ಹಿಂಸಾಚಾರ: ದುಷ್ಕರ್ಮಿಗಳ ವಿರುದ್ಧ ದೂರು ನೀಡಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ

Update: 2020-08-14 16:58 GMT

ಬೆಂಗಳೂರು, ಆ. 14: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಮತ್ತು ಕಾವಲ್‍ಭೈರಸಂದ್ರ ದೊಂಬಿ, ಹಿಂಸಾಚಾರದ ವೇಳೆ ತಮ್ಮ ನಿವಾಸಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ವಿರುದ್ಧ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಇಲ್ಲಿನ ದೇವರಜೀವನಹಳ್ಳಿ(ಡಿ.ಜಿ.ಹಳ್ಳಿ) ಪೊಲೀಸ್ ಠಾಣೆಗೆ ತೆರಳಿ ಶುಕ್ರವಾರ ದೂರು ದಾಖಲಿಸಿದ್ದಾರೆ.

ಈ ನಡುವೆ ಗಲಭೆ ಪ್ರಕರಣ ಸಂಬಂಧ ಕಾರ್ಪೋರೇಟರ್ ಇರ್ಷಾದ್ ಬೇಗಂ ಅವರ ಪತಿ ಕಲೀಂ ಪಾಷಾ ಮತ್ತು ಟಿಪ್ಪು ಆರ್ಮಿ ಫೈರೋಝ್ ಸೇರಿದಂತೆ ಹಲವರನ್ನು ನಿನ್ನೆ ತಡರಾತ್ರಿ ಬಂಧಿಸಿರುವ ಪೊಲೀಸರು, ಉಳಿದವರ ಬಂಧನಕ್ಕೆ ಶೋಧ ಮುಂದುವರಿಸಿದ್ದಾರೆ. ಕಲೀಂ ಪಾಷಾನನ್ನು ಉದ್ರಿಕ್ತ ಗುಂಪಿಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆ ಪ್ರದೇಶದ ಯಾವುದೇ ವ್ಯಕ್ತಿಗಳು ಹೊರಗೆ ಬರಲು ಅವಕಾಶವಿಲ್ಲ. ಅಲ್ಲದೆ, ಹೊರಗಿನ ವ್ಯಕ್ತಿಗಳಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈ ಮಧ್ಯೆ ಗಲಭೆಗೆ ಮೊದಲು ಮತ್ತು ಹಿಂಸಾಚಾರದ ಸಂದರ್ಭದಲ್ಲಿ ವಾಟ್ಸ್ ಆ್ಯಪ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ನೀಡಿದವರ ಬಂಧನಕ್ಕೆ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ತಮ್ಮ ಬೆಂಬಲಿಗರೊಂದಿಗೆ ಧಾವಿಸಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ(ಡಿಸಿಪಿ) ಶರಣಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಗಲಭೆ ಮತ್ತು ಅದಕ್ಕೂ ಮುನ್ನ ನಡೆದ ಎಲ್ಲ ಘಟನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ, ತಮ್ಮ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಬಗ್ಗೆ ಲಿಖಿತ ದೂರು ದಾಖಲಿಸಿದ್ದಾರೆಂದು ಗೊತ್ತಾಗಿದೆ.

3 ಕೋಟಿ ರೂ.ನಷ್ಟು ನಷ್ಟ: `ನನ್ನ ನಿವಾಸಕ್ಕೆ ಬೆಂಕಿ ಹಚ್ಚಿ, ಮನೆಯಲ್ಲಿದ್ದ ಚಿನ್ನ-ಬೆಳ್ಳಿಯ ಆಭರಣಗಳು ಸೇರಿದಂತೆ ಬೆಳೆಬಾಳುವ ವಸ್ತುಗಳನ್ನು ದೋಚಿದ್ದು, ಅಂದಾಜಿನ ಪ್ರಕಾರ ಮೂರು ಕೋಟಿ ರೂ.ಗಳಿಗೂ ಅಧಿಕ ನಷ್ಟವಾಗಿದೆ. ನನ್ನ ತಂದೆ ಕಟ್ಟಿದ್ದ ಹಾಗೂ ನಾನು ಆಟವಾಡಿ ಬೆಳೆದಿದ್ದ ಮನೆಯನ್ನು ಸಂಪೂರ್ಣ ಸುಟ್ಟಹಾಕಲಾಗಿದೆ' ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಗದ್ಗದಿತರಾದರು.

ತಾನು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿರುವ ದೇವರಜೀವನಹಳ್ಳಿ ಪೊಲೀಸ್ ಠಾಣೆಯಲ್ಲಿದ್ದ ಜೀಪು, ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದು, ನನ್ನ ನಿವಾಸದಲ್ಲಿನ ಹಾನಿಗಿಂತ ಹೆಚ್ಚಿನ ಹಾನಿ ಸಂಭವಿಸಿದೆ ಎಂದ ಅವರು, ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಅಲ್ಲದೆ, ಗಲಭೆ ಮತ್ತು ಹಿಂಸಾಚಾರ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದೇನೆ ಎಂದು ತಿಳಿಸಿದರು.

ನಿಷೇಧಾಜ್ಞೆ ಮುಂದುವರಿಕೆ

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಮತ್ತು ಕಾವಲ್ ಭೈರಸಂದ್ರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಆರ್‍ಎಎಫ್ ಸೇರಿದಂತೆ ರಾಜ್ಯ ಮೀಸಲು ಪಡೆಯ ತುಕಡಿಗಳನ್ನು ಭದ್ರತೆಗೆ ನಿಯೋಜನೆ ಮಾಡಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲೆ ಮೊಕ್ಕಂ ಹೂಡಿದ್ದಾರೆ. ಪೂರ್ವ ವಿಭಾಗದಲ್ಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News