ಬೆಂಗಳೂರು ಹಿಂಸಾಚಾರ ಪ್ರಕರಣ: ಮಾಜಿ ಸಚಿವ ರೋಷನ್ ಬೇಗ್ ಖಂಡನೆ

Update: 2020-08-14 17:22 GMT

ಬೆಂಗಳೂರು, ಆ.14: ಪ್ರವಾದಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಹೇಳಿಕೆ ಹಾಕಲಾಗಿದೆ ಎಂದು ಆರೋಪಿಸಿ ಡಿ.ಜೆ.ಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ನಡೆದ ಪ್ರತಿಭಟನೆ, ಗಲಭೆಯಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾಗೂ ಪೊಲೀಸ್ ಠಾಣೆಗೆ ಹಾನಿ ಮಾಡಿದ ಘಟನೆಯನ್ನು ಮಾಜಿ ಸಚಿವ ಆರ್.ರೋಷನ್ ಬೇಗ್ ತೀವ್ರವಾಗಿ ಖಂಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿಯನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿ ಮಾಡಲು, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಲು ಇಸ್ಲಾಮ್ ಕಲಿಸುತ್ತದೆಯೆ? ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಇಂತಹ ಕೃತ್ಯಗಳಿಗೆ ಕೈ ಹಾಕುವವರಿಗೆ ಯಾವಾಗ ಬುದ್ಧಿ ಬರುತ್ತದೆಯೋ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಗಲಭೆ ಪೀಡಿತ ಪ್ರದೇಶದಲ್ಲಿನ ದೇವಸ್ಥಾನವೊಂದಕ್ಕೆ ಯಾವುದೆ ಹಾನಿಯಾಗದಂತೆ ತಡೆಯಲು ಕೆಲವು ಯುವಕರು ಮಾನವ ಸರಪಳಿ ನಿರ್ಮಿಸಿಕೊಂಡು ನಿಂತಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಅವರು, ನಿಜಕ್ಕೂ ಆ ಯುವಕರ ಕಾರ್ಯಕ್ಕೆ ಸಲಾಂ ಹೇಳುತ್ತೇನೆ ಎಂದರು.

ಕೋವಿಡ್-19 ಸಾಂಕ್ರಾಮಿಕದಿಂದಾಗಿ ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ಜನರ ಸೇವೆಯಲ್ಲಿ ಹಗಲು ರಾತ್ರಿ ದುಡಿಯುತ್ತಿರುವ ಪೊಲೀಸರು ಹೈರಾಣಾಗಿದ್ದಾರೆ. ಕಿಡಿಗೇಡಿಗಳು ಅವರ ಮೇಲೆ ದಾಳಿ ಮಾಡಿದ್ದಲ್ಲದೆ, ಅವರ ವಾಹನಗಳಿಗೆಲ್ಲ ಬೆಂಕಿ ಹಚ್ಚಿದ್ದಾರೆ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದರು.

ಒಂದು ವೇಳೆ ಪೊಲೀಸ್ ಇನ್ಸ್‍ಪೆಕ್ಟರ್ ನಿಮ್ಮ ದೂರನ್ನು ಸ್ವೀಕರಿಸಲು ವಿಳಂಬ ಮಾಡಿದ್ದಲ್ಲಿ, ಅಥವಾ ದೂರು ಸ್ವೀಕರಿಸಲು ನಿರಾಕರಿಸಿದ್ದರೆ ಮೇಲಿನ ಅಧಿಕಾರಿಗಳನ್ನು ಭೇಟಿ ಮಾಡಿ ವಿಷಯ ತಿಳಿಸಬೇಕಿತ್ತು. ಅದನ್ನು ಬಿಟ್ಟು ಏಕಾಏಕಿ ಪೊಲೀಸ್ ಠಾಣೆಯ ಮೇಲೆಯೆ ದಾಳಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ರೋಷನ್ ಬೇಗ್ ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News