ಸಂಸದ ಅನಂತಕುಮಾರ್ ಹೆಗಡೆ 'ದೇಶದ್ರೋಹಿ' ಹೇಳಿಕೆಗೆ ಎಐಟಿಯುಸಿ ಖಂಡನೆ

Update: 2020-08-14 18:18 GMT

ಬೆಂಗಳೂರು, ಆ.14: ಬಿಎಸ್‍ಎನ್‍ಎಲ್ ನೌಕರರನ್ನು ದೇಶದ್ರೋಹಿಗಳೆಂದು ಕರೆದಿರುವ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ಎಐಟಿಯುಸಿ ಅಧ್ಯಕ್ಷ ಅನಂತಸುಬ್ಬರಾವ್ ಖಂಡಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಸಂಸದ ಅನಂತಕುಮಾರ್ ಹೆಗಡೆ ತಮ್ಮ ವಿಷಪೂರಿತ ಹೇಳಿಕೆಗಳನ್ನು ಮುಂದುವರೆಸಿದ್ದಾರೆ. ಬಿಜೆಪಿ ತನ್ನ ಕಾರ್ಪೊರೇಟ್ ನೀತಿಗಳನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಸರಕಾರಿ ಸಂಸ್ಥೆಗಳನ್ನು ಹಾಗೂ ಅಲ್ಲಿನ ನೌಕರರನ್ನು ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಇವರು ಹೀಗೆಯೆ ಮುಂದುವರೆಸಿದರೆ ದೇಶದ ನೌಕರರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇಂದು ಬಿಎಸ್‍ಎನ್‍ಎಲ್ ಮುಚ್ಚುವಂತಹ ಸ್ಥಿತಿಗೆ ಬರಲು ಕೇಂದ್ರ ಸರಕಾರದ ನೀತಿಗಳೇ ಕಾರಣವಾಗಿದೆ. ಉದ್ದೇಶಪೂರ್ವಕವಾಗಿಯೇ ಎಲ್ಲ ಸೌಲಭ್ಯಗಳನ್ನು ಖಾಸಗಿ ಕಂಪೆನಿಗಳಿಗೆ ನೀಡಿ, ಸರಕಾರಿ ಸಂಸ್ಥೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದು ಕೇಂದ್ರ ಸರಕಾರ ಮಾಡುವ ದೇಶದ್ರೋಹವಾಗಿದೆ. ಇದನ್ನು ಕಾರ್ಮಿಕರ ಮೇಲೆ ಹಾಕುತ್ತಿದ್ದಾರೆ.

ದೇಶದ ಹಿತಕ್ಕಾಗಿ, ಇಲ್ಲಿನ ಸೌಹಾರ್ದತೆಯ ಉಳಿವಿಗಾಗಿ ಹೋರಾಟ, ಕಾರ್ಯಕ್ರಮ ರೂಪಿಸುವವರನ್ನು ನಕ್ಸಲ್, ದೇಶದ್ರೋಹಿ ಎಂಬಂತೆ ಬಿಂಬಿಸಿ, ಜನತೆಯ ಚಿಂತನೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಇದರ ಲಾಭ ಪಡೆದು ಬಂಡವಾಳಶಾಹಿ, ಆರೆಸ್ಸೆಸ್ ಪರವಾಗಿ ನೀತಿಗಳನ್ನು ಜಾರಿ ಮಾಡಲಾಗುತ್ತಿದೆ. ಈ ಬಗ್ಗೆ ಜನತೆಯೆ ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆಂದು ಅವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News