ರಾಜಕೀಯ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ

Update: 2020-08-14 18:38 GMT

ಇಪ್ಪತ್ತನೆಯ ಶತಮಾನದ ಮೊದಲ ಎರಡು ದಶಕಗಳಲ್ಲಿ ಅಹವಾಲು, ಮನವಿಗಳ ಘಟ್ಟದಲ್ಲಿದ್ದ ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕು ಬಂದದ್ದು ಗಾಂಧೀಜಿಯವರ ನಾಯಕತ್ವದಿಂದ ಎಂಬುದು ಚರಿತ್ರೆಯಲ್ಲಿ ಈಗಾಗಲೇ ದೃಢವಾಗಿ ದಾಖಲಾಗಿದೆ. ಆದರೆ ಗಾಂಧೀಜಿಯವರ ಬಾಯಲ್ಲಿ ಮಾತ್ರ ತಾನು ಸ್ವಾತಂತ್ರ್ಯ ತಂದು ಕೊಡುತ್ತಿದ್ದೇನೆಂಬ ಮಾತು ಎಲ್ಲೂ ಬಂದಿಲ್ಲ. ಸಾಮಾನ್ಯವಾಗಿ ಚಾರಿತ್ರಿಕ ಘಟನೆಗಳು ಕೇಂದ್ರ ವ್ಯಕ್ತಿಯ ಸುತ್ತ ಮೂಡುವ ಹಾಗೆ ಗಾಂಧೀಜಿಯವರ ಸುತ್ತ ಆ ಕಾಲದ ಘಟನೆಗಳು ಕಟ್ಟಲ್ಪಟ್ಟಿವೆ. ಅದಕ್ಕೆ ಅವರು ಅರ್ಹರೂ ಹೌದು.

ಸ್ವಾತಂತ್ರ್ಯ ಬಂದು ಕೆಲವು ತಿಂಗಳ ನಂತರ ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸಮಾಜವಾದಿ ಚಿಂತಕ-ನಾಯಕ ರಾಮಮನೋಹರ ಲೋಹಿಯಾ ಅವರ ನಡುವೆ ನಡೆದ ಒಂದು ಪುಟ್ಟ ಚಕಮಕಿ ಇದು:

‘‘ನಾವು ಸ್ವತಂತ್ರ ಭಾರತವನ್ನು ಬಿಟ್ಟು ಹೋಗುವುದು ನಿಮಗಾಗಿ- ಅದನ್ನು ನೀವು ಕಟ್ಟಬಲ್ಲಿರೆಂಬ ನಿರೀಕ್ಷೆಯೊಡನೆ’’ ಎಂದು ಸರ್ದಾರ್ ಪಟೇಲ್ ಕೊಂಚ ಬಿಗುವಾಗಿಯೇ ಹೇಳುತ್ತಾರೆ. ಹಮ್ಮಿನ ಧ್ವನಿ ಇಷ್ಟವಾಗದೆ ಲೋಹಿಯಾ ಹೇಳುತ್ತಾರೆ: ‘‘ಧನ್ಯವಾದ. ನೀವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ವರಿಷ್ಠ ಸೇನಾಧಿಕಾರಿಯಂತೆ ಹೋರಾಡಿದ್ದರೆ, ನಾವು ಸಾಮಾನ್ಯ ಸಿಪಾಯಿಗಳಂತೆ ಹೋರಾಡಿದ್ದೇವೆ.’’ ಮಾತುಕತೆಯನ್ನು ನೆನಸಿಕೊಳ್ಳುತ್ತಾ ಲೋಹಿಯಾ ಹೇಳುತ್ತಾರೆ: ‘‘ಇದರಲ್ಲಿ ಕೊಡುಕೊಳ್ಳುವ ಮಾತು ಬರುವುದೆಲ್ಲಿಂದ? ಕೆಲವು ಹಿರಿಯರು ಮುಂದಿನ ಪೀಳಿಗೆಯ ಸಲುವಾಗಿಯೇ ತಾವು ಏನನ್ನಾದರೂ ಸಂಪಾದಿಸಿ ಇಡುತ್ತೇವೆ ಹಾಗೂ ಅದನ್ನು ಮುಂದಿನ ಪೀಳಿಗೆ ಕೃತಜ್ಞತೆಯಿಂದ ನೆನೆಯಲಿ ಎಂದುಕೊಳ್ಳುವ ಮನಸ್ಥಿತಿಯೇ ಆರೋಗ್ಯಕರವಾದುದಲ್ಲ. ಪ್ರತಿಯೊಂದು ಪೀಳಿಗೆಯೂ ತನಗೆ ಅತ್ಯುತ್ತಮ ಹಾಗೂ ಸರಿ ಎನ್ನಿಸಿದ್ದನ್ನು ಮಾಡುತ್ತಲೇ ಇರುತ್ತದೆ.’’

‘‘ಸ್ವಾತಂತ್ರ್ಯ ತಂದು ಕೊಟ್ಟವರು ಯಾರು?’’ ಎಂಬ ಪ್ರಶ್ನೆಯನ್ನು ಅಸಂಬದ್ಧವಾಗಿ ಚರ್ಚಿಸುವ ಅವಿವೇಕಿಗಳು ಈ ಮಾತುಕತೆಯನ್ನು ಸರಿಯಾಗಿ ಗ್ರಹಿಸಬೇಕಾದ ಅಗತ್ಯವಿದೆ. ಇಪ್ಪತ್ತನೆಯ ಶತಮಾನದ ಮೊದಲ ಎರಡು ದಶಕಗಳಲ್ಲಿ ಅಹವಾಲು, ಮನವಿಗಳ ಘಟ್ಟದಲ್ಲಿದ್ದ ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕು ಬಂದದ್ದು ಗಾಂಧೀಜಿಯವರ ನಾಯಕತ್ವದಿಂದ ಎಂಬುದು ಚರಿತ್ರೆಯಲ್ಲಿ ಈಗಾಗಲೇ ದೃಢವಾಗಿ ದಾಖಲಾಗಿದೆ. ಆದರೆ ಗಾಂಧೀಜಿಯವರ ಬಾಯಲ್ಲಿ ಮಾತ್ರ ತಾನು ಸ್ವಾತಂತ್ರ್ಯ ತಂದು ಕೊಡುತ್ತಿದ್ದೇನೆಂಬ ಮಾತು ಎಲ್ಲೂ ಬಂದಿಲ್ಲ.ಸಾಮಾನ್ಯವಾಗಿ ಚಾರಿತ್ರಿಕ ಘಟನೆಗಳು ಕೇಂದ್ರ ವ್ಯಕ್ತಿಯ ಸುತ್ತ ಮೂಡುವ ಹಾಗೆ ಗಾಂಧೀಜಿಯವರ ಸುತ್ತ ಆ ಕಾಲದ ಘಟನೆಗಳು ಕಟ್ಟಲ್ಪಟ್ಟಿವೆ. ಅದಕ್ಕೆ ಅವರು ಅರ್ಹರೂ ಹೌದು.

