ಬೆಂಗಳೂರಿನ ಗಲಾಟೆಗೂ ಬಿಜೆಪಿಗೂ ಸಂಬಂಧವಿಲ್ಲ: ರಮೇಶ ಜಾರಕಿಹೊಳಿ

Update: 2020-08-15 12:09 GMT

ಬೆಳಗಾವಿ, ಆ.15: ಬೆಂಗಳೂರಿನಲ್ಲಿ ನಡೆದ ಗಲಾಟೆಯು ಕಾಂಗ್ರೆಸ್ ಗಲಾಟೆ. ಅದಕ್ಕೂ ನಮ್ಮ ಸರಕಾರ ಅಥವಾ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಟಿಯಲ್ಲಿ ನಡೆದ ಘಟನೆ ಸಂಬಂಧ ಕಾಂಗ್ರೆಸ್‍ನವರು ಸತ್ಯಶೋಧನಾ ಸಮಿತಿ ರಚನೆ ಮಾಡಿದ್ದಾರೆ. ಆದರೆ, ಅವರು ಏನು ವರದಿ ಕೊಡುತ್ತಾರೋ ಕಾದು ನೋಡೋಣ ಎಂದು ತಿಳಿಸಿದರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಭಾವಿತ. ಅವರಿಗೆ ಅನ್ಯಾಯ ಆಗಬಾರದು. ರಕ್ಷಣೆ ನೀಡಲು ಸರಕಾರ ಬದ್ಧವಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಕರಣವನ್ನು ನಿಭಾಯಿಸುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಇದ್ದರೂ ಕಠಿಣ ಕ್ರಮವಾಗಲಿದೆ ಎಂದು ತಿಳಿಸಿದರು.

ಕೃಷ್ಣಾ ನದಿ ತೀರದಲ್ಲಿ ಪ್ರವಾಹ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದೊಂದಿಗೆ ಸಮನ್ವಯ ಮಾಡುತ್ತಿದ್ದೇವೆ. ಈ ಬಾರಿ ನೆರೆಯಿಂದ ಹೆಚ್ಚಿನ ಹಾನಿ ಆಗದಂತೆ ನೋಡಿಕೊಳ್ಳಲಾಗುವುದು. ಇನ್ನೆರಡು ತಿಂಗಳು ನಾವೆಲ್ಲರೂ ಕೊರೋನದ ವಿರುದ್ಧ ಹೋರಾಡಬೇಕು ಎಂದು ಹೇಳಿದರು.

ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಈ ಸೋಂಕು ನಿವಾರಣೆಯಾದ ನಂತರ ಜಿಲ್ಲೆಯ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುವುದು. ಬೆಳಗಾವಿಯಲ್ಲಿ ಹುಬ್ಬಳ್ಳಿ ಮಾದರಿ ಕ್ರೀಡಾಂಗಣ ನಿರ್ಮಿಸಲು ಯೋಜಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಹೋದ ವರ್ಷ ನೆರೆ ಹಾಗೂ ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಒಂದಷ್ಟು ಮಂದಿಗೆ ದಾಖಲೆಗಳ ಕೊರತೆಯಿಂದಾಗಿ ಪರಿಹಾರ ದೊರೆತಿಲ್ಲ. ಇದು ಗಮನಕ್ಕೆ ಬಂದಿದೆ. ತಾಂತ್ರಿಕ ಸಮಸ್ಯೆ ಪರಿಹರಿಸಿ, ಎಲ್ಲರಿಗೂ ಪರಿಹಾರ ಸಿಗುವಂತೆ ಮಾಡಲಾಗುವುದು. ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಸರಕಾರ ನಿಗದಿಪಡಿಸಿರುವ ಶುಲ್ಕವನ್ನಷ್ಟೇ ಪಡೆಯಬೇಕು. ಇದನ್ನು ಉಲ್ಲಂಘಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News