ಕೊರೋನ ಕೆಟ್ಟ ನಿರ್ವಹಣೆ ಆರೋಪದ ತನಿಖೆ ನಡೆಸಲು ಒಲವು ಹೊಂದಿಲ್ಲ: ಸುಪ್ರೀಂ ಕೋರ್ಟ್

Update: 2020-08-15 16:28 GMT

 ಹೊಸದಿಲ್ಲಿ, ಆ. 15: ದೇಶದಲ್ಲಿ ಕೊರೋನ ಕೆಟ್ಟ ನಿರ್ವಹಣೆ ಆರೋಪದ ಬಗ್ಗೆ ತನಿಖೆ ನಡೆಸಲು ಆಯೋಗ ನಿಯೋಜನೆ ಬಗ್ಗೆ ತಾನು ಒಲವು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಹಾಗೂ ಎಸ್. ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ನೇತೃತ್ವದ ಪೀಠ, ಈ ಆರೋಪಗಳ ಬಗ್ಗೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತು. ಸಾಂಕ್ರಾಮಿಕ ರೋಗದಂತಹ ಸಂದರ್ಭ ಆಡಳಿತದ ನಿರ್ಧಾರಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ನಡೆಸಬಾರದು ಎಂಬ ಬಗ್ಗೆ ಅಭಿಪ್ರಾಯ ಇದೆ ಎಂದು ಅದು ಪ್ರತಿಪಾದಿಸಿತು.

ಕೊರೋನ ವೈರಸ್ ಹರಡುವುದನ್ನು ತಡೆಯಲು ಸಮಯೋಚಿತ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಂಡಿಲ್ಲ. ಈ ವಿಫಲತೆ ಬಗ್ಗೆ ತನಿಖೆ ನಡೆಸಲು 1952ರ ‘ಕಮಿಷನ್ ಆಫ್ ಎಂಕ್ವಯರಿ ಆ್ಯಕ್ಟ್’ ಅಡಿಯಲ್ಲಿ ಸ್ವತಂತ್ರ ಸಮಿತಿ ರಚಿಸಬೇಕು ಎಂದು ಸರಕಾರದ ನಿವೃತ್ತ ಅಧಿಕಾರಿ ಸೇರಿದಂತೆ 6 ಮಂದಿ ದೂರು ಸಲ್ಲಿಸಿದ್ದರು. ಈ ದೂರನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು.

ಸಾಂಕ್ರಾಮಿಕ ರೋಗದ ಬಗ್ಗೆ ಕೇಂದ್ರದ ಸ್ವಂದನ, ಈ ನಿಲುವಿನಿಂದ ನಾಗರಿಕರು ಹಾಗೂ ಅವರ ಬದುಕಿನ ಮೇಲಾದ ಹಾನಿಕಾರಕ ಪರಿಣಾಮ ಸಾರ್ವಜನಿಕ ಪ್ರಾಮುಖ್ಯತೆ ಹೊಂದಿದ ವಿಷಯ. ಅಲ್ಲದೆ, ಕಾಯ್ದೆಯ ಕಲಂ 3ರ ಅಡಿಯಲ್ಲಿ ಆಯೋಗವನ್ನು ನಿಯೋಜಿಸುವುದನ್ನು ಖಾತರಿಪಡಿಸುತ್ತದೆ ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಮೂಲಕ ಸಲ್ಲಿಸಲಾದ ದೂರಿನಲ್ಲಿ ಹೇಳಲಾಗಿದೆ.

ಮಾರ್ಚ್ 25ರಂದು ಜಾರಿಗೆ ತಂದ ಲಾಕ್‌ಡೌನ್ ಹಾಗೂ ಅದನ್ನು ಜಾರಿಗೆ ತಂದ ವಿಧಾನವು ಉದ್ಯೋಗ, ಜೀವನ ಹಾಗೂ ಒಟ್ಟು ಆರ್ಥಿಕತೆ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ ಎಂದು ಅದು ಹೇಳಿದೆ. ತಜ್ಞರು ಅಥವಾ ರಾಜ್ಯ ಸರಕಾರದ ಜೊತೆಗೆ ಸಮಾಲೋಚನೆ ನಡೆಸದೆ ಅವೈಚಾರಿಕವಾಗಿ ಹಾಗೂ ಏಕಪಕ್ಷೀಯವಾಗಿ ಮಾರ್ಚ್ 24ರಂದು ಲಾಕ್‌ಡೌನ್ ಘೋಷಿಸಲಾಗಿದೆ ಎಂದು ಅದು ಆರೋಪಿಸಿದೆ. ಈ ಬಗ್ಗೆ ತನಿಖೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ನಿಯೋಜಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಈ ಮನವಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News