ವಿಟಾಮಿನ್ ಸಿ ಲಾಭಗಳು:ನಿಮಗೆ ಗೊತ್ತಿರಲೇಬೇಕಾದ ನಾಲ್ಕು ಸತ್ಯಗಳು ಇಲ್ಲಿವೆ

Update: 2020-08-14 17:45 GMT

ವಿಟಾಮಿನ್ ಸಿ ನಮ್ಮ ಶರೀರಕ್ಕೆ ಅಗತ್ಯವಾಗಿರುವ ಅತ್ಯಂತ ಮುಖ್ಯ ವಿಟಾಮಿನ್‌ಗಳಲ್ಲಿ ಒಂದಾಗಿದೆ. ನೀರಿನಲ್ಲಿ ಕರಗಬಲ್ಲ ಈ ವಿಟಾಮಿನ್ ಸ್ಟ್ರಾಬೆರ್ರಿ, ಕಿತ್ತಳೆ,ಲಿಂಬೆ ಮತ್ತು ದ್ರಾಕ್ಷಿಯಂತಹ ಸಿಟ್ರಸ್ ಕುಟುಂಬಕ್ಕೆ ಸೇರಿದ ಹಣ್ಣುಗಳು ಹಾಗೂ ಬ್ರಾಕೊಲಿ,ಕಾಲಿಫ್ಲವರ್,ಪಾಲಕ್,ಕ್ಯಾಬೇಜ್ ಮತ್ತು ಹಸಿರು ಸೊಪ್ಪುಗಳಂತಹ ಇತರ ಆಹಾರಗಳಲ್ಲಿ ಕಂಡುಬರುತ್ತದೆ. ಈ ವಿಟಾಮಿನ್ ಪ್ರಬಲ ಉತ್ಕರ್ಷಣ ನಿರೋಧಕವಾಗಿದ್ದು, ಚರ್ಮದ ಆರೋಗ್ಯ ಮತ್ತು ನಿರೋಧಕ ವ್ಯವಸ್ಥೆಯ ಕಾರ್ಯದ ಮೇಲೆ ಧನಾತ್ಮಕ ಪರಿಣಾಮಗಳನ್ನು ಹೊಂದಿದೆ. ಮಾನವ ಶರೀರವು ವಿಟಾಮಿನ್ ಸಿ ಅನ್ನು ತಯಾರಿಸುವುದಿಲ್ಲ ಅಥವಾ ಅದನ್ನು ದಾಸ್ತಾನಿಟ್ಟುಕೊಳ್ಳಲೂ ಅದಕ್ಕೆ ಸಾಧ್ಯವಿಲ್ಲ, ಹೀಗಾಗಿ ಪ್ರತಿದಿನ ಈ ವಿಟಾಮಿನ್ ಅನ್ನು ಸಮೃದ್ಧವಾಗಿ ಒಳಗೊಂಡಿರುವ ಆಹಾರಗಳ ಸೇವನೆ ಮುಖ್ಯವಾಗಿದೆ.

ಪುರುಷರಿಗೆ ಪ್ರತಿದಿನ 90 ಎಂಜಿ ವಿಟಾಮಿನ್ ಸಿ ಅಗತ್ಯವಾಗಿದ್ದರೆ ಮಹಿಳೆಯರಿಗೆ 75 ಎಂಜಿ ಅಗತ್ಯವಿದೆ. ನಮ್ಮ ಆಹಾರ ಕ್ರಮದಲ್ಲಿ ವಿಟಾಮಿನ್ ಸಿ ಸಮೃದ್ಧ ಆಹಾರಗಳನ್ನು ಸೇರಿಸಿಕೊಳ್ಳುವುದರಿಂದ ಶರೀರದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಶರೀರದಲ್ಲಿಯ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಒಂದು ವಿಧದ ಬಿಳಿಯ ರಕ್ತಕಣಗಳಾಗಿರುವ ಟಿ-ಸೆಲ್‌ಗಳನ್ನು ಬಲಗೊಳಿಸಲು ವಿಟಾಮಿನ್ ಸಿ ನೆರವಾಗುತ್ತದೆ.