ಆದರೆ ಅದೇ ವೇಳೆಗೆ, 1942ರಲ್ಲಿ ಗಾಂಧೀಜಿ ‘‘ಮಾಡು ಇಲ್ಲವೆ ಮಡಿ’’ ಕರೆ ಕೊಟ್ಟು ‘‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’’ ಎಂಬ ಘೋಷಣೆ ಮೊಳಗಿಸಿದಾಗ ದೇಶದ ಉದ್ದಗಲಕ್ಕೂ ಜನಸಾಮಾನ್ಯರು, ಭೂಗತರಾಗಿ ಹೋರಾಟ ನಡೆಸಿದ ಜಯಪ್ರಕಾಶ ನಾರಾಯಣ, ಲೋಹಿಯಾ ಅಥವಾ ಅಂತಹ ಇನ್ನಿತರ ಸಾವಿರಾರು ನಾಯಕರು ಹಾಗೂ ಕೋಟ್ಯಂತರ ಮಹಿಳೆಯರು, ಮಹನೀಯರ ಹೋರಾಟದಿಂದ ಕೂಡ ಸ್ವಾತಂತ್ರ್ಯ ಬಂದ ಸತ್ಯ ಎಲ್ಲರಿಗೂ ಗೊತ್ತಿದೆ. ಆದ್ದರಿಂದಲೇ ಲೋಹಿಯಾ ಆಗಸ್ಟ್ 9ನ್ನು ‘ಕ್ರಾಂತಿದಿನ’ವನ್ನಾಗಿ ಆಚರಿಸಬೇಕೆಂದು ಹೇಳುತ್ತಿದ್ದರು; ಕೇವಲ ಅಧಿಕಾರ ಹಸ್ತಾಂತರಿಸಿದ ದಿನವಾದ ಆಗಸ್ಟ್ 15ರ ಸರಕಾರಿ ದಿನಾಚರಣೆಗಿಂತ, ಆಗಸ್ಟ್ 9 ನಿಜಕ್ಕೂ ನಾವು ಆಚರಿಸಬೇಕಾದ ದಿನ ಎನ್ನುತ್ತಿದ್ದರು. ಸ್ವಾತಂತ್ರ ಚಳವಳಿಯ ಇದೇ ಕಾಲಘಟ್ಟದಲ್ಲಿ ಅಂಬೇಡ್ಕರ್ ‘ಸ್ವಾತಂತ್ರ’ ಎಂಬ ಪರಿಕಲ್ಪನೆಯ ಅರ್ಥವನ್ನೇ ವಿಸ್ತಾರ ಮಾಡುತ್ತಿದ್ದರು; ‘ಸ್ವಾತಂತ್ರ’ ಎಂದರೆ ದಲಿತರ, ಮಹಿಳೆಯರ, ಬಹು ಜನಸಮುದಾಯದ ಸ್ವಾತಂತ್ರಕೂಡ ಎಂದು ಅದರ ಅರ್ಥವನ್ನು ವಿಸ್ತರಿಸಿದರು. ಅಂದು ಅಂಬೇಡ್ಕರ್ ಒಬ್ಬ ಸ್ವತಂತ್ರ ವ್ಯಕ್ತಿಯಾಗಿ, ಸ್ವತಂತ್ರ ಮನಸ್ಸಿನ ಬುದ್ಧಿಜೀವಿಯಾಗಿ, ನಂತರ ದೊಡ್ಡ ನಾಯಕರಾಗಿ ಮಾಡಿದ ಶ್ರಮದಾಯಕ ಕೆಲಸದ ಉತ್ತಮ ಫಲವನ್ನು ನಾವೆಲ್ಲ ಪಡೆಯುತ್ತಲೇ ಇದ್ದೇವೆ. ಅಂದರೆ ಒಂದು ದೇಶದ ರಾಜಕೀಯ ಸ್ವಾತಂತ್ರ ಹೇಗೆ ಉಳಿದ ಎಲ್ಲ ಬಗೆಯ ಸ್ವಾತಂತ್ರಗಳ ಮೂಲ ಎಂಬುದನ್ನು ಈ ಸನ್ನಿವೇಶ ಸ್ಪಷ್ಟವಾಗಿ ಹೇಳುತ್ತದೆ. ಇದಾದ ದಶಕಗಳ ನಂತರ, ಸ್ವಾತಂತ್ರ ಚಳವಳಿಗೆ ಅಂಬೇಡ್ಕರ್ ಅವರ ಕೊಡುಗೆಯೇನು ಎಂದು ಅಂಬೇಡ್ಕರ್ ಅವರನ್ನು ಹೀಗಳೆವ ಕೋಮುವಾದಿ ಗುಂಪು ಕೂಗತೊಡಗಿತು; ಬ್ರಿಟಿಷರಿಗೆ ತಪ್ಪೊಪ್ಪಿಗೆ ಬರೆದುಕೊಟ್ಟು ಬಚಾವಾದ ವೀರರ ಅನುಯಾಯಿಗಳು ಈ ಗುಂಪಿನ ಮುಂಚೂಣಿಯಲ್ಲಿದ್ದರು. ಜಾತಿವಿಕಾರ, ಧಾರ್ಮಿಕ ವಿಕಾರಗಳಿಂದ ತನ್ನ ಸ್ವಾತಂತ್ರ ಕಳೆದುಕೊಂಡಿದ್ದ ಭಾರತ ಸ್ವತಂತ್ರವಾದ ಮೇಲೆ ಹೇಗಿರಬೇಕು ಎಂಬ ಖಚಿತವಾದ ದಿಕ್ಕುಗಳನ್ನು ರೂಪಿಸಿದ ಅಂಬೇಡ್ಕರ್, ಈ ಸನಾತನಿಗಳು ಸಹಸ್ರಾರು ವರ್ಷ ಚಲಾಯಿಸಿದ ಅಧಿಕಾರವನ್ನು ಕಿತ್ತೊಗೆದರೆಂಬ ಕಾರಣಕ್ಕೆ ಅವರಿಗೆ ಅಂಬೇಡ್ಕರರನ್ನು ಕಂಡರಾಗದು. ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ನಿತ್ಯ ನಾಶ ಮಾಡುತ್ತಿರುವವರೂ ಇವರ ಶನಿಸಂತಾನಗಳೇ. ಸ್ವಾತಂತ್ರ ಚಳವಳಿಯ ಸ್ಪಿರಿಟ್ ಎಂಥದೆಂಬುದನ್ನು ಓದಿ ಕೂಡ ಅರಿಯದ ದಡ್ಡರಿಗೆ ಗಾಂಧಿ, ಗೋಖಲೆ, ಸರ್ದಾರ್ ಪಟೇಲ್...ಯಾರ ಕೊಡುಗೆಯೂ ಗೊತ್ತಿದ್ದಂತಿಲ್ಲ. ಇಂಡಿಯಾದ ಸ್ವಾತಂತ್ರ ಚಳವಳಿ ಏಕಕಾಲಕ್ಕೆ ಗಾಂಧೀಜಿಯವರ ಜೊತೆಗೆ ನೆಹರೂ, ಪೆರಿಯಾರ್, ಮೌಲಾನಾ ಆಝಾದರನ್ನೂ, ಅಷ್ಟಿಷ್ಟು ಜವಾಬ್ದಾರಿಯಿರುವ ದೊಡ್ಡ ಕೈಗಾರಿಕೋದ್ಯಮಿಗಳನ್ನೂ ಮತ್ತು ಎಲ್ಲ ವಲಯಗಳನ್ನೂ ಪ್ರಾಮಾಣಿಕವಾಗಿ ನಡೆಸಬಲ್ಲ ಜವಾಬ್ದಾರಿಯುತ ವ್ಯಕ್ತಿಗಳನ್ನೂ ಸೃಷ್ಟಿಸಿದ್ದನ್ನು ಮರೆಯಬಾರದು. ಹಾಗೆಯೇ ಮುಂದೆ ಸ್ವಾತಂತ್ರ್ಯೋತ್ತರ ಭಾರತವನ್ನು ಆಧುನಿಕವಾಗಿ ಕಟ್ಟಬಲ್ಲ ನೆಹರೂ, ಅಂಬೇಡ್ಕರ್ ಅವರಂತಹ ಶ್ರೇಷ್ಠಚಿಂತಕ-ನಾಯಕರನ್ನೂ ಸ್ವಾತಂತ್ರ ಚಳವಳಿಯ ಚೈತನ್ಯವೇ ರೂಪಿಸಿತು. ಅದರ ಒಂದು ಧಾರೆ ಇವತ್ತಿಗೂ ಮುಂದುವರಿಯುತ್ತಿದೆ. ಇಲ್ಲಿ ಇವತ್ತಿಗೂ ಜನರ ಪರವಾಗಿ ಇರುವವರು ದೇಶದ ಸ್ವಾತಂತ್ರ ಚಳವಳಿಯ ಅರ್ಥವನ್ನು ವಿಸ್ತರಿಸುತ್ತಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳೇ. ಆದರೆ ಸ್ವಾತಂತ್ರ ಚಳವಳಿಯ ಅರ್ಥವೇ ಗೊತ್ತಿಲ್ಲದ ಚೀರಾಟಗಾರರಿಗೆ ಇಂತಹ ಸಂಸ್ಥೆಗಳನ್ನು, ವ್ಯಕ್ತಿಗಳನ್ನು ಮುಗಿಸಬೇಕೆಂಬ ಹಿಂಸಾಮಯ ಗೀಳು ಅಮರಿಕೊಂಡಿದೆ. ಅವರು ಎಚ್. ಎಸ್. ದೊರೆಸ್ವಾಮಿಯವರಂತಹ ಹಿರಿಯ ಸ್ವಾತಂತ್ರ ಹೋರಾಟಗಾರರನ್ನೂ ನೋಯಿಸಬಲ್ಲ ನೀಚರಾಗಿದ್ದಾರೆ. ಈ ದೇಶ ನಿತ್ಯವೂ ಸರ್ವಾಧಿಕಾರದ ಕಡೆಗೆ ಸಾಗುವ ದಿಕ್ಕಿನಲ್ಲಿ ದುಡಿಯುತ್ತಿರುವ ಕಂಪೆನಿಯ ಆಸಾಮಿಗಳು ಕೂಡ ಇವರೇ. ಇವರು ಇಂದಿರಾಗಾಂಧಿಯವರ ಎರಡು ವರ್ಷಗಳ ಸರ್ವಾಧಿಕಾರದ ಕಾಲದಲ್ಲಿ ಇದ್ದವರಿಗಿಂತ ಹೆಚ್ಚು ಕ್ರೂರಿಗಳು ಎಂಬುದನ್ನು ತುರ್ತುಪರಿಸ್ಥಿತಿಯಲ್ಲಿ ಜೈಲಿನಲ್ಲಿದ್ದ ಎಲ್. ಕೆ. ಅಡ್ವ್ವಾಣಿ ಕೂಡ ಒಪ್ಪಬಹುದು.

