ಬೆಂಗಳೂರು ಹಿಂಸಾಚಾರ: ಕಾರ್ಪೋರೇಟರ್ ಪತಿ ಬಂಧನ; ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ ಮುಖಂಡರು

Update: 2020-08-14 14:51 GMT

ಬೆಂಗಳೂರು, ಆ. 14: ದೇವರಜೀವನಹಳ್ಳಿ(ಡಿ.ಜಿ.ಹಳ್ಳಿ), ಕಾಡುಗೊಂಡನಹಳ್ಳಿ(ಕೆ.ಜಿ.ಹಳ್ಳಿ) ಮತ್ತು ಕಾವಲ್ ಭೈರಸಂದ್ರ ಗಲಭೆ ಪ್ರಕರಣ ಸಂಬಂಧ ಬಿಬಿಎಂಪಿ ಕಾರ್ಪೋರೇಟರ್ ಇರ್ಷಾದ್ ಬೇಗಂ ಅವರ ಪತಿ ಕಲೀಂ ಪಾಷಾ ಬಂಧನದ ಬೆನ್ನಲ್ಲೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುಖಂಡ ಬಿ.ಎಲ್.ಸಂತೋಷ್, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಆರ್.ಅಶೋಕ್ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷದ ವಿರುದ್ಧ ಮುಗಿಬಿದ್ದಿದ್ದಾರೆ.

`ಕಾಂಗ್ರೆಸ್ ಕಾರ್ಪೋರೇಟರ್ ಪತಿ ಕಲೀಂ ಪಾಷಾ ಅವರನ್ನು ಬಂಧಿಸಿದ್ದು, ಗಲಭೆಯ ಹಿಂದಿನ ಕಾಂಗ್ರೆಸ್ ಪಕ್ಷದವರ ನಿಜಬಣ್ಣ ಬಯಲಾಗಿದೆ. ಕಾಂಗ್ರೆಸ್ ಪಕ್ಷವು ಓಲೈಕೆ ಮತ್ತು ಮತ ಬ್ಯಾಂಕ್ ರಾಜಕಾರಣವನ್ನು ಮುಂದುವರಿಸಿದೆ' ಎಂದು ಬಿಜೆಪಿ ಮುಖಂಡರು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, `ಸಮಾಜಘಾತುಕ ವಿಚ್ಛಿದ್ರಕಾರಿ ಶಕ್ತಿಗಳನ್ನು ಬೆಂಬಲಿಸುತ್ತಾ ಶಾಂತಿ, ಸಾಮರಸ್ಯ ಮಾತ್ರವಲ್ಲ, ರಾಜ್ಯದ ಘನತೆಯನ್ನು ಹಾಳುಮಾಡುವ ಕ್ಷುಲ್ಲಕ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಲಾಗಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿ.ಎಲ್.ಸಂತೋಷ್, ಗಲಭೆಗಳನ್ನು ಖಂಡಿಸುವುದಿಲ್ಲ. ದಲಿತ ಶಾಸಕರ ಮನೆಯ ಮೇಲೆ ನಡೆದ ದಾಳಿಯನ್ನು ಖಂಡಿಸುವುದಿಲ್ಲ. ಶೃಂಗೇರಿಯಲ್ಲಿ ಆದಿ ಶಂಕರಚಾರ್ಯ ಪ್ರತಿಮೆಯನ್ನು ಅಪವಿತ್ರಗೊಳಿಸುವುದನ್ನು ಖಂಡಿಸುವುದಿಲ್ಲ. ಕಾಂಗ್ರೆಸ್ ಪಕ್ಷವು ತನ್ನ ಹಳೆಯ ಅಭ್ಯಾಸವಾಗಿರುವ ಓಲೈಕೆ ರಾಜಕಾರಣ ಮುಂದುವರಿಸಿದೆ' ಎಂದು ಲೇವಡಿ ಮಾಡಿದ್ದಾರೆ.

ಮುಖವಾಡ ಬಯಲು: ಡಿ.ಜೆ.ಹಳ್ಳಿಯ ಘಟನೆ ಬಗ್ಗೆ ಸಾಮಾಜಿಕ ನ್ಯಾಯದ ಪ್ರತಿಪಾದಕರು ಎಂದು ಕರೆಸಿಕೊಳ್ಳುವ ಕಾಂಗ್ರೆಸ್‍ನವರ ನಿಜಬಣ್ಣ ಬಯಲು ಮಾಡಿಕೊಂಡಿದೆ. ತಮ್ಮ ಪಕ್ಷದ ದಲಿತ ನಾಯಕನಿಗೆ ರಕ್ಷಣೆ ನೀಡಲಾಗದ ಪಕ್ಷದ ನಾಯಕರು, ಘಟನೆಗೆ ಕಾರಣನಾದ ವ್ಯಕ್ತಿ ಬಿಜೆಪಿ ಕಾರ್ಯಕರ್ತನೆಂದು ಬಿಂಬಿಸುವ ವ್ಯರ್ಥ ಪ್ರಯತ್ನವನ್ನೂ ಮಾಡಿದರು. ಇವರ ಮಿಥ್ಯಾರೋಪಗಳನ್ನು ಬಗ್ಗೆ ಪ್ರಶ್ನಿಸಿದ ಬಿಜೆಪಿಯ ಬಿ.ಎಲ್.ಸಂತೋಷ್‍ಜೀ ಅವರ ವಿರುದ್ಧ ಆರೋಪ ಮಾಡಿದರು ಎಂದು ಡಿಸಿಎಂ ಲಕ್ಷ್ಮಣ ಸವದಿ ಆಕ್ಷೇಪಿಸಿದ್ದಾರೆ.

