ಬೆಂಗಳೂರಿನಲ್ಲಿ ಒಂದೇ ದಿನ 3,495 ಜನರಿಗೆ ಕೊರೋನ ಸೋಂಕು ದೃಢ, 35 ಸಾವು

Update: 2020-08-15 17:21 GMT

ಬೆಂಗಳೂರು, ಆ.15: ನಗರದಲ್ಲಿ ಶನಿವಾರ ಒಂದೇ ದಿನ 3,495 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 35 ಜನರು ಮೃತರಾಗಿದ್ದಾರೆ.

ನಗರದಲ್ಲಿ ಒಟ್ಟು 87,680 ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,395 ಜನರು ಸೋಂಕಿಗೆ ಬಲಿಯಾಗಿದ್ದಾರೆ. 51,426 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಶನಿವಾರ 2,034 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

100 ಮೀ. ಕಂಟೈನ್ಮೆಂಟ್ ಮಾಡಲು ದಿನಕ್ಕೆ 69,143 ರೂ.

ಸೀಲ್‍ಡೌನ್ ಮಾಡಲು ಬೇಕಾಗುವುದು ಕೇವಲ ನಾಲ್ಕು ತಗಡು, ಒಂದೆರಡು ಕಂಬಗಳು. ಆದರೆ ಇದಕ್ಕೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸೇರಿ ನೂರು ಮೀಟರ್ ಕಂಟೈನ್ಮೆಂಟ್ ಝೊನ್ ಮಾಡುವುದಕ್ಕೆ ದಿನಕ್ಕೆ 69,143 ಸಾವಿರ ರೂ. ಬಾಡಿಗೆಯಂತೆ 14 ದಿನಕ್ಕೆ 7,26,413 ರೂ. ಬಾಡಿಗೆ ಬಿಲ್ ಮಾಡಲಾಗಿದೆ ಎಂದು ವರದಿಯಾಗಿದೆ.

ವಾರ್ಡ್ ನಂಬರ್ 91ರ ಭಾರತಿನಗರದಲ್ಲಿ ಸೋಕಿಂತನ ಮನೆ ಸುತ್ತಮುತ್ತಲು ಬ್ಯಾರಿಕೇಡ್ ಹಾಕಿ ಸೀಲ್‍ಡೌನ್ ಮಾಡಿದ ಗುತ್ತಿಗೆದಾರ, ದಿನಕ್ಕೆ 69,143 ಸಾವಿರ ಬಾಡಿಗೆಯಂತೆ 14 ದಿನಕ್ಕೆ 7,26,413 ರೂ.ಗಳ ಬಿಲ್ ಮಾಡಿದ್ದಾನೆ. ಅಲ್ಲದೇ ಗುತ್ತಿಗೆದಾರನ ಈ ಬಿಲ್‍ಗೆ ಅಧಿಕಾರಿಗಳಿಂದ ಅಂಗೀಕಾರವೂ ಸಿಕ್ಕಿದೆ ಎನ್ನಲಾಗುತ್ತಿದೆ.

ಆರೈಕೆ ಕೇಂದ್ರದಲ್ಲಿ ನೀರಿನ ಅಭಾವ

ಬೆಂಗಳೂರು ಅಂತರ್ ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇದೀಗ ಶುದ್ಧ ಕುಡಿಯುವ ನೀರಿಗೂ ತೊಂದರೆ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕಂಟೇನರ್ ಕ್ಯಾನ್‍ಗಳಿಂದ ಸೋಂಕಿತರಿಗೆ ನೀರಿನ ವ್ಯವಸ್ಥೆ ಮಾಡಿದ್ದು, ಅವ್ಯವಸ್ಥೆಯ ಬಗ್ಗೆ ಕೊರೋನ ಸೋಂಕಿತರು ವಿಡಿಯೋ ಮಾಡಿ ನೀರಿನ ಸಮಸ್ಯೆ ಬಗ್ಗೆ ನೋವು ತೋಡಿಕೊಂಡಿದ್ದಾರೆ. ಅಲ್ಲದೇ ಶೌಚಾಲಯದಲ್ಲೂ ನೀರಿನ ಅಭಾವ ಶುರುವಾಗಿದ್ದು, ಸೋಂಕಿತರು ಪರದಾಟ ನಡೆಸುತ್ತಿದ್ದಾರೆ. ಬಿಸಿ ನೀರಿನ ವ್ಯವಸ್ಥೆಯಲ್ಲಿ ಸಹ ಸಾಕಷ್ಟು ಸಮಸ್ಯೆಯಿದ್ದು, ಕೂಡಲೇ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

ಕೊರೋನ ವಾರಿಯರ್ಸ್ ಗೆ ಸನ್ಮಾನ

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರು ದಕ್ಷಿಣ ವಲಯದ 600 ಕೊರೋನ ವಾರಿಯರ್ಸ್ ಗಳಿಗೆ ಸನ್ಮಾನ ಮಾಡಲಾಯಿತು. ಸದ್ಯ ಕೊರೋನ ಮಾರ್ಗಸೂಚಿ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 600 ಮಂದಿ ಸ್ವಯಂ ಸೇವಕರ ಪೈಕಿ 50 ಮಂದಿಗೆ 6 ಮಂದಿ ಅಸೆಂಬ್ಲಿ ಉಸ್ತುವಾರಿಗಳಿಗೆ ಹಾಗೂ 44 ಮಂದಿ ವಾರ್ಡ್ ಉಸ್ತುವಾರಿಗಳನ್ನು ಸಾಂಕೇತಿಕವಾಗಿ ಸನ್ಮಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News