ಆದ್ದರಿಂದಲೇ ಭಾರತದ ಸ್ವಾತಂತ್ರ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಪಾಯದಲ್ಲಿದೆ. ಒಂದು ಕಾಲದಲ್ಲಿ ಪುಡಾರಿಗಳು ಮತಗಟ್ಟೆಗಳನ್ನು ಅಪಹರಿಸುತ್ತಿದ್ದರು. ಪಕ್ಷಾಂತರಗಳ ಮೂಲಕ ಸರಕಾರಗಳನ್ನು ಉರುಳಿಸುತ್ತಿದ್ದರು. ಈಗ ಬಹುಮತ ಪಡೆದ ಪಕ್ಷವೊಂದು ವಿಧಾನಸಭೆಯಲ್ಲಿ ಅಧಿಕಾರ ಸ್ವೀಕರಿಸುವ ಮೊದಲೇ, ಪಕ್ಷಗಳನ್ನೇ ಮುಳುಗಿಸಬಲ್ಲ ವಿಶೇಷ ಸ್ವಾತಂತ್ರವಿದೆ. ಒಂದು ಸಾಮಾನ್ಯ ಅಂಶವೆಂದರೆ: ಆಗ ಸ್ವತಂತ್ರ ಮಾಧ್ಯಮಗಳು ಕಾಂಗ್ರೆಸ್ಸನ್ನು ಬಯ್ಯುತ್ತಿದ್ದವು. ಈಗಲೂ ಬಹುತೇಕ ಮಾಧ್ಯಮಗಳು ಕಾಂಗ್ರೆಸ್ಸನ್ನೇ ಬಯ್ಯುತ್ತಿವೆ! ಈ ಕಾಲದಲ್ಲಿ ‘ಪ್ರಿಪೇಯ್ಡಿ ರೀಚಾರ್ಜ್’ ಎನ್ನುವುದು ಇದನ್ನೇ ಎಂದು ಕಾಣುತ್ತದೆ.

