ಬೆಂಗಳೂರು: ರೇಬಿಸ್ ಚುಚ್ಚುಮದ್ದು ನೀಡುವ ವಾಹನ, ಸಹಾಯವಾಣಿಗೆ ಚಾಲನೆ

Update: 2020-08-15 12:40 GMT

ಬೆಂಗಳೂರು, ಆ.15: ಬಿಬಿಎಂಪಿಯ ಪಶುಪಾಲನಾ ವಿಭಾಗದಿಂದ ಶನಿವಾರ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡುವ ಮೂರು ವಾಹನ ಹಾಗೂ ರೇಬಿಸ್ ಸಹಾಯವಾಣಿಗೆ ಮೇಯರ್ ಗೌತಮ್‍ ಕುಮಾರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಮೇಯರ್ ಗೌತಮ್‍ ಕುಮಾರ್, ನಗರದಲ್ಲಿ ನಾಯಿಗಳು ಕಚ್ಚಿದರೆ ಕೂಡಲೇ ಸ್ಥಳಕ್ಕೆ ತೆರಳಿ ನಾಯಿ ಹಿಡಿದು ಚುಚ್ಚುಮದ್ದು ನೀಡಲು ಪಾಲಿಕೆ ಹಾಗೂ ಪ್ರಾಣಿದಯಾ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡುವ ಪಾಲಿಕೆಯ ಮೂರು ವಾಹನ ಹಾಗೂ ಸಹಾಯವಾಣಿ ಸಂಖ್ಯೆ 6364893322ಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ರೇಬಿಸ್ ಮುಕ್ತಗೊಳಿಸಲು ಪಾಲಿಕೆ ವತಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಬಿಬಿಎಂಪಿಯ ಜೊತೆ ಸ್ವಯಂಸೇವಕರಾಗಿ ಸಿ.ಎ.ಆರ್.ಆರ್ ಹಾಗೂ ಡಬ್ಲ್ಯೂ.ವಿ.ಎಸ್ ಪಶುಪಾಲನಾ ಕಾಲೇಜು ಬೆಂಗಳೂರು ಸಹಾಯವಾಣಿ ಕೇಂದ್ರ ಪ್ರಾರಂಭಿಸಿದ್ದು, ನಾಯಿಗಳು ಯಾರಿಗಾದರೂ ಕಚ್ಚುವುದು, ಹುಚ್ಚುನಾಯಿ ಎಂದು ತಿಳಿದಾಗ ಅಥವಾ ಕಚ್ಚುವ ನಾಯಿ ಎಂದು ತಿಳಿದಾಗ ಸಾರ್ವಜನಿಕರು ಪಾಲಿಕೆಯ ಸಹಾಯವಾಣಿಗೆ ಕರೆ ಮಾಡಿದರೆ ಕೂಡಲೇ ಪಶುಪಾಲನಾ ತಂಡವು ಸ್ಥಳಕ್ಕೆ ತೆರಳಿ ನಾಯಿಯನ್ನು ಹಿಡಿದು ಸ್ಥಳೀಯ ಎಬಿಸಿ ಕೇಂದ್ರಗಳಲ್ಲಿ 10 ದಿನಗಳ ಕಾಲ ಐಸೋಲೇಷನ್‍ನಲ್ಲಿ ಇರಿಸಲಾಗುತ್ತದೆ. ರೇಬಿಸ್ ಎಂದು ಖಚಿತ ಪಟ್ಟರೆ ಅದಕ್ಕೆ ಚಿಕಿತ್ಸೆ ನೀಡುವುದು ಹಾಗೂ ಘಟನೆ ನಡೆದಿದ್ದ ಸ್ಥಳದ ಸುತ್ತ-ಮುತ್ತಲಿನ ನಾಯಿಗಳಿಗೆ ವ್ಯಾಕ್ಸಿನೇಷನ್ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಉಪಮೇಯರ್ ರಾಮಮೋಹನರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News