ಸ್ವಾತಂತ್ರ್ಯದ ಮಹತ್ವ, ಅರಿವನ್ನು ಕೊರೋನ ಜಾಗೃತಗೊಳಿಸಿದೆ: ಹೈಕೋರ್ಟ್ ಸಿಜೆ ಎ.ಎಸ್ ಓಕ

Update: 2020-08-15 18:15 GMT

ಬೆಂಗಳೂರು, ಆ.15: ಸಂವಿಧಾನ ನಮಗೆ ಕೊಟ್ಟಿರುವಂತಹ ಸ್ವಾತಂತ್ರ್ಯದ ಮಹತ್ವ ಮತ್ತು ಅರಿವನ್ನು ಕೊರೋನ ಜಾಗೃತಗೊಳಿಸಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಹೈಕೋರ್ಟ್‍ನಲ್ಲಿ ಆಯೋಜಿಸಿದ್ದ 74ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೊರೋನ ಹಿನ್ನೆಲೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುವುದಕ್ಕೆ, ಮತ್ತೊಬ್ಬರನ್ನು ಭೇಟಿಯಾಗುವುದಕ್ಕೆ, ಸಭೆ ಸಮಾರಂಭವೆಂದು ಒಂದು ಕಡೆ ಸೇರುವುದಕ್ಕೆ ಸಾಧ್ಯವಾಗದಂತ ಪರಿಸ್ಥಿತಿಯಲ್ಲಿದ್ದೇವೆ. ಸಾರ್ವಜನಿಕ ಸಭೆ ಸಮಾರಂಭಗಳನ್ನು ವೆಬ್ ಸೆಮಿನಾರ್‍ಗಳ ಮೂಲಕ ಆಯೋಜಿಸುತ್ತಿದ್ದೇವೆ. ಇವೆಲ್ಲವನ್ನೂ ಗಮನಿಸಿದಾಗ ಸಂವಿಧಾನ ನಮಗೆ ಕೊಟ್ಟಿರುವಂತಹ ಸ್ವಾತಂತ್ರ್ಯದ ಮಹತ್ವ ಅರ್ಥವಾಗುತ್ತದೆ ಎಂದು ಹೇಳಿದರು.

ಕೊರೋನ ಸಂಕಷ್ಟದಲ್ಲೂ ನ್ಯಾಯಾಂಗದ ಅಧಿಕಾರಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿದ್ದಾರೆ. ರಾಜ್ಯದ ನ್ಯಾಯಾಲಯಗಳು ವ್ಯತಿರಿಕ್ತ ಸಂದರ್ಭದಲ್ಲಿಯೂ ಕಕ್ಷೀದಾರರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೆ ವಕೀಲ ಸಮುದಾಯದ ಸಹಕಾರ, ನ್ಯಾಯಾಲಯಗಳ ಅಧಿಕಾರಿ ಮತ್ತು ಸಿಬ್ಬಂದಿ, ರಾಜ್ಯ ಅಡ್ವಕೇಟ್ ಜನರಲ್ ಕಚೇರಿ, ನ್ಯಾಯಾಲಯಗಳಲ್ಲಿರುವ ಆಸ್ಪತ್ರೆ ವೈದ್ಯರು ಸೇರಿದಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿ ದುಡಿಯುತ್ತಿರುವ ಎಲ್ಲರ ಶ್ರಮವೂ ಅಭಿನಂದನಾರ್ಹ ಎಂದರು.

ಕೊರೋನದಿಂದ ನ್ಯಾಯಾಲಯಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅವಕಾಶ ದೊರೆತಿದೆ. ನಾವು ಈಗಾಗಲೇ ಇ-ಫೈಲಿಂಗ್ ಮತ್ತು ಆನ್‍ಲೈನ್‍ನಲ್ಲಿ ಕೋರ್ಟ್ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿ ಮಾಡಿದ್ದೇವೆ. ಎರಡು ಜಿಲ್ಲೆಗಳಲ್ಲಿ ಇ-ಸೇವಾ ಕೇಂದ್ರಗಳನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಸೇವೆಯನ್ನು ಮತ್ತಷ್ಟು ಜಿಲ್ಲೆಗಳಿಗೆ ವಿಸ್ತರಿಸುತ್ತೇವೆ. ಈಗಾಗಲೇ ಇ-ಲೋಕ ಅದಾಲತ್‍ಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News