ಬೆಂಗಳೂರು ಸಮಗ್ರ ಅಭಿವೃದ್ಧಿಗೆ ವಿನೂತನ ಕ್ರಮ: ಸಿಎಂ ಯಡಿಯೂರಪ್ಪ

Update: 2020-08-15 11:52 GMT

ಬೆಂಗಳೂರು, ಆ.15: ಉದ್ಯಾನನಗರಿ ಬೆಂಗಳೂರಿನ ಮೂಲಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಾಮಾಜಿಕ ಮತ್ತು ಜೈವಿಕ ಮೂಲಸೌಲಭ್ಯಗಳ ಪುನಶ್ಚೇತನಕ್ಕೆ ವಿನೂತನ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ 74 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 400 ಕಿ.ಮೀ ಉದ್ದದ ರಾಜಕಾಲುವೆಗಳಿದ್ದು, ಈ ನೀರ್ಗಾಲುವೆಗಳ ಹಸಿರೀಕರಣ, ಇಕ್ಕೆಲಗಳಲ್ಲಿ ಪಾದಚಾರಿ ಮತ್ತು ಬೈಸಿಕಲ್ ಪಥ ನಿರ್ಮಾಣಕ್ಕೆ ಯೋಜನೆಗಳನ್ನು ರೂಪಿಸಲಾಗಿದೆ.

ಮೊದಲನೇ ಹಂತದಲ್ಲಿ ಧರ್ಮಾಂಬುಧಿ ಕೆರೆಯಿಂದ (ಪ್ರಸ್ತುತ ಕೆಂಪೇಗೌಡ ಬಸ್ ನಿಲ್ದಾಣ) ಬೆಳ್ಳಂದೂರು ಕೆರೆವರೆಗೆ ಪಾರಂಪರಿಕ ರಾಜ ಕಾಲುವೆಯ ಹಸಿರೀಕರಣ ಮಾಡಿ 36 ಕಿ.ಮೀ. ಉದ್ದದ ಕಾಲ್ನಡಿಗೆ ಹಾಗೂ ಬೈಸಿಕಲ್ ಪಥ ನಿರ್ಮಾಣ ಮಾಡುವ ಮೂಲಕ ನಗರದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೌಂದರ್ಯಗಳನ್ನು ಉತ್ತಮಪಡಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು ಮೆಟ್ರೊ ರೈಲು ಯೋಜನೆ ಹಂತ-2ನ್ನು ಒಟ್ಟು 30,695 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿದ್ದು, 2024ರ ಜೂನ್ ವೇಳೆಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಸವಾಲುಗಳನ್ನು ಅವಕಾಶವನ್ನಾಗಿ ಪರಿವರ್ತಿಸಲು ಕರ್ನಾಟಕವು ದಿಟ್ಟ ಹೆಜ್ಜೆಯನ್ನಿಟ್ಟಿದೆ. ಪಿಪಿಇ ಕಿಟ್‍ಗಳ ಉತ್ಪಾದನೆಯಿಂದ ಹಿಡಿದು ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ನೀಡುವುದು, ಸೌರ ವಿದ್ಯುತ್. ಆಟೋ ಮೊಬೈಲ್ ಹೀಗೆ ವಿವಿಧವಲಯಗಳಲ್ಲಿ ಸ್ವಾವಲಂಬಿಯಾಗುವ ಗುರಿ ಸಾಧಿಸುವುದು ಸರಕಾರದ ಮುಖ್ಯ ಉದ್ದೇಶ. ಕೋವಿಡ್-19 ಸಮಯದಲ್ಲೂ ರಾಜ್ಯಮಟ್ಟದಲ್ಲಿ 27,000 ಕೋಟಿ ಮೊತ್ತದ, 101 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ’ ಎಂದರು.

ರಾಜಧಾನಿಯ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಬೆಂಗಳೂರು ಸಬ್-ಅರ್ಬನ್ ರೈಲ್ವೆ ಯೋಜನೆಗೆ ವೇಗ ಹೆಚ್ಚಿಸಲಾಗಿದೆ. ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸರಕಾರ ಬದ್ಧವಾಗಿದೆ. ಎಲ್ಲರಿಗೂ ಸರಕಾರದ ಸೌಲಭ್ಯಗಳು ದೊರೆಯಬೇಕಿದೆ. ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ವಿವಿಧ ಕ್ರಮಗಳನ್ನು ಕೈಗೊಂಡು ಅಪರಾಧ ನಿಯಂತ್ರಣ, ಸೈಬರ್ ಅಪರಾಧಗಳ ತಡೆಗೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.

ಆಯುಷ್ಮಾನ್ ಭಾರತ ಯೋಜನೆಯಡಿ 1.31 ಕೋಟಿಗಿಂತಲೂ ಹೆಚ್ಚು ಜನರಿಗೆ ಆರೋಗ್ಯ ಕಾರ್ಡ್ ಗಳನ್ನು ವಿತರಿಸಲಾಗಿದೆ. 1,694 ಕೋಟಿ ವೆಚ್ಚದಲ್ಲಿ ಈವರೆಗೆ 8.5 ಲಕ್ಷ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ ಎಂದರು.

ಕೊರೋನ ಸೋಂಕಿನ ಬಗ್ಗೆ ಜನರು ಆತಂಕ ಅಥವಾ ಭಯಭೀತರಾಗುವ ಅಗತ್ಯವಿಲ್ಲ. ಜಾಗರೂಕತೆಯಿಂದ ಜೀವನ ನಡೆಸಬೇಕು. ರಾಜ್ಯ ಸರಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮ ಹಾಗೂ ಪ್ರಕಟಿಸಿದ ಪ್ಯಾಕೇಜ್‍ಗಳು ಈ ಸಾಂಕ್ರಾಮಿಕ ರೋಗ ತಂದೊಡ್ಡಿದ ಸಂಕಷ್ಟಗಳ ತೀವ್ರತೆ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿವೆ. ಆದರೆ, ಜನರು ಜಾಗೃತಿ ವಹಿಸದಿದ್ದರೆ ಸರಕಾರದ ಯಾವ ಕ್ರಮಗಳೂ ನಿರೀಕ್ಷಿತ ಫಲ ನೀಡುವುದಿಲ್ಲ. ಹೀಗಾಗಿ, ಮಾಸ್ಕ್ ಧರಿಸಿ, ಅಂತರ ಕಾಪಾಡಿ, ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News