ಬೆಂಗಳೂರಿನಲ್ಲಿ ಕೊರೋನ ಸೋಂಕಿಗೆ ಮತ್ತೆ 22 ಮಂದಿ ಬಲಿ, 1,893 ಮಂದಿಗೆ ಪಾಸಿಟಿವ್

Update: 2020-08-13 17:27 GMT

ಬೆಂಗಳೂರು, ಆ.13: ನಗರದಲ್ಲಿ ಗುರುವಾರ ಒಂದೆ ದಿನ 1,893 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 22 ಜನರು ಮೃತರಾಗಿದ್ದಾರೆ.

ನಗರದಲ್ಲಿ ಒಟ್ಟು 81,733 ಕೊರೋನ ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,338 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 47,246 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಗುರುವಾರದಂದು 2212 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 33,148 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 96,108 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಬುಧವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಒಟ್ಟು ಸಕ್ರಿಯ 13,018  ಕಂಟೈನ್ಮೆಂಟ್ ಝೋನ್‍ಗಳಿವೆ. ಇದುವರೆಗೂ 30,304 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ.

ಕೊರೋನಗೆ ಬಿಬಿಎಂಪಿ ಅಧಿಕಾರಿ ಮೃತ್ಯು

ನಗರದ ನಾಗಪುರ ವಾರ್ಡ್ ನ ಬಿಬಿಎಂಪಿ ಕಂದಾಯ ಪರಿವೀಕ್ಷಕ ಆರ್.ರವಿ (47) ಅವರು ಕೊರೋನ ಸೋಂಕಿನಿಂದ ಗುರುವಾರ ಮೃತರಾಗಿದ್ದಾರೆ.

ರವಿ ಅವರ ಕುಟುಂಬದಲ್ಲಿ ಅವರ ತಾಯಿಗೆ ಕೊರೋನ ತಗಲಿತ್ತು. ನಂತರ ರವಿ ಹಾಗೂ ಅವರ ಪತ್ನಿ, ಮಗಳು ಹಾಗೂ ಮಗನಿಗೆ ಕೊರೋನ ಪರೀಕ್ಷೆ ಮಾಡಿಸಿದಾಗ ಎಲ್ಲರಿಗೂ ಸೋಂಕು ತಗಲಿರುವುದು ಪತ್ತೆಯಾಗಿತ್ತು. ನಂತರ ಅವರ ಮನೆಯವರೆಲ್ಲ ಕಳೆದ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದರು.

ಕೆಲವು ದಿನಗಳ ಚಿಕಿತ್ಸೆ ನಂತರ ರವಿ ಅವರನ್ನು ಹೊರತುಪಡಿಸಿ ಮನೆಯಲ್ಲಿರುವ ಎಲ್ಲರಿಗೂ ಕೊರೋನ ನೆಗೆಟಿವ್ ಬಂದಿತ್ತು. ಕೊರೋನ ಸೋಂಕು ಇದ್ದರೂ ತಾನೂ ಮನೆಯಲ್ಲಿಯೇ ಆರೈಕೆಗೆ ಒಳಗಾಗುತ್ತೇನೆ ಎಂದು ಹೇಳಿ ಮನೆಗೆ ತೆರಳಿದ್ದರು. ಆದರೆ, ಆರ್.ರವಿ ಗುರುವಾರ ಬೆಳಗ್ಗೆ ಮಿದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ವಾರಿಯರ್ಸ್ ಗೆ ಇನ್ನೂ ಸಿಕ್ಕಿಲ್ಲ ಪರಿಹಾರ

ಕೊರೋನದಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಕರ್ತವ್ಯ ನಿರ್ವಹಿಸುವವರಿಗೆ ಕೊರೋನ ವಿಮೆ ಸೌಲಭ್ಯ ಕಲ್ಪಿಸಿದೆ. ಕೊರೋನ ವಿಮೆ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡುವುದಾಗಿ ಸರಕಾರ ಭರವಸೆ ನೀಡಿದೆ. ಬಿಬಿಎಂಪಿಯಲ್ಲಿ ಇದುವರೆಗೆ ಅಧಿಕಾರಿಗಳು ಮತ್ತು ನೌಕರರು ಸೇರಿ ಏಳು ಮಂದಿ ಕೊರೋನದಿಂದ ಮೃತಪಟ್ಟಿದ್ದಾರೆ. ಆದರೆ, ಈ ನೌಕರರ ಕುಟುಂಬಗಳಿಗೆ ಇದುವರೆಗೆ ಯಾವುದೇ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಗೊತ್ತಾಗಿದೆ.

ಬಿಐಇಸಿಯಲ್ಲಿ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೊಬೇಷನರಿ ಕೆಎಎಸ್ ಅಧಿಕಾರಿ ಗಂಗಾಧರಯ್ಯ ಅವರು ಹೃದಯಾಘಾತದಿಂದ ಮೃತಪಟ್ಟಾಗ ಅವರ ಕುಟುಂಬಕ್ಕೆ ಸಿಎಂ ಸೂಚನೆ ಮೇರೆಗೆ ತ್ವರಿತವಾಗಿ 25 ಲಕ್ಷರೂ. ಪರಿಹಾರದ ಮೊತ್ತ ಬಿಡುಗಡೆ ಮಾಡಲಾಗಿದೆ. ಆದರೆ, ಕೋವಿಡ್ ವಿರುದ್ಧ ಸೆಣಸಾಟದಲ್ಲೇ ಮೃತಪಟ್ಟ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕುಟುಂಬಗಳನ್ನು ಈ ವಿಚಾರದಲ್ಲಿ ಕಡೆಗಣಿಸಲಾಗಿದೆ. ಸರಕಾರ ಎಲ್ಲ ನೌಕರರನ್ನೂ ಒಂದೇರೀತಿ ನಡೆಸಿಕೊಳ್ಳಬೇಕು ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೋನದಿಂದ ಮೃತಪಟ್ಟ ಬಿಬಿಎಂಪಿ ನೌಕರರ ಕುಟುಂಬದವರಿಗೂ ಸರಕಾರ ವಿಮೆ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡಿ ಅವರಿಗೆ ಸಾಂತ್ವನ ಹೇಳಬೇಕು ಎಂದು ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಸಂಘದ ಅಧ್ಯಕ್ಷ ಅಮೃತರಾಜ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News