ಕಾವಲ್ ಭೈರಸಂದ್ರ ಹಿಂಸಾಚಾರ ಪ್ರಕರಣ: ದೂರುಗಳ ಸುರಿಮಳೆ, ಪರಿಹಾರ ಒದಗಿಸಲು ಮನವಿ

Update: 2020-08-15 13:23 GMT

ಬೆಂಗಳೂರು, ಆ.15: ಕಾವಲ್ ಭೈರಸಂದ್ರ ಹಿಂಸಾಚಾರ ಪ್ರಕರಣ ಸಂಬಂಧಿಸಿದಂತೆ ಆಸ್ತಿ-ಪಾಸ್ತಿ ನಷ್ಟವಾಗಿದೆ ಎಂದು ಆರೋಪಿಸಿ ಕಳೆದು ಎರಡು ದಿನಗಳಿಂದ ಹಲವರು ದೂರು ಸಲ್ಲಿಸಿ, ಪರಿಹಾರ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇಲ್ಲಿನ ದೇವರಜೀವನ ಹಾಗೂ ಕಾಡುಗೊಂಡನ ಹಳ್ಳಿಯಲ್ಲಿ ಹಲವಾರು ಮನೆಗಳ ಆಸ್ತಿ ಪಾಸ್ತಿ ಹಾಗೂ ವಾಹನಗಳಿಗೆ ಹಾನಿಯಾಗಿದ್ದು, ಈ ಕುರಿತು ಜನರು ಠಾಣೆಗಳಿಗೆ ದೂರು ನೀಡುತ್ತಿದ್ದಾರೆ. ಈ ಸಂಬಂಧ ಕೆ.ಜಿ ಹಳ್ಳಿ ಠಾಣೆಯಲ್ಲಿ 15 ಹಾಗೂ ಡಿ.ಜೆ ಹಳ್ಳಿಯಲ್ಲಿ 27 ಕೇಸ್ ಸೇರಿ ಇದುವರೆಗೂ ಒಟ್ಟು 42 ಎಫ್‍ಐಆರ್ ಗಳು ದಾಖಲಾಗಿವೆ.

ಎಸಿಪಿ ದೂರು: ಉದ್ರಿಕ್ತರ ಗುಂಪು ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ನಡೆಸಿದ ವೇಳೆ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಬಾಣಸವಾಡಿ ಎಸಿಪಿ ಪಿ.ರವಿಪ್ರಸಾದ್ ದೂರು ದಾಖಲಿಸಿದ್ದಾರೆ.

ಅವಹೇಳನಕಾರಿ ಪೋಸ್ಟ್ ಸಂಬಂಧ ಎಫ್‍ಐಆರ್ ದಾಖಲಾಗಿತ್ತು. ಡಿಜೆ ಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದರು. ಆದರೆ ಏಕಾಏಕಿ ನೂರಾರು ಮಂದಿ ಡಿ.ಜೆ.ಹಳ್ಳಿ ಠಾಣೆಯ ಮುಂದೆ ಜಮಾಯಿಸಿ ಮಾರಕಾಸ್ತ್ರಗಳನ್ನ ಹಿಡಿದು ಗಲಾಟೆ ನಡೆಸುತ್ತಿದ್ದರು. ಮಾಹಿತಿ ತಿಳಿದ ಬೆನ್ನಲ್ಲೇ ನಾನು ಹಾಗೂ ಇತರೆ ಸಿಬ್ಬಂದಿ ತೆರಳಿ, ಅಹಿತಕರ ಘಟನೆ ನಡೆಸದಂತೆ ಮನವಿ ಮಾಡಿಕೊಂಡಿದ್ದೆವು. ಆದರೆ ಆರೋಪಿಗಳು ಮನವಿ ಲೆಕ್ಕಿಸದೇ ನನ್ನ ಹಾಗೂ ಠಾಣೆಯಲ್ಲಿದ್ದ ಸಿಬ್ಬಂದಿಯ ಸಮವಸ್ತ್ರ ಹಿಡಿದು ಎಳೆದಾಡಿದರು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದರು ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News