2

ಇದೆಲ್ಲದರ ನಡುವೆ ಈ ವರ್ಷ ಸ್ವಾತಂತ್ರ ದಿನಾಚರಣೆಯ ಕೆಲವು ಖಾಯಂ ದೃಶ್ಯಗಳು ಕಾಣಲಿಕ್ಕಿಲ್ಲ ಎನ್ನಿಸುತ್ತಿದೆ. ಅದರಲ್ಲಿ ಮುಖ್ಯವಾದದ್ದು ಈ ದಿನವನ್ನು ನಿಜಕ್ಕೂ ಮುಗ್ಧವಾಗಿ ಆಚರಿಸುವ, ಇನ್ನೂ ಸಹಜ ದೇಶಭಕ್ತಿ ಇರಿಸಿಕೊಂಡಿರುವ, ತಿದ್ದಿದರೆ ನಿಜಕ್ಕೂ ದೇಶ ಕಟ್ಟಬಲ್ಲ ಶಾಲಾ ಮಕ್ಕಳು. ಈ ಮಕ್ಕಳ ಸ್ವಾತಂತ್ರ ದಿನವನ್ನು ಈ ಸಲ ಕೊರೋನ ಕಿತ್ತುಕೊಂಡಿದೆ. ಎರಡನೆಯದು, ತಾವು ನಡೆಯಲ್ಲಾಗಲೀ, ನುಡಿಯಲ್ಲಾಗಲೀ ಎಂದೂ ಸ್ವೀಕರಿಸದ ಸ್ವಾತಂತ್ರದ ಪರಿಕಲ್ಪನೆಯ ಪ್ಲೇಟುಗಳನ್ನು ಹಾಕುವ ರಾಜಕಾರಣಿಗಳು ಈ ಸಲ ಹೆಚ್ಚು ಕಾಣಲಿಕ್ಕಿಲ್ಲ. ಇವರ ಬದಲಿಗೆ ಸ್ವಾತಂತ್ರದ ಬಗ್ಗೆ ಬಾಯಿಗೆ ಬಂದದ್ದು ಚೀರುವ ಕಾರ್ಯನಿರತ ಸ್ವತಂತ್ರ ಚೀರಾಟಗಾರರು ಡಿಜಿಟಲ್ ಮಾಧ್ಯಮಗಳಲ್ಲಿ ಇದ್ದೇ ಇರುತ್ತಾರೆ. ಇನ್ನು ನಗರಗಳ ಸರ್ಕಲ್‌ಗಳಲ್ಲಿ ಬಡ ಮಕ್ಕಳು ಮಾರುವ ಪ್ಲಾಸ್ಟಿಕ್ ಬಾವುಟಗಳನ್ನು ಕಾರು, ಬೈಕುಗಳಲ್ಲಿ ಸಿಕ್ಕಿಸಿಕೊಂಡು ಅಡ್ಡಾಡುವ ಒಣ ದೇಶಭಕ್ತಿಯ ಪ್ರದರ್ಶಕರ ಸಂಖ್ಯೆ ಕೂಡ ಈ ಸಲ ಕಡಿಮೆಯೇ... ಹೀಗೆ ಒಣ ದೇಶಭಕ್ತಿಯನ್ನು ಅಬ್ಬರಿಸುವರು ತಮ್ಮ ಕುಟುಂಬಗಳ ಹುಡುಗ, ಹುಡುಗಿಯರು ಸ್ವತಂತ್ರವಾಗಿ ತಮ್ಮ ಸಂಗಾತಿಗಳನ್ನು ಆರಿಸಿಕೊಂಡ ತಕ್ಷಣ ಅವರ ಸ್ವಾತಂತ್ರ ಹರಣ ಮಾಡುವವರೂ, ಅವರ ಕೊಲೆ ಮಾಡುವ ಹೇಡಿಗಳೂ, ಆ ಕೊಲೆಗಳನ್ನು ಬೆಂಬಲಿಸುವ ಶೂರರೂ ಆಗಿರುತ್ತಾರೆಂಬ ಸತ್ಯ ಕೂಡ ನಮ್ಮ ಕಣ್ಣಿಗೆ ರಾಚುತ್ತದೆ.

