ಆ.15 ನಮ್ಮ ರಾಷ್ಟ್ರಪ್ರೇಮವನ್ನು ಮತ್ತೆ ಮತ್ತೆ ಜಾಗೃತಗೊಳಿಸುವ ಅಪೂರ್ವ ದಿನ: ಎಚ್.ಡಿ.ದೇವೇಗೌಡ

Update: 2020-08-15 11:41 GMT

ಬೆಂಗಳೂರು, ಆ.15: ಆಗಸ್ಟ್ 15 ಎಂದರೆ ನವಭಾರತದ ಉದಯದ ದಿನ. ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ದಿನವೂ ಹೌದು. ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ದೇಶ ಸ್ವತಂತ್ರವಾದ ಸುದಿನವಿಂದು. ಯಾವ ಭಾರತೀಯನೂ ಈ ದಿನವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಂದೇಶ ನೀಡಿರುವ ಅವರು, ನಮ್ಮ ರಾಷ್ಟ್ರಪ್ರೇಮವನ್ನು ಮತ್ತೆ ಮತ್ತೆ ಜಾಗೃತಗೊಳಿಸುವ ಅಪೂರ್ವ ದಿನವಿದು. ಹೀಗಾಗಿ ಇಂದಿನ ದಿನ ಎಂದರೆ ದೇಶದಲ್ಲಿ ಖುಷಿ ಮೇರೆ ಮೀರಿರುತ್ತದೆ, ಜೊತೆಗೆ ಅಸಂಖ್ಯಾತ ಮಹನೀಯರ ತ್ಯಾಗ, ಬಲಿದಾನದ ಪ್ರತೀಕ ಈ  ಸ್ವಾತಂತ್ರ್ಯದ ದಿನ ಎಂದು ಬಣ್ಣಿಸಿದ್ದಾರೆ.

ತಮ್ಮ ರಕ್ತವನ್ನು ಬೆವರಂತೆ ಬಸಿದು ಬ್ರಿಟಿಷರ ಗುಂಡಿಗೆ ಎದೆಗೊಟ್ಟು ಹೋರಾಟದ ಕಿಚ್ಚಿಗೆ ಯುವ ವಯಸ್ಸಿನಲ್ಲಿ ನೇಣು ಕುಣಿಕೆಯಲ್ಲಿ ಜೀವ ಬಿಟ್ಟು, ತಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು ಸಂಪೂರ್ಣ ದೇಶಕ್ಕೆ ಬದುಕು ಮುಡಿಪಾಗಿಟ್ಟು ಹೋರಾಟ ನಡೆಸಿದ ಅಸಂಖ್ಯಾತ ವೀರಾಗ್ರಣಿಗಳ ತ್ಯಾಗ, ಹೋರಾಟದಿಂದ ಲಭಿಸಿದ ಸ್ವಾತಂತ್ರ್ಯದ ಸವಿಯನ್ನು ನಾವಿಂದು ಉಣ್ಣುತ್ತಿದ್ದೇವೆ. ಹೀಗಾಗಿ, ಈ ದಿನ ಇವರೆಲ್ಲರಿಗೂ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ ಎಂದು ದೇವೇಗೌಡ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News