾಯ್ದೆಯೂ ಅತ್ಯಂತ ಅಪಾಯಕಾರಿ. ಜಮೀನು ಪಡೆದು ಅವರು ಮುಂದೆ ಮಾರಾಟ ಮಾಡಬಹುದು. ಈ ಕಾಯ್ದೆಯಿಂದ ಜನತೆಗೆ ಅನಾನುಕೂಲವೇ ಹೆಚ್ಚು. ಎಪಿಎಂಸಿ ಕಾಯ್ದೆಯಿಂದ ರೈತರ ಸ್ಥಿತಿ ಚಿಂತಾಜನಕವಾಗಲಿದೆ. ಸಂಸತ್‍ನಲ್ಲಿ ಈ ಬಗ್ಗೆ ಹೋರಾಟ ನಡೆಸಲಿದ್ದೇವೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಆಗ್ರಹಿಸಿದರೂ ನಮ್ಮ ಮನವಿಗೆ ಸ್ಪಂದಿಸದ ಕಾರಣ ಪ್ರತಿಭಟನೆ ಅನಿವಾರ್ಯವಾಗಿದೆ. ರಾಜ್ಯದ ಮೂವತ್ತು ಜಿಲ್ಲೆಗೂ ನಾನೇ ಹೋಗುವುದು ಕಷ್ಟ. ಹೀಗಾಗಿ ಪಕ್ಷದ ರಾಜ್ಯಾಧ್ಯಕ್ಷರು, ಆಯಾ ಭಾಗದ ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದ್ಯಸರು ಜಿಲ್ಲೆಗಳಲ್ಲಿ ಹೋರಾಟ ಮಾಡ್ತಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹಾಗೂ ನಾನು ಈ ಹೋರಾಟದ ಮುಂಚೂಣಿಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಪಕ್ಷದ ಮುಖಂಡರಾದ ಜಫ್ರುಲ್ಲಾ ಖಾನ್, ಟಿ.ಎ.ಶರವಣ ಸೇರಿದಂತೆ ಇನ್ನಿತರರು ಉಪಸ್ಥಿತಿತರಿದ್ದರು.

ಪ್ರವಾಹದಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ. ರೈತರ ಬೆಳೆ ನಷ್ಟವಾಗಿದ್ದು, ಮನೆಗಳು, ಜಾನುವಾರುಗಳು, ವಾಹನಗಳು ಕೊಚ್ಚಿ ಹೋಗಿವೆ. ಪ್ರಧಾನಿಯವರು ಪ್ರವಾಹದ ಕುರಿತು ರಾಜ್ಯದ ಸಿಎಂಗಳ ಜೊತೆ ಸಭೆ ಮಾಡಿದ್ದಾರೆ. ಆದರೆ, ಇದರಿಂದ ನನಗೆ ತೃಪ್ತಿಯಾಗಿಲ್ಲ. ಪ್ರತಿ ಜಿಲ್ಲೆ, ತಾಲೂಕಿಗೆ ಹೋಗಿ ನಮ್ಮ ಅಧಿಕಾರಿಗಳ ನಷ್ಟದ ಬಗ್ಗೆ ಸರಕಾರಕ್ಕೆ ವರದಿ ನೀಡಬೇಕು. ಅನಂತರ ಕೇಂದ್ರ ಸರಕಾರ ಶೀಘ್ರವೇ ರಾಜ್ಯಕ್ಕೆ ತಂಡ ಕಳಿಸಿ ಅಧ್ಯಯನ ನಡೆಸಿ ಸೂಕ್ತ ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಈ ವಿಚಾರದಲ್ಲಿ ಕೇಂದ್ರ ನಿರ್ಲಕ್ಷ್ಯ ಸಲ್ಲ.

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News