ಈ ಚಿತ್ರಗಳ ಎದುರು ಕೆಲವು ಚಾರಿತ್ರಿಕ ದೃಶ್ಯಗಳು ಕೂಡ ಕಣ್ಣೆದುರು ಬರುತ್ತಿವೆ: ಕೋಮು ಹಿಂಸೆ ಕಂಡು ಖಿನ್ನರಾಗಿದ್ದ ಗಾಂಧೀಜಿ ಭಾರತಕ್ಕೆ ಸ್ವಾತಂತ್ರ ಬಂದ ರಾತ್ರಿ ಕೋಲ್ಕತಾದ ನೌಖಾಲಿಯ ಬೀದಿಗಳಲ್ಲಿ ‘‘ಮೈ ಕ್ಯಾ ಕರೂಂ’’ ಎಂದು ಅಸಹಾಯಕರಾಗಿ ಅಡ್ಡಾಡುತ್ತಿದ್ದ ದೃಶ್ಯ, ಸ್ವಾತಂತ್ರ ಬಂದ ರಾತ್ರಿ ರೇಡಿಯೊದಲ್ಲಿ ಆ ಕಾರ್ಯಕ್ರಮದ ವೀಕ್ಷಕ ವಿವರಣೆಯನ್ನು ಕೇಳಿಸಿಕೊಳ್ಳುತ್ತಿದ್ದ ಕವಿ ಕುವೆಂಪು ‘ಸ್ವಾತಂತ್ರ್ಯೋದಯ ಮಹಾಪ್ರಗಾಥ’ ಪದ್ಯ ಬರೆಯುತ್ತಾ, ‘‘ಹೆಜ್ಜೆ ಹೆಜ್ಜೆಯನಿಡಿಸಿ ಕೈ ಹಿಡಿದು ನಡೆಗಲಿಸಿ ಬಿಡುಗಡೆಗೆ ತಂದ ಆ ತಂದೆಯೆಲ್ಲಿ?’’ ಎಂದು ಹುಡುಕಾಡುವ ವಿಶಿಷ್ಟ ಚಿತ್ರ ಕೂಡ ನೆನಪಾಗುತ್ತದೆ.

ಮತ್ತೊಂದು ದೃಶ್ಯ: ಎರಡು ದಶಕಗಳ ಕೆಳಗೆ ಸ್ವಾತಂತ್ರ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಿದ್ದ ದಲಿತ ಸಂಘರ್ಷ ಸಮಿತಿಯ ಪೋಸ್ಟರುಗಳು ಮತ್ತು ಪಂಜಿನ ಮೊವಣಿಗೆ; ‘‘ಸಿದ್ದಲಿಂಗಯ್ಯನವರ ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ?’’ ಎಂಬ ಪದ್ಯದ ಅರ್ಥವನ್ನು ವಿಸ್ತರಿಸಿ, ವಿವರಿಸುತ್ತಿದ್ದ ಕರಪತ್ರಗಳಲ್ಲಿ ದಲಿತರಿಗೆ ನಿಜವಾದ ಸ್ವಾತಂತ್ರವೇ ಸಿಕ್ಕಿಲ್ಲ ಎಂಬುದನ್ನು ಎಲ್ಲರಿಗೂ ತಲುಪಿಸುವ ಪ್ರಾಮಾಣಿಕ ಕಾಳಜಿ ನೆನಪಾಗುತ್ತದೆ.

ದಲಿತರು ನಿಜವಾದ ಅರ್ಥದ ಸ್ವಾತಂತ್ರಕ್ಕಾಗಿ ಒತ್ತಾಯಿಸುತ್ತಿದ್ದ ಈ ಹೋರಾಟ, ಧರಣಿಗಳನ್ನು ನೆನೆಸಿಕೊಂಡಾಗ, ದಲಿತರ ಬೇಡಿಕೆಗಳನ್ನು ಪೂರ್ತಿ ಈಡೇರಿಸ ದಿದ್ದರೂ ಆಗಿನ ಕಾಂಗ್ರೆಸ್ ಅಥವಾ ಜನತಾ ಸರಕಾರಗಳೇ ಹೆಚ್ಚು ಡೆಮಾಕ್ರಟಿಕ್ ಎಂಬುದು ಎಲ್ಲರಿಗೂ ಹೊಳೆಯುತ್ತದೆ. ಈ ಕಾಲದಂತೆ ಭಿನ್ನಮತ ಎತ್ತಿದತಕ್ಷಣ ಅವರ ಮೇಲೆ ಸುಳ್ಳು ಆಪಾದನೆ ಹೊರಿಸುವ ಹೇಡಿತನ, ವಂಚನೆ ಹಾಗೂ ಸರ್ವಾಧಿಕಾರ ತುರ್ತುಪರಿಸ್ಥಿತಿಯ ನಂತರ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರಕಾರಗಳಲ್ಲಿ ತೀರಾ ಕಡಿಮೆಯಿತ್ತು. ಕೊಂಚ ಕಣ್ಣು ಬಿಟ್ಟು ಸ್ವಾತಂತ್ರ್ಯೋತ್ತರ ಭಾರತ ಸರಕಾರಗಳ ಚರಿತ್ರೆಯನ್ನು ನೋಡಿ: ಜವಾಹರಲಾಲ್ ನೆಹರೂ ಸರಕಾರದ ನಂತರ ಈ ದೇಶದ ಹೆಚ್ಚು ಸುದೀರ್ಘವಾದ ಡೆಮಾಕ್ರಟಿಕ್ ವಾತಾವರಣ ನರಸಿಂಹರಾವ್ ಹಾಗೂ ಮನಮೋಹನ್‌ಸಿಂಗ್ ಸರಕಾರಗಳ ಕಾಲದಲ್ಲಿ ಮಾತ್ರ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ನಡುವೆ ಯಾವ ಯಾವ, ಸರ್ವಾಧಿಕಾರಿ ಫ್ಯಾಶಿಸ್ಟ್ ಆಡಳಿತಗಳು ಎಷ್ಟರ ಮಟ್ಟಿಗೆ ಯಾವ ಯಾವ ಥರದಲ್ಲಿ ಪ್ರಜೆಗಳ ಸ್ವಾತಂತ್ರ ಹರಣ ಮಾಡಿವೆ, ಯಾವ ಯಾವ ಹಕ್ಕುಗಳನ್ನು ಕಿತ್ತುಕೊಂಡಿವೆ ಎಂಬ ಭೀಕರ ದೃಶ್ಯಗಳು ಓದುಗರೆಲ್ಲರಿಗೂ ಪರಿಚಿತವಾಗಿವೆ. ಜಮ್ಮು-ಕಾಶ್ಮೀರ ಪ್ರದೇಶದ ಮಕ್ಕಳು ಕಳೆದೊಂದು ವರ್ಷದಿಂದ ತಮ್ಮ ವಿದ್ಯಾಭ್ಯಾಸವನ್ನೇ ಕಳೆದುಕೊಂಡಿದ್ದಾರೆ ಎಂಬ ದುರಂತ ಕೂಡ ತಟ್ಟದಂಥ ಜಡತೆ ಮತ್ತು ಕ್ರೌರ್ಯ ಈ ಹುಂಬ ಮುಸ್ಲಿಮ್ ವಿರೋಧಿ ಸಿನಿಕ ಕಾಲದಲ್ಲಿ ವಿದ್ಯಾವಂತರನ್ನೂ ಆವರಿಸಿರುವುದು ದುಃಖಕರವಲ್ಲವೆ?

