ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಧೈರ್ಯ ತುಂಬಿದ ಉಲಮಾಗಳ ನಿಯೋಗ

Update: 2020-08-14 13:37 GMT

ಬೆಂಗಳೂರು, ಆ.14: ಡಿ.ಜೆ.ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ದುಷ್ಕರ್ಮಿಗಳ ಕೃತ್ಯಕ್ಕೆ ತಮ್ಮ ಮನೆಯನ್ನು ಕಳೆದುಕೊಂಡಿರುವ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಭೇಟಿ ಮಾಡಿದ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ನೇತೃತ್ವದ ಉಲಮಾಗಳ ನಿಯೋಗವು, ಶಾಸಕರಿಗೆ ಧೈರ್ಯ ತುಂಬಿದ್ದಾರೆ.

ಶುಕ್ರವಾರ ಮಧ್ಯಾಹ್ನದ ನಮಾಝ್‍ನ ನಂತರ ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಅವರೊಂದಿಗೆ ಅಖಂಡ ಶ್ರೀನಿವಾಸಮೂರ್ತಿಯನ್ನು ಕಾವಲ್‍ಭೈರಸಂದ್ರದಲ್ಲಿ ದುಷ್ಕರ್ಮಿಗಳ ದಾಳಿಗೆ ಗುರಿಯಾಗಿದ್ದ ಮನೆಯ ಬಳಿ ಭೇಟಿ ಮಾಡಿದ ಉಲಮಾಗಳು, ಶಾಸಕರಿಗೆ ಸಾಂತ್ವನ ಹೇಳಿದರು.

ಸುಟ್ಟು ಹೋಗಿರುವ ಮನೆಯನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಮೌಲಾನ ಸಗೀರ್ ಅಹ್ಮದ್ ಖಾನ್, ಯಾವುದೇ ಕಾರಣಕ್ಕೂ ಧೈಯವನ್ನು ಕಳೆದುಕೊಳ್ಳಬೇಡಿ. ಸರ್ವಶಕ್ತನಾದ ಅಲ್ಲಾಹನು ತಾಳ್ಮೆ ವಹಿಸುವವರ ಜೊತೆ ಸದಾ ಇರುತ್ತಾನೆ. ತಮಗೂ ಆತ ಒಳಿತನ್ನು ಮಾಡುತ್ತಾನೆ. ಚಿಂತೆ ಮಾಡಬೇಡಿ. ಈ ಸಂಕಷ್ಟದ ಸಮಯದಲ್ಲಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದರು.

ಪ್ರವಾದಿ ಬಗ್ಗೆ ಕಿಡಿಗೇಡಿಯೊಬ್ಬ ನಿಂದನೆ ಮಾಡಿದ್ದು ನಮ್ಮ ಮನಸ್ಸುಗಳಿಗೆ ಬೇಸರ ತರಿಸಿದೆ. ಈ ಕೃತ್ಯವನ್ನು ಖಂಡಿಸುತ್ತೇನೆ. ಜೊತೆಗೆ, ಅದನ್ನು ಖಂಡಿಸುವ ಭರದಲ್ಲಿ ಕಾನೂನು ಕೈಗೆತ್ತಿಕೊಂಡು, ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿರುವ ಕ್ರಮವನ್ನೂ ನಾವು ಖಂಡಿಸುತ್ತೇವೆ. ಇಸ್ಲಾಮ್ ಧರ್ಮ ಇಂತಹ ಕೃತ್ಯಗಳಿಗೆ ಪ್ರೋತ್ಸಾಹ ನೀಡುವುದಿಲ್ಲ ಎಂದು ಅವರು ಹೇಳಿದರು.

ಈ ಘಟನೆಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ತಮ್ಮ ಮನೆಯನ್ನು ಕಳೆದುಕೊಂಡಿದ್ದಾರೆ. ನಾವು ಎಲ್ಲ ಉಲಮಾಗಳು ಸೇರಿ ಅವರ ಮನೆಯನ್ನು ನಿರ್ಮಿಸಿಕೊಡುತ್ತೇವೆ ಎಂದು ಮೌಲಾನ ಸಗೀರ್ ಅಹ್ಮದ್ ಖಾನ್ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಖಂಡ ಶ್ರೀನಿವಾಸಮೂರ್ತಿ, ಮನೆಯನ್ನು ನಾನೇ ನಿರ್ಮಿಸಿಕೊಳ್ಳುತ್ತೇನೆ. ಗುರುಗಳ ಆಶೀರ್ವಾದ ಸದಾ ಕಾಲ ನನ್ನ ಮೇಲಿರಲಿ. ನಾನೇ ಬಂದು ನಿಮ್ಮನ್ನು ಮಾತನಾಡಿಸಿಕೊಂಡು ಬರಬೇಕಿತ್ತು. ದೊಡ್ಡವರಾದ ತಾವುಗಳೇ ನನ್ನ ಮನೆಯವರೆಗೆ ಬಂದು ಆಶೀರ್ವಾದ ಮಾಡಿದ್ದೀರಾ ಅದಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಝಮೀರ್ ಅಹ್ಮದ್ ಖಾನ್, ಅಖಂಡ ಶ್ರೀನಿವಾಸಮೂರ್ತಿಗೆ ಮನೆ ಕಟ್ಟಿಸಿಕೊಡುವುದಾಗಿ ಧರ್ಮ ಗುರುಗಳು ಹೇಳಿದ್ದಾರೆ. ಶಾಸಕರು ಒಪ್ಪಿದರೆ ಸ್ವಂತ ಹಣದಿಂದ ಉಲಮಾಗಳು ಮುಂದೆ ನಿಂತು ಮನೆಯನ್ನು ಕಟ್ಟಿಸಿಕೊಡುತ್ತಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಯಾರೂ ಸಹ ಕಾನೂನು ಕೈಗೆತ್ತಿಕೊಳ್ಳಬಾರದು. ಈ ಘಟನೆಗೆ ಕಾರಣಕರ್ತನಾದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಹೋರಾಟದ ಮೂಲಕ ನಾವು ನ್ಯಾಯಪಡೆಯೋಣ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮೌಲಾನ ಸೈಯ್ಯದ್ ಮುಸ್ತಫಾ ರಿಫಾಯಿ, ಮೌಲಾನ ಸೈಯ್ಯದ್ ಶಬ್ಬೀರ್ ಅಹ್ಮದ್ ನದ್ವಿ, ಮೌಲಾನ ಆಸೀಮ್, ಮುಫ್ತಿ ಶಂಶುದ್ದೀನ್ ಬಜ್ಲಿ, ಮೌಲಾನ ಝುಲ್ಫಿಖರ್ ರಝಾ ನೂರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News