ನಾಯಕತ್ವದ ಭ್ರಷ್ಟತೆ, ಹಾಗೂ ನಾಯಕತ್ವದ ದಿವಾಳಿತನ ಪ್ರದರ್ಶಿಸಿದ ಕಾಂಗ್ರೆಸ್, ಝಮೀರ್ ಅಹಮ್ಮದ್‍ರ ಮುಖಾಂತರ ಉತ್ತರ ಹೇಳಲು ಹೊರಟಿದೆ. ಪ್ರಕೃತಿಯಲ್ಲಿ ನಾವೆಲ್ಲಾ ಸಹಜವಾಗಿ ನೋಡಿರುವ ಸಂಗತಿಯೊಂದನ್ನು ಈ ಸನ್ನಿವೇಶ ನೆನಪಿಸುತ್ತಿದೆ. ಆನೆ ನಡೆವ ಹಾದಿಯಲ್ಲಿ, ಸಣ್ಣ ಪುಟ್ಟ ಪ್ರಾಣಿಗಳು ಊಳಿಡುವುದು ಸಹಜ ಅಲ್ಲವೇ? ಸಂತೋಷ್‍ಜೀಯಂತಹ ಸಿದ್ಧಾಂತ ಬದ್ಧ, ನೀತಿ ರಾಜಕಾರಣ ಮಾಡುವ ವ್ಯಕ್ತಿಯ ಬಗ್ಗೆ ಮಾತನಾಡಿ ಕಾಂಗ್ರೆಸ್ ತನ್ನಲ್ಲಿನ ನಾಯಕತ್ವದ ಕೊರತೆ ಮಾತ್ರವಲ್ಲ, ನೈತಿಕತೆಯ ಕೊರತೆಯನ್ನು ಜಗತ್ತಿಗೆ ಪರಿಚಯಿಸಿಕೊಟ್ಟಿದೆ ಎಂದು ಲಕ್ಷ್ಮಣ ಸವದಿ ಟೀಕಿಸಿದ್ದಾರೆ.

ಕಾಂಗ್ರೆಸ್ ತನ್ನ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ದೋಷಾರೋಪ ಮಾಡುವ ಹಳೆಯ ಚಾಳಿಯನ್ನೇ ಮುಂದುವರಿಸಿದೆ. ಪರಮ ದೇಶಭಕ್ತ, ನೀತಿ ರಾಜಕಾರಣಿ, ನಿಸ್ವಾರ್ಥ ವ್ಯಕ್ತಿತ್ವದ ಬಿ.ಎಲ್.ಸಂತೋಷ್‍ಜೀ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದಾಗ, ಅವರ ಕೆಣಕುವ ಮೂಲಕ ಕಾಂಗ್ರೆಸ್ ತಮ್ಮ ಪಕ್ಷ ದೇಶದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದ್ದಾರೆ.

ಕ್ರೌರ್ಯ ಮನಃಸ್ಥಿತಿ ದ್ಯೋತಕ: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿದೆ. ಕ್ರೌರ್ಯದ ಮನಃಸ್ಥಿತಿಯ ದ್ಯೋತಕವಾಗಿ ಪುಂಡಾಟಿಕೆ ಮೆರೆದಿದ್ದ ಬಿಬಿಎಂಪಿ ಸದಸ್ಯೆ ಇರ್ಷಾದ್ ಬೇಗಂ ಪತಿ ಕಲೀಂ ಪಾಷಾರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೀಚಕರ ಹೆಡೆಮುರಿ ಕಟ್ಟುವಲ್ಲಿ ಸರಕಾರ ಸಮರ್ಥವಿದೆ. ಕಾಂಗ್ರೆಸ್‍ನವರಿಗೆ ಈಗಲಾದರೂ ನಿಜ ಸತ್ಯದ ಅರಿವಾಯಿತೇ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ಸಂಪತ್ ರಾಜ್ ಅವರು ನನಗೆ ಪರಿಚಿತರು. ಅವರು ನಮ್ಮ ಪಕ್ಷದ ಕಾರ್ಪೋರೇಟರ್ ಹೌದು. ಪ್ರಜಾಪ್ರಭುತ್ವದ ನಾಲ್ಕನೆ ಆಧಾರ ಸ್ತಂಭವೆಂದೇ ಕರೆಯಲ್ಪಡುವ ಮಾಧ್ಯಮಗಳ ವರದಿಗಳು ವಸ್ತುನಿಷ್ಠ ಮತ್ತು ನ್ಯಾಯಯುತವಾಗಿರಬೇಕು. ಸುಳ್ಳು ಸುದ್ದಿಗಳಿಂದ ಆ ಘನತೆಗೆ ಧಕ್ಕೆಯಾಗುತ್ತದೆ. ನಿನ್ನೆಯ ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ನಮ್ಮ ಪಕ್ಷದ ಮುಖಂಡ ಸಂಪತ್ ರಾಜ್ ಅವರ ಕೈವಾಡವಿದೆ ಎಂಬ ಸುಳ್ಳು ಸುದ್ದಿ ಮಾಧ್ಯಮವೊಂದರಲ್ಲಿ ಪ್ರಸಾರವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಮಾಧ್ಯಮಗಳಿಗೆ ನನ್ನದೊಂದು ಮನವಿ, ದಯವಿಟ್ಟು ಕಲ್ಪಿತ ವರದಿಗಳನ್ನು ಪ್ರಸಾರ ಮಾಡಿ ಜನರಿಗೆ ತಪ್ಪು ಸಂದೇಶ ನೀಡಬೇಡಿ'

-ಬಿ.ಝಡ್.ಝಮೀದ್ ಅಹ್ಮದ್ ಖಾನ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News