3

‘ಸ್ವಾತಂತ್ರ’ ಎಂಬ ಶಬ್ದ ಕೇಳಿದ ತಕ್ಷಣ ನಿಮಗೇನೆನ್ನಿಸುತ್ತದೆ ಎಂಬ ಪ್ರಶ್ನೆಗೆ ಪತ್ರಿಕೆಗಳಲ್ಲಿ, ಡಿಜಿಟಲ್ ಮಾಧ್ಯಮಗಳಲ್ಲಿ ಸರಿಯಾದ ಅಥವಾ ಅಸಂಬದ್ಧವಾದ ಉತ್ತರಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ನಿತ್ಯದ ಜನರ ಮಾತುಕತೆ ಗಳನ್ನು ಕೊಂಚ ಹತ್ತಿರದಿಂದ ನೋಡಿದರೆ ಇಂಡಿಯಾದ ಜನ ಸ್ವಾತಂತ್ರದ ಬಗ್ಗೆ ಎಷ್ಟು ಕ್ಷುದ್ರವಾಗಿ ಯೋಚಿಸುತ್ತಿದ್ದಾರೆ ಎಂಬುದು ಅರ್ಥವಾಗತೊಡಗುತ್ತದೆ: ಮೇಲುಜಾತಿ, ಪುರೋಹಿತಶಾಹಿ ಮನಸ್ಸುಗಳು ದಲಿತರಿಗೆ ಅತಿಯಾದ ಸ್ವಾತಂತ್ರ ಸಿಕ್ಕಿದೆ; ಅವರನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಕುದಿಯುತ್ತಿವೆ; ಆದ್ದರಿಂದಲೇ ದಲಿತರ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ; ಅಂದರೆ ಈ ಮೇಲುಜಾತಿಗಳ ಸ್ವಾತಂತ್ರ ಈಗ ಹೆಚ್ಚಿದೆ. ಆದ್ದರಿಂದಲೇ ಅವರೀಗ ಅಲ್ಪಸಂಖ್ಯಾತರ, ಅದರಲ್ಲೂ ಮುಸ್ಲಿಮರ, ಎಲ್ಲ ಸ್ವಾತಂತ್ರವನ್ನೂ ಕಬಳಿಸಬೇಕೆಂದು ತೆರೆಮರೆಯಲ್ಲಿ ಚೀರುತ್ತಿದ್ದಾರೆ; ಶೂದ್ರರು ಆ ಕೆಲಸ ಮಾಡಲು ಹೋಗಿ ಜೈಲು ಸೇರಿ ಖಾಯಮ್ಮಾಗಿ ತಮ್ಮ ಸ್ವಾತಂತ್ರವನ್ನು ಕಳೆದು ಕೊಳ್ಳುತ್ತಿದ್ದಾರೆ.

ಅತ್ತ ಸನಾತನಿಗಳಿಗೆ ಹಾಗೂ ಜಮೀನ್ದಾರಿ ಮನಸ್ಸಿನ ಕ್ರೂರಿಗಳಿಗೆ ಮಕ್ಕಳ ಹಾಗೂ ಮಹಿಳೆಯರ ಸ್ವಾತಂತ್ರ ಅತಿಯಾಗಿದೆ, ಅವರನ್ನು ಕೊಚ್ಚಿ ಹಾಕಬೇಕು ಎನ್ನಿಸುತ್ತಿದೆ. ಇತ್ತ ಮೂಲಭೂತವಾದಿಗಳು ಬೆಂಕಿ ಹಚ್ಚುವುದರಿಂದ ಮಾತ್ರ ತಮ್ಮ ಧರ್ಮ ಹಾಗೂ ಸ್ವಾತಂತ್ರದ ರಕ್ಷಣೆ ಮಾಡಿಕೊಳ್ಳಬಹುದೆಂದು ಹೊರಟು ಜೈಲು ಸೇರುತ್ತಿದ್ದಾರೆ. ಕೊರೋನದಿಂದಾಗಿ ನೂರಾರು ಮೈಲಿ ಊರಿಗೆ ನಡೆದುಕೊಂಡು ಹೋಗುತ್ತಿರುವ ಬಡವರಿಗೆ ಹಾದಿಯಲ್ಲೇ ಸಾಯುವ ಸ್ವಾತಂತ್ರವನ್ನು ಸರಕಾರಗಳೇ ದಯಪಾಲಿಸಿವೆ. ಇತ್ತ ಇಂತಹ ಘಟನೆಗಳನ್ನೆಲ್ಲ ವರದಿ ಮಾಡುವ ವಿಕಾರ ಮನಸ್ಸಿನ ಮಾಧ್ಯಮದವರು ತಮಗೆ ಹಾಗೂ ತಮ್ಮ ‘ಪೇ ಮಾಸ್ಟರು’ಗಳಿಗೆ ಆಗದವರ ವಿರುದ್ಧ ಈ ಸಮಸ್ಯೆಗಳನ್ನು ತಿರುಗಿಸಿ ಆ ಬೆಂಕಿಯನ್ನು ಎಲ್ಲೆಡೆ ಹಬ್ಬಿಸುವ ‘ವಾಕ್’ಸ್ವಾತಂತ್ರ ಇನ್ನಷ್ಟು ಬೇಕೆಂದು ಚಡಪಡಿಸುತ್ತಿದ್ದಾರೆ. ಇನ್ನು ಭ್ರಷ್ಟ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಕೋರ್ಟು, ಲೋಕಾಯುಕ್ತ ಇತ್ಯಾದಿಗಳು ತಮ್ಮ ಕಬಳಿಕೆಯ ಸ್ವಾತಂತ್ರವನ್ನು ಕಿತ್ತುಕೊಳ್ಳುತ್ತಿರುವುದರ ಬಗ್ಗೆ ಅಸಹನೆ ಏರುತ್ತಿರುವಂತಿದೆ. ಕೇವಲ ಪಕ್ಷಾಂತರ ಮಾಡಿದ್ದಕ್ಕೇ ತಮ್ಮನ್ನು ಅನರ್ಹರನ್ನಾಗಿ ಮಾಡಿಬಿಟ್ಟರೆ ತಮ್ಮ ಸ್ವೇಚ್ಛಾಸ್ವಾತಂತ್ರ ಮೊಟಕಾಗುತ್ತದೆ ಎನ್ನುವ ಆಸೆಬುರುಕ ಶಾಸಕರಿಗೆ ಪಕ್ಷಾಂತರ ನಿಷೇಧ ಕಾನೂನಿನ ಬಗೆಗೆ ರೇಗುತ್ತಿದೆ; ಪಾಪ ಅವರ ಸಿಟ್ಟನ್ನು ಕೋರ್ಟುಗಳೂ ಕೂಡ ಆಗಾಗ್ಗೆ ಅರ್ಥ ಮಾಡಿಕೊಳ್ಳಲೆತ್ನಿಸಿವೆ!

