ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಯುವಕನ ಕೊಲೆ
ಬೆಂಗಳೂರು, ಆ.16: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಯುವಕನೋರ್ವನನ್ನು ಕೊಲೆಗೈದಿರುವ ಘಟನೆ ಇಲ್ಲಿನ ದೊಡ್ಡಬಳ್ಳಾಪುರದ ಹುಲಿಕುಂಟೆ ಬಳಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಹುಲಿಕುಂಟೆಯ ಮಂಜುನಾಥ್(22) ಕೊಲೆಯಾದ ಯುವಕ ಎಂದು ತಿಳಿದುಬಂದಿದೆ.
ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಹುಲಿಕುಂಟೆಯ ರಾಷ್ಟ್ರೀಯ ಹೆದ್ದಾರಿ 207ರಲ್ಲಿ ದುಷ್ಕರ್ಮಿಗಳ ಗುಂಪು ಲಾರಿಗಳಿಂದ ಡಿಸೇಲ್ ಕಳವು ಮಾಡುತ್ತಿದ್ದರು. ಇದೇ ವಿಚಾರಕ್ಕೆ ಲಾರಿ ಚಾಲಕರು ಮತ್ತು ಗುಂಪಿನ ನಡುವೆ ಗಲಾಟೆಯಾಗಿತ್ತು. ಈ ವೈಷಮ್ಯದ ಹಿನ್ನೆಲೆ ನೀರು ಕೇಳುವ ನೆಪದಲ್ಲಿ ದುಷ್ಕರ್ಮಿಗಳ ತಂಡ ಹೆದ್ದಾರಿ ಪಕ್ಕದಲ್ಲಿರುವ ಮಂಜುನಾಥ್ ಮನೆಗೆ ನುಗ್ಗಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮಂಜುನಾಥ್ ಗಂಭೀರವಾಗಿ ಹಲ್ಲೆಗೊಳಗಾದ ಹಿನ್ನೆಲೆಯಲ್ಲಿ ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹಲ್ಲೆಯಲ್ಲಿ ಮೃತ ಮಂಜುನಾಥ್ ತಾಯಿ ಲಲಿತಮ್ಮ ಸಹ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ದೊಡ್ಡಬೆಳವಂಗಲ ಠಾಣಾ ಪೊಲೀಸರು ತಿಳಿಸಿದ್ದಾರೆ.