ಅಮಾಯಕರ ಬಂಧನದ ವಿರುದ್ಧ ಪೊಲೀಸ್ ಆಯುಕ್ತರ ಜೊತೆ ಚರ್ಚೆ: ವಿಪ ಸದಸ್ಯ ನಸೀರ್ ಅಹ್ಮದ್

Update: 2020-08-15 11:50 GMT

ಬೆಂಗಳೂರು, ಆ.15: ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸರು ಅಮಾಯಕರನ್ನು ಬಂಧಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಸಂಬಂಧ ಕೆಪಿಸಿಸಿ ವತಿಯಿಂದ ರಚಿಸಲಾಗಿರುವ ಮಾಜಿ ಗೃಹ ಸಚಿವರ ಸಮಿತಿಯೊಂದಿಗೆ ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ತಿಳಿಸಿದರು.

ನಗರದ ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಜೆ.ಹಳ್ಳಿಯಲ್ಲಿ ಆದ ಗಲಭೆ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಾವು ಸಭೆ ನಡೆಸಿದೆವು. ಆಗ ಸಿಸಿಟಿವಿ, ಸಾಮಾಜಿಕ ಜಾಲತಾಣಗಳಲ್ಲಿನ ವೀಡಿಯೊ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವೀಡಿಯೊಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ನಮಗೆ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದರು ಎಂದರು.

ಆದರೆ, ಇದೀಗ ಸಿಕ್ಕಿರುವ ಮಾಹಿತಿಯಂತೆ ಹಲವಾರು ಮಂದಿ ಅಮಾಯಕರನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿದ್ದಾರೆ. ಅದರಲ್ಲೂ ಗಲಭೆ ನಡೆದ ಸಂದರ್ಭದಲ್ಲಿ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‍ಭೈರಸಂದ್ರದಲ್ಲಿ ಮೊಬೈಲ್ ಟವರ್ ನ ಸಿಗ್ನಲ್ ಆಧಾರದಲ್ಲಿ ಯಾರು ಯಾರು ಆ ಜಾಗದಲ್ಲಿದ್ದರೋ ಅವರನ್ನು ಬಂಧಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದರು.

ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಬಳಿಯಿಂದ ಯಾರೋ ವ್ಯಕ್ತಿಯೊಬ್ಬ ನಮ್ಮ ಪಕ್ಷದ ಮುಖಂಡ ಕಲೀಮ್ ಪಾಷರನ್ನು ಕರೆ ಮಾಡಿದ್ದಾನೆ. ಆ ಆಧಾರದಲ್ಲಿ ಕಲೀಮ್ ಪಾಷರನ್ನು ಬಂಧಿಸಲಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದ ಮಾಜಿ ಗೃಹ ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ ಅವರನ್ನು ಒಳಗೊಂಡ ಸಮಿತಿ ಜೊತೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಯಾರೂ ಈ ಗಲಭೆಯಲ್ಲಿ ಭಾಗವಹಿಸಿದ್ದರೋ ಅಂತಹವರ ವಿರುದ್ಧ ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳಲಿ. ಆದರೆ, ತನಿಖೆ, ವಿಚಾರಣೆಯ ನೆಪದಲ್ಲಿ ಅಮಾಯಕರನ್ನು ಬಲಿಪಶು ಮಾಡುವುದು ಬೇಡ ಎಂದು ನಸೀರ್ ಅಹ್ಮದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News