 1) ಶರೀರವು ಹೆಚ್ಚು ಪ್ರತಿರಕ್ಷಣಾ ಕೋಶಗಳನ್ನು ತಯಾರಿಸಲೂ ವಿಟಾಮಿನ್ ಸಿ ನೆರವಾಗುತ್ತದೆ ಮತ್ತು ಆರೋಗ್ಯಕರ ಕೋಶಗಳು ಹೆಚ್ಚು ಸಮಯ ಬದುಕಿರುವಂತೆ ನೋಡಿಕೊಳ್ಳುತ್ತದೆ. 2) ಸಾಮಾನ್ಯ ಶೀತವನ್ನು ತಡೆಯಲು ವಿಟಾಮಿನ್ ಸಿ ನೆರವಾಗುತ್ತದೆ ಎಂದು ಹೇಳುವಂತಿಲ್ಲವಾದರೂ,ಅನಾರೋಗ್ಯಕ್ಕೆ ಮುನ್ನ ನೀವು ಅಗತ್ಯ ಪ್ರಮಾಣದಲ್ಲಿ ಈ ವಿಟಾಮಿನ್ ಅನ್ನು ಸೇವಿಸುತ್ತಿದ್ದರೆ ಅದು ಖಂಡಿತವಾಗಿಯೂ ಶೀತದ ಅವಧಿಯನ್ನು ತಗ್ಗಿಸುತ್ತದೆ. ಅಲ್ಲದೆ,ಶೀತದ ಲಕ್ಷಣಗಳನ್ನೂ ಸೌಮ್ಯಗೊಳಿಸುತ್ತದೆ.

 3) ಕೊಲಾಜೆನ್ ಪ್ರೋಟಿನ್‌ನ ಸಂಸ್ಕರಣೆ,ಸಂಯೋಜಕ ಅಂಗಾಂಶಗಳು, ಮೂಳೆಗಳು,ಹಲ್ಲುಗಳು ಮತ್ತು ಸಣ್ಣ ರಕ್ತನಾಳಗಳಿಗೆ ವಿಟಾಮಿನ್ ಸಿ ಅಗತ್ಯವಾಗಿದೆ. ಕೊಲಾಜೆನ್ ಅನ್ನು ಸಂಸ್ಕರಿಸುವ ವಿಟಾಮಿನ್ ಸಿ ಗುಣವು ಸುದೀರ್ಘ ಕಾಲ ವಯಸ್ಸನ್ನು ಮರೆಮಾಚಲು ನೆರವಾಗುತ್ತದೆ. ವಿಟಾಮಿನ್ ಸಿ ಇಲ್ಲದಿದ್ದರೆ ಶರೀರವು ಕೊಲಾಜೆನ್ ಅನ್ನು ತಯಾರಿಸಲು ಸಾಧ್ಯವಿಲ್ಲ. ವಿಟಾಮಿನ್ ಸಿ ಮತ್ತು ಕೊಲಾಜೆನ್ ಸೇರಿಕೊಂಡು ಚರ್ಮದ ಆರ್ದ್ರತೆ,ಸ್ಥಿತಿಸ್ಥಾಪಕತ್ವ ಮತ್ತು ಸ್ವರೂಪವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ.

4) ಫ್ರೀ ರ್ಯಾಡಿಕಲ್‌ಗಳಿಂದ ಹಾನಿಯನ್ನು ತಡೆಯಲು ವಿಟಾಮಿನ್ ಸಿ ನೆರವಾಗುತ್ತದೆ. ಇದು ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡುವಲ್ಲಿ ನೆರವಾಗಬಹುದು,ಆದರೆ ಈ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ನಡೆಸುವ ಅಗತ್ಯವಿದೆ.

ಈಗಾಗಲೇ ಹೇಳಿರುವಂತೆ ನಮ್ಮ ಶರೀರವು ಸ್ವಯಂ ಆಗಿ ವಿಟಾಮಿನ್ ಸಿ ಅನ್ನು ತಯಾರಿಸುವುದಿಲ್ಲ. ಹೀಗಾಗಿ ಸಿಟ್ರಸ್ ಹಣ್ಣುಗಳು,ಬೆರ್ರಿ,ಬಟಾಟೆ,ಟೊಮೆಟೊ, ಕ್ಯಾಪ್ಸಿಕಂ,ಸೊಪ್ಪುಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದು ಅಗತ್ಯವಾಗಿದೆ. ಇಂತಹ ಆರೋಗ್ಯಕರ,ಸಮತೋಲಿತ ಆಹಾರವನ್ನು ಸೇವಿಸುತ್ತಿದ್ದರೆ ನಮ್ಮ ಶರೀರಕ್ಕೆ ಸಾಕಷ್ಟು ವಿಟಾಮಿನ್ ಸಿ ದೊರೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News