ದೇಶದಲ್ಲಿ 25 ಲಕ್ಷ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ

Update: 2020-08-15 03:59 GMT

ಹೊಸದಿಲ್ಲಿ, ಆ.15: ದೇಶದಲ್ಲಿ ಸತತ ಮೂರನೇ ದಿನ 65 ಸಾವಿರಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ಸೇರ್ಪಡೆಯಾಗಿದ್ದು, ಭಾರತದ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಶುಕ್ರವಾರ 25 ಲಕ್ಷದ ಗಡಿ ದಾಟಿದೆ. ಕಳೆದ ಎಂಟು ದಿನಗಳಲ್ಲಿ ಒಟ್ಟು ಐದು ಲಕ್ಷ ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಅಂತೆಯೇ ಮಾರಕ ಸೋಂಕಿನಿಂದ ಶುಕ್ರವಾರ ಮೃತಪಟ್ಟವರ ಸಂಖ್ಯೆ ಕೂಡಾ ಸಾವಿರದ ಸನಿಹ ಇದೆ.

ಆಗಸ್ಟ್ ಮೊದಲ 14 ದಿನಗಳಲ್ಲಿ ಭಾರತದಲ್ಲಿ 8.3 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ವಿಶ್ವದಲ್ಲೇ ಅಮೆರಿಕ ಮತ್ತು ಬ್ರೆಝಿಲ್ ಹೊರತುಪಡಿಸಿದರೆ ಗರಿಷ್ಠ ಪ್ರಕರಣ ದಾಖಲಿಸಿದೆ. ಎರಡನೇ ಸ್ಥಾನದಲ್ಲಿರುವ ಬ್ರೆಝಿಲ್ ಮತ್ತು ಭಾರತದ ಒಟ್ಟು ಸೋಂಕಿತರ ಅಂತರ ಜುಲೈ 31ಕ್ಕೇ 9.7 ಲಕ್ಷ ಇದ್ದುದು ಇದೀಗ 7.7 ಲಕ್ಷಕ್ಕೆ ಇಳಿದಿದೆ. ಬ್ರೆಝಿಲ್‌ನಲ್ಲಿ ಒಟ್ಟು 32.7 ಲಕ್ಷ ಪ್ರಕರಣಗಳು ವರದಿಯಾಗಿವೆ.

ಅಸ್ಸಾಂನಲ್ಲಿ ಒಂದೇ ದಿನ 2,706 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 74,501ಕ್ಕೇರಿದೆ. ರಾಜ್ಯದಲ್ಲಿ 175 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 12,608 ಹೊಸ ಪ್ರಕರಣಗಳು ವರದಿಯಾಗಿದ್ದು, 364 ಮಂದಿ ಜೀವ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 19,427ಕ್ಕೇರಿದೆ. ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 979 ಪ್ರಕರಣಗಳು ವರದಿಯಾಗಿದ್ದು, 47 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಈ ಮಧ್ಯೆ ದಿಲ್ಲಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1.50 ಲಕ್ಷದ ಗಡಿ ದಾಟಿದೆ. ಒಂದು ಲಕ್ಷ ಪ್ರಕರಣಗಳು ವರದಿಯಾದ 39 ದಿನಗಳ ಬಳಿಕ 50 ಸಾವಿರ ಪ್ರಕರಣಗಳು ಸೇರ್ಪಡೆಯಾಗಿವೆ. ರಾಜಧಾನಿಯಲ್ಲಿ ಮೊದಲ 50 ಸಾವಿರ ಪ್ರಕರಣಗಳು 110 ದಿನಗಳಲ್ಲಿ ವರದಿಯಾಗಿದ್ದರೆ, ನಂತರದ 50 ಸಾವಿರ ಪ್ರಕರಣಗಳು ಕೇವಲ 8 ದಿನಗಳಲ್ಲಿ ಸೇರ್ಪಡೆಯಾಗಿದ್ದವು.

ದೇಶದಲ್ಲಿ ಕೋವಿಡ್-19 ಸ್ಥಿತಿಗತಿ ಬಗ್ಗೆ ಪ್ರತಿದಿನ ವರದಿ ನೀಡುತ್ತಿದ್ದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್ ಅವರಿಗೂ ಕೋವಿಡ್-19 ಸೋಂಕು ದೃಢಪಟ್ಟಿದೆ. ಪಂಜಾಬ್‌ನಲ್ಲಿ ಶುಕ್ರವಾರ 1,077 ಹೊಸ ಪ್ರಕರಣಗಳು ವರದಿಯಾಗಿದ್ದರೆ, 25 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News