ಅಂತರ್ ರಾಜ್ಯ ಸಂಚಾರಕ್ಕೆ ನಿರ್ಬಂಧ ವಿಚಾರ: ಸ್ಪಷ್ಟನೆ ನೀಡಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2020-08-14 15:19 GMT

ಬೆಂಗಳೂರು, ಆ.14: ಕೇಂದ್ರ ಸರಕಾರ ಅನ್ ಲಾಕ್ ಆದೇಶದಲ್ಲಿ ಅಂತರ ರಾಜ್ಯ ಸಂಚಾರಕ್ಕೆ ಅನುಮತಿ ನೀಡಿದ್ದರೂ ರಾಜ್ಯ ಸರಕಾರ ಏಕೆ ನಿರ್ಬಂಧ ವಿಧಿಸಿದೆ ಎಂದು ಪ್ರಶ್ನಿಸಿರುವ ಹೈಕೋರ್ಟ್ ಈ ಸಂಬಂಧ ಸ್ಪಷ್ಟನೆ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ತಮಿಳುನಾಡಿನ ಹೊಸೂರಿನಿಂದ ಬೆಂಗಳೂರು ಕಡೆಗೆ ನಿತ್ಯವೂ ಕೆಲಸಕ್ಕೆ ಬರುವ ಕಾರ್ಮಿಕರ ಸಂಚಾರಕ್ಕೆ ರಾಜ್ಯದ ಅಧಿಕಾರಿಗಳು ಅಡ್ಡಿ ಮಾಡುತ್ತಿರುವುದನ್ನು ಪ್ರಶ್ನಿಸಿ ವಕೀಲೆ ಇಂದಿರಾ ಪ್ರಿಯದರ್ಶಿನಿ ಸಲ್ಲಿಸಿರುವ ಸಾರ್ಜಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರ ವಕೀಲೆ ಇಂದಿರಾ ಪ್ರಿಯದರ್ಶಿನಿ ವಾದಿಸಿ, ಹೊಸೂರು ಸೇರಿ ತಮಿಳುನಾಡಿನ ಗಡಿ ಭಾಗದ ಸಾವಿರಾರು ಜನ ಬೆಂಗಳೂರಿಗೆ ಕೆಲಸಕ್ಕೆ ಬರುತ್ತಾರೆ. ಆದರೆ ಪೊಲೀಸರು ಇವರ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ರಾಜ್ಯ ಪ್ರವೇಶಿಸುವ ಜನರು ಸೇವಾಸಿಂಧು ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಉದ್ಯೋಗಧಾತ ಸಂಸ್ಥೆಯಿಂದ ಈ ಕುರಿತು ಪತ್ರ ತರಬೇಕು. ನಂತರ ಇ-ಪಾಸ್ ಪಡೆದು ರಾಜ್ಯ ಪ್ರವೇಶಿಸಬೇಕು ಎಂದು ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ ಸರಕಾರದ ಈ ಆದೇಶದಿಂದಾಗಿ ಜನರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಉನ್ನತ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ತಮ್ಮ ಉದ್ಯೋಗಧಾತ ಸಂಸ್ಥೆಯಿಂದ ಪತ್ರ ತಂದುಕೊಡಬಹುದು. ಆದರೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಅಂತಹ ಪತ್ರ ತರುವುದು ಕಷ್ಟ. ಕೇಂದ್ರ ಸರಕಾರ ಅನ್ ಲಾಕ್ ಆದೇಶದ ಮೂಲಕ ಅಂತರ್ ರಾಜ್ಯ ಸಂಚಾರವನ್ನು ಮುಕ್ತಗೊಳಿಸಿದೆ. ಹೀಗಾಗಿ ತಮಿಳುನಾಡು ಗಡಿಭಾಗದ ಜನ ಬೆಂಗಳೂರಿಗೆ ಓಡಾಡಲು ಅಡ್ಡಿಪಡಿಸದಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ಸರಕಾರದ ಪರ ವಾದಿಸಿದ ವಕೀಲ ವಿಕ್ರಮ್ ಹುಯಿಲ್ಗೋಳ್ ಅವರು, ಸೇವಾ ಸಿಂಧು ಪೋರ್ಟಲ್‍ನಲ್ಲಿ ಹೆಸರು ದಾಖಲಿಸುವ ಪ್ರಕ್ರಿಯೆಯನ್ನು ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್‍ಗೆ ಒಳಪಡಿಸುವ ಉದ್ದೇಶದಿಂದ ಮಾಡಲಾಗಿದೆ. ಉಳಿದಂತೆ ಕೆಲಸದ ನಿಮಿತ್ತ ಸಂಚರಿಸುವ ಜನ ಉದ್ಯೋಗಧಾತರಿಂದ ಪತ್ರ ತಂದರೆ ಅವರ ಓಡಾಟಕ್ಕೆ ಯಾವುದೇ ಅಡ್ಡಿಯಿಲ್ಲ ಎಂದರು. ಇದನ್ನು ಒಪ್ಪದ ಪೀಠ ಅನ್ ಲಾಕ್ ಪ್ರಕ್ರಿಯೆ ಆರಂಭವಾದ ಮೇಲೆ ಹೀಗೆ ಮಾಡಿದರೆ ಕಾರ್ಮಿಕರು ಕೆಲಸಕ್ಕೆ ಹೋಗುವುದು ಹೇಗೆ ಎಂದು ಪ್ರಶ್ನಿಸಿತಲ್ಲದೆ, ಈ ಸಂಬಂಧ ಸ್ಪಷ್ಟನೆ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ, ಆ.24ಕ್ಕೆ ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News