4

ಇದೆಲ್ಲವನ್ನೂ ನೋಡುತ್ತಿರುವಾಗ ಹಿಂದೊಮ್ಮೆ ಎಂಟನೆಯ ಕ್ಲಾಸಿನ ಮಗುವೊಂದನ್ನು ‘‘ಸ್ವಾತಂತ್ರ ಎಂದರೇನು?’’ ಎಂದು ಕೇಳಿದಾಗ, ಅದು ಥಟ್ಟನೆ ಕೊಟ್ಟ ಉತ್ತರ ನೆನಪಾಯಿತು: ‘‘ಫ್ರೀಡಂ ಆಫ್ ಥಾಟ್!’’ ಆ ಮಗು ಎಲ್ಲೋ ಓದಿದ್ದ ಮಾತನ್ನು ಮುಗ್ಧವಾಗಿ ಮತ್ತೆ ಹೇಳಿರಬಹುದು. ಆದರೆ ಇವತ್ತು ಸುಮ್ಮನೆ ಯೋಚಿಸ ತೊಡಗಿದರೆ ಆ ಮಾತೇ ಸರಿಯೆನ್ನಿಸತೊಡಗಿತು. ಅಂದರೆ, ಎಲ್ಲ ದುಷ್ಟಶಕ್ತಿಗಳ ಬಗೆಗೂ ಆಳವಾಗಿ ಯೋಚಿಸಬಲ್ಲ ಸ್ವಾತಂತ್ರ; ಎಷ್ಟು ಕಟುವಾಗಿಯಾದರೂ ಸರಿ, ಹೆದರದೆ ಚಿಂತಿಸಬಲ್ಲ ಸ್ವಾತಂತ್ರ; ಹೆದರದೆ ದಿಟ್ಟವಾಗಿ ಕಾಣಬಲ್ಲ ಸ್ವಾತಂತ್ರ; ನಮ್ಮ ಆಲೋಚನೆಗಳ ವಿರುದ್ಧವೇ ಚಿಂತಿಸಬಲ್ಲ ಸ್ವಾತಂತ್ರ...ಇಷ್ಟನ್ನಾದರೂ ಉಳಿಸಿಕೊಂಡರೆ ಸಾಕು, ನಾವು ಅಷ್ಟಿಷ್ಟಾದರೂ ಸ್ವತಂತ್ರವಾಗಿ ಉಳಿಯಬಹುದು ಎನ್ನಿಸತೊಡಗಿತು...

ಈಗಿನ ಕಾಲದಲ್ಲಿ ನೀವು ಹೀಗೆಲ್ಲ ಯೋಚಿಸುತ್ತಿರಬಹು ದೆಂದು ನಿಮ್ಮ ಮೆದುಳಿಗೇ ಮೈಕ್ರೋಸ್ಕೋಪ್ ಹಾಕಿ ಕಂಡುಹಿಡಿಯಬಲ್ಲ ಸೈತಾನರ ಸಾಕಣೆ ಮತ್ತು ಸಾಗಾಟ ಎಲ್ಲೆಡೆ ಇದ್ದೇ ಇದೆ. ಅದರ ನಡುವೆಯೂ ಸ್ವತಂತ್ರವಾಗಿ ಯೋಚಿಸಿದ್ದನ್ನು, ಕಂಡದ್ದನ್ನು ಹೇಳುವವರು ಇದ್ದೇ ಇರುತ್ತಾರೆ. ಅವರು ತಾವು ಕಂಡ ಸತ್ಯಗಳನ್ನು ಎಲ್ಲಿಯಾದರೂ ಎಂದಾದರೂ ಹೇಳುವ ವೇದಿಕೆಗಳೂ ಸದಾ ಇರುತ್ತವೆ. ಅತ್ಯಂತ ಆಳವಾಗಿ ಯೋಚಿಸಿ ಬರೆಯುವ, ಮಾತಾಡುವ, ಕ್ರಿಯೆಗಿಳಿಯುವ ಲಕ್ಷಾಂತರ ಜನ ಇನ್ನೂ ಇದ್ದಾರೆ. ಈ ನಿಟ್ಟಿನಲ್ಲಿ ಕೊಂಚವಾದರೂ ಗಂಭೀರವಾಗಿ, ಸ್ವತಂತ್ರವಾಗಿ ಯೋಚಿಸುತ್ತಿರುವ ರಾಷ್ಟ್ರಮಟ್ಟದ ಕೆಲವೇ ರಾಜಕಾರಣಿಗಳಲ್ಲಿ ಇವತ್ತು ರಾಹುಲ್‌ಗಾಂಧಿ ಕೂಡ ಮುಖ್ಯವಾಗಿ ಕಾಣುತ್ತಾರೆ. ಆದರೆ ಆಡಳಿತ ಪಕ್ಷದ ಮೇಲೆ ಹಾರಾಡಲಾಗದೆ ಕೈ-ಬಾಯಿ ಕಟ್ಟಿದಂತಿರುವ ಬಹುತೇಕ ಮಾಧ್ಯಮಗಳು ರಾಹುಲ್ ಗಾಂಧಿಯವರನ್ನು ಗೇಲಿ ಮಾಡಿ, ಅವರ ವಿಮರ್ಶಾ ಸ್ವಾತಂತ್ರವನ್ನು ಹರಣ ಮಾಡಲೆತ್ನಿಸುತ್ತಿವೆ. ಆದರೆ ಅದಕ್ಕೆಲ್ಲ ಜಗ್ಗದೆ ತಮಗನ್ನಿಸಿದ್ದನ್ನು ಹೇಳುತ್ತಲೇ ಇರುವ ಈ ಥರದ ನಾಯಕರು ನೂರಾಗಿ, ಲಕ್ಷವಾಗಿ ನಮ್ಮ ರಾಜಕೀಯ ಸ್ವಾತಂತ್ರವನ್ನು ಉಳಿಸಬಲ್ಲರು ಎಂಬ ಸಣ್ಣ ಆಶಾವಾದವೊಂದು ಮೆಲ್ಲಗೆ ಮೂಡತೊಡಗುತ್ತದೆ.

ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ: ಎಪ್ಪತ್ತಮೂರು ವರ್ಷಗಳ ಕೆಳಗೆ ಭಾರತಕ್ಕೆ ಬಂದ ರಾಜಕೀಯ ಸ್ವಾತಂತ್ರದಿಂದಾಗಿಯೇ ಇಲ್ಲಿ ಎಲ್ಲರ ಹಕ್ಕುಗಳು, ಅದರಲ್ಲೂ ದಲಿತರ ಹಕ್ಕುಗಳು, ವಿಚಾರ ಸ್ವಾತಂತ್ರ, ಅಭಿಪ್ರಾಯ ಸ್ವಾತಂತ್ರ, ಬಡವರ ಹಕ್ಕುಗಳು, ಸ್ತ್ರೀ ಸ್ವಾತಂತ್ರ, ಉಳುವವರಿಗೆ ಭೂ ಒಡೆತನ ಮುಂತಾದ ಅನೇಕ ಬಗೆಯ ಸ್ವಾತಂತ್ರಗಳು ಸಿಕ್ಕವು. ಇಂತಹ ಅನೇಕ ಸ್ವಾತಂತ್ರಗಳನ್ನು ಒಂದೊಂದಾಗಿ ನಾಶ ಮಾಡುತ್ತಿರುವ ಈ ಕಾಲದಲ್ಲಿ ಮತ್ತೆ ನಾವು ಪಡೆಯುವ ಅಸಲಿ ರಾಜಕೀಯ ಸ್ವಾತಂತ್ರ ಮಾತ್ರ ನಮ್ಮ ಎಲ್ಲ ಸ್ವಾತಂತ್ರಗಳನ್ನೂ ವಾಪಸ್ ಗಳಿಸಿಕೊಡಬಲ್ಲದು. ‘‘ಸ್ವರಾಜ್ ಎಂದರೆ ಸ್ವಂತದ ರಾಜ್ಯ ಎಂದಷ್ಟೇ ಅರ್ಥವಲ್ಲ; ನನ್ನನ್ನು ನಾನು ಆಳಿಕೊಳ್ಳುವ ಹಕ್ಕು’’ ಎಂದು ಕೂಡ ಗಾಂಧೀಜಿ ಹೇಳಿದ್ದರು. ಹಣದ ಆಟದಿಂದಾಗಿ ತಮ್ಮ ಪಕ್ಷಗಳನ್ನೂ ಆಳಿಕೊಳ್ಳಲಾಗದ ದೈನೇಸಿ ಸ್ಥಿತಿ ತಲುಪಿರುವ ವಿರೋಧ ಪಕ್ಷಗಳ ಅನೇಕ ನಾಯಕರು ಯೋಜಿತವಾದ ಕಳ್ಳ ಮೌನವನ್ನು ಅನುಸರಿಸುತ್ತಿರುವ ಈ ಸನ್ನಿವೇಶದಲ್ಲಿ ತಾವು ಕಳೆದುಕೊಂಡಿರುವ ಸ್ವಾತಂತ್ರವನ್ನು, ರಾಜಕೀಯಾಧಿಕಾರದ ಹಕ್ಕನ್ನು ರಾಜಕೀಯ ಪಕ್ಷಗಳು ಮೊದಲು ಮರಳಿ ಪಡೆಯಲು ಪಣ ತೊಡಬೇಕು. ರಾಜಕೀಯ ಪಕ್ಷಗಳ ಸ್ವಾತಂತ್ರ ಮಾಯವಾದ ತಕ್ಷಣ ದೇಶದ ಉಳಿದೆಲ್ಲ ವರ್ಗಗಳ ರಾಜಕೀಯ, ಸಾಮಾಜಿಕ ಮುಂತಾಗಿ ಎಲ್ಲ ಬಗೆಯ ಸ್ವಾತಂತ್ರವೂ ಮಾಯವಾಗುತ್ತದೆ ಎಂಬುದನ್ನು ನಿತ್ಯ ನೋಡುತ್ತಲೇ ಇದ್ದೇವೆ.

ಹಿಂದೊಮ್ಮೆ ತುರ್ತುಪರಿಸ್ಥಿಯಲ್ಲಿ ಜೈಲಿಗೆ ತಳ್ಳಲ್ಪಟ್ಟ ಬಲಪಂಥೀಯರ ಮರಿಗಳು ಇವತ್ತು ತಾವು ಒಪ್ಪದವರ ಸ್ವಾತಂತ್ರ ಕಸಿಯುವ ಹುನ್ನಾರದಲ್ಲಿ ಭಾಗಿಯಾಗಿವೆ. ಅವತ್ತು ಅದೇ ಜೈಲಿನಲ್ಲಿದ್ದ ಇತರ ಪ್ರಜಾಪ್ರಭುತ್ವವಾದಿ ಪಕ್ಷ�

Writer - ನಟರಾಜ್ ಹುಳಿಯಾರ್

contributor

Editor - ನಟರಾಜ್ ಹುಳಿಯಾರ್

contributor

Similar News