ಪುಲಿಕೇಶಿನಗರ: ಕೋವಿಡ್ ನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ ಯುವಕರು

Update: 2020-08-15 16:56 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.15: ಕೊರೋನ ಸೋಂಕಿನಿಂದ ಮೃತಪಟ್ಟ ಮಹಿಳೆಯೊಬ್ಬರ ಅಂತ್ಯ ಸಂಸ್ಕಾರವನ್ನು ನಡೆಸುವ ಮೂಲಕ ಪುಲಿಕೇಶಿನಗರದ ಯುವಕರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಾಕ್ಸ್‍ಟೌನ್ ನಿವಾಸಿ ಮಲ್ಲಿಕಾ(54) ಎಂಬವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ಶನಿವಾರ ದಿ ಆಲ್‍ಮೈಟಿ ಫೌಂಡೇಷನ್ ಹಾಗೂ ಎಂಟಿಎಫ್ ತಂಡದ ಸದಸ್ಯರು ಹೆಸರುಘಟ್ಟ ಬಳಿಯಿರುವ ಸಿಂಗಾಪುರ ವಿದ್ಯುತ್ ಚಿತಾಗಾರದಲ್ಲಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಲ್ಲಿಕಾ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಅವರ ಮನೆಯವರೆಗೆ ಆಂಬ್ಯುಲೆನ್ಸ್ ಮೂಲಕ ಈ ಸಂಘಟನೆಗಳ ಯುವಕರ ತಂಡ ತಲುಪಿಸಿತು. ಮೃತರ ಕೋವಿಡ್ ಪರೀಕ್ಷಾ ವರದಿ ಬರುವುದು ತಡವಾಗಿದ್ದರಿಂದ ಶೀಥಲೀಕರಣ ಬಾಕ್ಸ್ ನಲ್ಲಿ ಪಾರ್ಥಿವ ಶರೀರವನ್ನು ಇಡುವ ವ್ಯವಸ್ಥೆಯನ್ನು ಇವರು ಮಾಡಿದರು. ಅಂತಿಮವಾಗಿ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದ್ದರಿಂದ, ಬಿಬಿಎಂಪಿಯ ಮಾರ್ಗಸೂಚಿಗಳ ಅನ್ವಯ ಎಲ್ಲ ಸುರಕ್ಷತಾ ವಿಧಾನಗಳನ್ನು ಅನುಸರಿಸಿ, ಕಾಕ್ಸ್‍ಟೌನ್‍ನಿಂದ ಹೆಬ್ಬಾಳದಲ್ಲಿರುವ ವಿದ್ಯುತ್ ಚಿತಾಗಾರದವರೆಗೆ ಪಾರ್ಥಿವ ಶರೀರವನ್ನು ತಂದು ಅಂತ್ಯ ಸಂಸ್ಕಾರ ನಡೆಸಿದರು. ಯುವಕರ ಈ ಕಾರ್ಯಕ್ಕೆ ಮಲ್ಲಿಕಾ ಅವರ ಕುಟುಂಬ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎಂಟಿಎಫ್ ತಂಡದ ಸದಸ್ಯ ಇಮ್ರಾನ್, ಒಂದೆಡೆ ದ್ವೇಷ ಹಂಚುವ ಜನರು ಇರುವಾಗ, ಮತ್ತೊಂದೆಡೆ ಶಾಂತಿಯನ್ನು ಸ್ಥಾಪಿಸುವ ಜನರು ಇದ್ದೆ ಇರುತ್ತಾರೆ. ನಮ್ಮ ಎಂಟಿಎಫ್ ತಂಡ, ದಿ ಆಲ್‍ಮೈಟಿ ಫೌಂಡೇಷನ್ ಜೊತೆ ಸೇರಿ ಮಾನವೀಯತೆಯ ಸಂದೇಶ ಸಾರುವ ಕೆಲಸ ಮಾಡಿದೆ ಎಂದರು.

