ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಕೋಮುಗಲಭೆ: ಡಿ.ಕೆ.ಶಿವಕುಮಾರ್

Update: 2020-08-15 16:13 GMT

ಬೆಂಗಳೂರು, ಆ.15: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಈ ರೀತಿಯ ಕೋಮುಗಲಭೆಗಳು ನಡೆಯುತ್ತಲೇ ಇವೆ. ಇದಕ್ಕೆ ಬಿಜೆಪಿ ಸರಕಾರವೇ ನೇರ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಶನಿವಾರ ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ 74ನೇ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ನೇರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಿಜೆಪಿ ನಾಯಕರು ಸಚಿವರುಗಳು ಕೋಮು ಗಲಭೆಗೆ ಪ್ರೇರೇಪಿಸುವ ಹೇಳಿಕೆ ನೀಡುತ್ತಿದ್ದು, ಯಾರಾದರೂ ಒಬ್ಬರ ವಿರುದ್ಧವಾದರೂ ಕ್ರಮ ಕೈಗೊಂಡಿದ್ದೀರಾ. ಜನರನ್ನು ಎತ್ತಿಕಟ್ಟುತ್ತಿರುವ ಬಿಜೆಪಿ ನಾಯಕರೇ ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿದ್ದಾರೆ. ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಅವರು ಒತ್ತಾಯ ಮಾಡಿದರು.

ಕಾವಲ್ ಭೈರಸಂದ್ರ ಘಟನೆ ತಡೆಯುವಲ್ಲಿ ಗೃಹ ಇಲಾಖೆ ವೈಫಲ್ಯವಾಗಿದ್ದು, ಅದನ್ನು ಮುಚ್ಚಿಹಾಕಲು ಕಾಂಗ್ರೆಸ್ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಬೆಂಗಳೂರಿನ ಗಲಭೆ ವಿಚಾರದಲ್ಲಿ ಗೃಹ ಸಚಿವರ ಹೇಳಿಕೆ ಗಮನಿಸಿದ್ದೇನೆ. ಗಲಭೆಗೆ ಕಾಂಗ್ರೆಸ್ ಪಕ್ಷದ ಆಂತರಿಕ ಕಾರಣ ಎಂದು ಹೇಳಲು ಹೇಗೆ ಸಾಧ್ಯ? ಈ ರೀತಿಯ ತೀರ್ಮಾನ ತನಿಖಾ ವರಿದಿಗಳು ನೀಡಲು ಮಾತ್ರ ಸಾಧ್ಯ. ಅವರೇನಾದರೂ ತನಿಖಾ ನಡೆಸಿದ್ದೀರಾ ಎಂದು ಪ್ರಶ್ನೆ ಮಾಡಿದರು.

ಬೆದರಿಕೆ ಹಾಕುತ್ತಾರೆ: ಬಿಬಿಎಂಪಿಯ ಕಾಂಗ್ರೆಸ್ ಸದಸ್ಯರಿಗೆ ಪೊಲೀಸರ ಮೂಲಕ ನೋಟಿಸ್ ಕೊಟ್ಟು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಾವು ಸುಮ್ಮನೆ ಕೂರುವುದಿಲ್ಲ. ಇಡೀ ಘಟನೆಗೆ ಅವರ ಪಕ್ಷದ ಕಾರ್ಯಕರ್ತರು ಕಾರಣ. ಅವರ ತಪ್ಪು ಮುಚ್ಚಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಶೃಂಗೇರಿ ಘಟನೆಗೆ ಬಿಜೆಪಿ, ಬಜರಂಗದಳವೇ ಮೂಲ. ಬಿಜೆಪಿ ಇದನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದು, ಇದನ್ನು ಯಾರೂ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News