ಸಿಎಎ, ಎನ್‍ಆರ್‍ಸಿ ಸಂದರ್ಭದಲ್ಲಿ ಹಿಂದೂ, ಮುಸ್ಲಿಮ್, ಸಿಖ್ಖರು, ಕ್ರೈಸ್ತರು ಎಲ್ಲರೂ ಒಂದಾಗಿದ್ದರು. ಕೋವಿಡ್-19 ಬಂದಾಗಲು ಪ್ರತಿಯೊಬ್ಬರೂ ತಮ್ಮ ಶಕ್ತಿ, ಸಾಮರ್ಥ್ಯದಂತೆ ಜಾತಿ, ಧರ್ಮವನ್ನು ನೋಡದೆ ಜನರ ಸೇವೆಗಾಗಿ ಶ್ರಮಿಸಿದ್ದಾರೆ. ಇವತ್ತು ಒಬ್ಬ ಕಿಡಿಗೇಡಿ ಮಾಡಿದ ದುಷ್ಕೃತ್ಯಕ್ಕೆ ಡಿ.ಜೆ.ಹಳ್ಳಿ ಹಾಗೂ ಸುತ್ತಮುತ್ತಲು ಅಂತಹ ಘಟನೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮಾಧ್ಯಮಗಳು ಇವತ್ತು ಜನರ ವಿಶ್ವಾಸ ಕಳೆದುಕೊಂಡಿವೆ. ಸತ್ಯ ಸಂಗತಿಗಳನ್ನು ಜನರಿಗೆ ತೋರಿಸುವ ಕೆಲಸ ಮಾಡುತ್ತಿಲ್ಲ. ಕೇವಲ ದ್ವೇಷ, ಅಸೂಯೆ ಹೆಚ್ಚಾಗುವಂತಹ ಸುದ್ದಿಗಳಿಗೆ ಮಹತ್ವ ಸಿಗುತ್ತಿದೆ. ಆದರೆ, ಸ್ನೇಹ, ಬಾಂಧವ್ಯವನ್ನು ಹೆಚ್ಚಿಸುವಂತಹ ಸುದ್ದಿಗಳಿಗೆ ಯಾಕೆ ಮಹತ್ವ ಸಿಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಆಲ್‍ಮೈಟಿ ಫೌಂಡೇಷನ್ ಮುಖ್ಯಸ್ಥ ರಿಸಾಲತ್ ಝಾ ಟಪ್ಪು ಮಾತನಾಡಿ, ಕೋವಿಡ್ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದಲೂ ಹಿಂದೂ, ಮುಸ್ಲಿಮ್, ಕ್ರೈಸ್ತರು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮಂದಿಯ ಅಂತ್ಯಕ್ರಿಯೆಯನ್ನು ಅವರ ಧಾರ್ಮಿಕ ಸಂಪ್ರದಾಯದಂತೆ ನಾವು ಮಾಡಿದ್ದೇವೆ ಎಂದರು.

ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಶಾಸಕರ ಸಂಬಂಧಿಯೊಬ್ಬ ಮಾಡಿದ ದುಷ್ಕೃತ್ಯಕ್ಕೆ ಅವರಿಗೆ ಹಾಗೂ ಪೊಲೀಸರಿಗೆ ಶಿಕ್ಷೆ ಕೊಡುವುದು ಯಾವ ನ್ಯಾಯ. ಗಲಭೆ ಕಾರಣಕರ್ತರಾದವರಿಗೆ ಕಾನೂನು ರೀತಿ ಕಠಿಣ ಶಿಕ್ಷೆಯಾಗಲಿ. ಆದರೆ, ಅಮಾಯಕರಿಗೆ ತೊಂದರೆಯಾಗುವುದು ಬೇಡ. ಈ ಪ್ರದೇಶದಲ್ಲಿ ಹೆಚ್ಚಿನ ಜನ ದಿನಗೂಲಿ ನೌಕರರು, ಅವರನ್ನೆ ನಂಬಿ ಅವರ ಕುಟುಂಬಗಳಿರುತ್ತವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News